ಕೇಕ್ ಕತ್ತರಿಸುವ ವೇಳೆ ಗುಂಪುಗಳ ನಡುವೆ ಮಾರಾಮಾರಿ: 10ಕ್ಕೂ ಹೆಚ್ಚು ಮಂದಿಗೆ ಗಾಯ

Update: 2021-01-01 17:21 GMT

ಚಿಕ್ಕಮಗಳೂರು, ಜ.1: ಗ್ರಾ.ಪಂ. ಚುನಾವಣೆ ಗೆದ್ದ ಅಭ್ಯರ್ಥಿ ಮತ್ತು ಸೋತ ಅಭ್ಯರ್ಥಿಯ ಗುಂಪುಗಳ ನಡುವೆ ಮಾರಾಮಾರಿ ನಡೆದು 10ಕ್ಕೂ ಹೆಚ್ಚು ಜನರು ಗಾಯಗೊಂಡು ಆಸ್ಪತ್ರೆ ಸೇರಿರುವ ಘಟನೆ ಗುರುವಾರ ರಾತ್ರಿ ತಾಲೂಕಿನ ಸಗನಿಪುರದಲ್ಲಿ ನಡೆದಿದೆ.

ಗ್ರಾ.ಪಂ.ಚುನಾವಣೆಯಲ್ಲಿ ಸಗನಿಪುರದ ಯತೀಶ್ ಎಂಬವರು ಗೆಲುವು ಸಾಧಿಸಿದ್ದರು. ನಾಗೇಶ್ ಎಂಬುವರು ಪರಾಜಿತರಾಗಿದ್ದರು. ಹೊಸ ವರ್ಷದ ಆಚರಣೆ ಹಿನ್ನೆಲೆಯಲ್ಲಿ ಕೇಕ್ ಕತ್ತರಿಸುವ ಸಂದರ್ಭ ಮಾತಿಗೆ ಮಾತು ಬೆಳೆದು ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ ಎನ್ನಲಾಗಿದೆ.

ಮಾರಾಮಾರಿಯಲ್ಲಿ 10ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿ ನಗರದ ಮಲ್ಲೇಗೌಡ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಲಾಟೆ ವೇಳೆ ಓರ್ವ ವ್ಯಕ್ತಿಯ ಬೆನ್ನಿಗೆ ಚೂರಿಯಿಂದ ಇರಿಯಲಾಗಿದೆ. ಓರ್ವ ವ್ಯಕ್ತಿಯ ಕೈ ಮುರಿದಿದೆ. ಮತ್ತೋರ್ವ ವ್ಯಕ್ತಿಯ ಕೈಗೆ ಗಾಯವಾಗಿದೆ. ಇಬ್ಬರು ವ್ಯಕ್ತಿಗಳಿಗೆ ತೀವ್ರ ಗಾಯಗಳಾಗಿವೆ. ಎಲ್ಲರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ವೇಳೆ ಸಗನಿಪುರ ಮನೆ ಮುಂದೇ ನಿಂತಿದ್ದ ಆಟೋ ಗಾಜು ಪುಡಿ ಮಾಡಲಾಗಿದೆ.

ಚುನಾವಣೆಯಲ್ಲಿ ಗೆದ್ದ ಯತೀಶ್ ಎಂಬವರ ಗ್ಯಾಂಗ್ ನಮ್ಮ ಮೇಲೆ ಹಲ್ಲೆ ಮಾಡಿದೆ. ವೆಂಕಟೇಶ, ಗುಂಡ, ಬೈರೇಶ ಎಂಬವರು ಹಲ್ಲೆ ಮಾಡಿದ್ದಾರೆ. ಮಹಿಳೆಯರ ಮೇಲೂ ಹಲ್ಲೆ ನಡೆದಿದೆ ಎಂದು ಹಲ್ಲೆಗೊಳಗಾದ ಮಲ್ಲೇಶ್ ಅವರು ಆರೋಪಿಸಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News