ಚಿಕ್ಕಮಗಳೂರು: ತರಗತಿಗೆ ನಗುಮುಖದಿಂದ ಹಾಜರಾದ ಎಸೆಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳು

Update: 2021-01-01 17:49 GMT

ಚಿಕ್ಕಮಗಳೂರು, ಜ.1: ರಾಜ್ಯ ಸರಕಾರ ವಿದ್ಯಾಗಮ ಯೋಜನೆಯಡಿಯಲ್ಲಿ ಶಾಲಾ ಕಾಲೇಜು ಆರಂಭಕ್ಕೆ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಶುಕ್ರವಾರ ಕಾಫಿನಾಡಿನಲ್ಲಿ ವಿದ್ಯಾರ್ಥಿಗಳು ಸಂತಸದಿಂದಲೇ ಶಾಲಾ ಕಾಲೇಜುಗಳತ್ತ ಮುಖ ಮಾಡಿದ್ದು, ವಿದ್ಯಾರ್ಥಿಗಳ ಸ್ವಾಗತಕ್ಕೆ ಶಾಲಾ ಕಾಲೇಜುಗಳನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು.

ಜಿಲ್ಲೆಯಲ್ಲಿ ಕೊರೋನ ಸೋಂಕು ಪತ್ತೆಯಾಗುತ್ತಿದ್ದಂತೆ ಸೋಂಕು ತಡೆಗಟ್ಟುವ ದೃಷ್ಟಿಯಿಂದ ಶಾಲಾ ಕಾಲೇಜುಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ ಆನ್‍ಲೈನ್‍ನಲ್ಲಿ ಪಾಠ ಪ್ರವಚನ ನಡೆಸಲಾಗುತ್ತಿತ್ತು. ಕೊರೋನ ಸೋಂಕು ನಡುವೆಯೇ ವಿದ್ಯಾಗಮ ಯೋಜನೆಯಡಿಯಲ್ಲಿ ಶಿಕ್ಷಕರು ವಿದ್ಯಾರ್ಥಿಗಳ ಮನೆ, ಗ್ರಾಮಗಳಿಗೆ ತೆರಳಿ ಪಾಠ ಪ್ರವಚನ ಮಾಡುವಂತೆ ಆದೇಶ ನೀಡಿದರೂ ಕೊರೋನ ಹರಡುವ ಭೀತಿಯಿಂದ ಸ್ಥಗಿತಗೊಳಿಸಲಾಗಿತ್ತು.

ವಿದ್ಯಾರ್ಥಿಗಳು ಕಲಿಕೆಯಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಆನ್ ಲೈನ್ ಶಿಕ್ಷಣಕ್ಕೆ ಸರಕಾರ ಒತ್ತು ನೀಡಿದ್ದು, ಜಿಲ್ಲೆಯ ಮಲೆನಾಡು ಭಾಗದ ವಿದ್ಯಾರ್ಥಿಗಳಿಗೆ ನರಕಯಾತನೆಯಾಗಿ ಪರಿಣಮಿಸಿತ್ತು. ನೆಟ್‍ವರ್ಕ್ ಸಮಸ್ಯೆ, ಮೊಬೈಲ್ ಸಮಸ್ಯೆಯಿಂದ ವಿದ್ಯಾರ್ಥಿಗಳು ಶಿಕ್ಷಣ ವಂಚಿತರಾಗಿದ್ದರು. ಸದ್ಯ ಶಾಲೆಗಳು ಪುರ್ನಾರಂಭಗೊಂಡಿದ್ದು, ವಿದ್ಯಾರ್ಥಿಗಳ ಮುಖದಲ್ಲಿ ಮಂದಹಾಸ ಮೂಡಿಸಿದೆ.

ಶುಕ್ರವಾರ ಬೆಳಗ್ಗೆಯೇ ಸಮವಸ್ತ್ರ ಧರಿಸಿ ಬ್ಯಾಗ್‍ಗಳನ್ನು ಬೆನ್ನಿಗೆ ಏರಿಸಿಕೊಂಡು ವಿದ್ಯಾರ್ಥಿಗಳು ಶಾಲೆಗಳತ್ತಾ ಖುಷಿ ಖುಷಿಯಿಂದ ಮುಖಮಾಡಿದರು. ವಿದ್ಯಾರ್ಥಿಗಳ ಆಗಮನದ ಹಿನ್ನೆಲೆಯಲ್ಲಿ ಶಾಲಾ, ಕಾಲೇಜು ಸಿಬ್ಬಂದಿಗಳು ತಳಿರು ತೋರಣಗಳಿಂದ ಅಲಂಕೃತಗೊಳಿಸಿದ್ದರಿಂದ ಶಾಲಾ ಕಾಲೇಜುಗಳು ನವ ವಧುವಿನಂತೆ ಕಂಗೊಳಿಸುತ್ತಿದ್ದವು.

ಶಾಲಾ ಕಾಲೇಜು ಸಿಬ್ಬಂದಿ ಶಿಕ್ಷಕರು ಶಾಲಾ ಗೇಟ್‍ನಲ್ಲೇ ನಿಂತು ವಿದ್ಯಾರ್ಥಿಗಳನ್ನು ಸ್ವಾಗತಿಸಿದರು. ಕೊರೋನ ಹಿನ್ನೆಲೆಯಲ್ಲಿ ಆಗಮಿಸುವ ಪ್ರತೀ ವಿದ್ಯಾರ್ಥಿಯನ್ನು ಥರ್ಮಲ್ ಸ್ಕ್ಯಾನರ್ ನಿಂದ ತಪಾಸಣೆ ನಡೆಸಿ ಸ್ಯಾನಿಟೈಸರ್ ನೀಡಿ, ಮಾಸ್ಕ್ ಧರಿಸಿದ ನಂತರವೇ ತರಗತಿಗಳಿಗೆ ಕಳಿಸಲಾಯಿತು.

ನಗರದ ಬಸವನಹಳ್ಳಿ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರು ವಿದ್ಯಾರ್ಥಿಗಳಿಗೆ ಗೂಲಾಬಿ ಹೂ ನೀಡಿ ಬರಮಾಡಿಕೊಂಡರು. ಜಿಲ್ಲೆಯಲ್ಲಿ ಸರಕಾರ 41, ಅನುದಾನಿತ 16 ಹಾಗೂ ಅನುದಾನ ರಹಿತ 30 ಕಾಲೇಜು ಸೇರಿದಂತೆ ಒಟ್ಟು 90 ಪದವಿಪೂರ್ವ ಕಾಲೇಜುಗಳಿದ್ದು, ಶುಕ್ರವಾರ ಮೊದಲ ದಿನದ ತರಗತಿಗೆ 7,673 ವಿದ್ಯಾರ್ಥಿಗಳ ಪೈಕಿ, 3,000 ವಿದ್ಯಾರ್ಥಿಗಳು ಹಾಜರಾಗಿದ್ದರು. ತರಗತಿಗೆ ಹಾಜರಾದ ವಿದ್ಯಾರ್ಥಿಗಳಿಂದ ಪೋಷಕರ ಅನುಮತಿ ಪತ್ರ ಪಡೆದು ತರಗತಿಗಳಿಗೆ ಕಳಿಸಲಾಯಿತು.

ಈಗಾಗಲೇ ಆನ್‍ಲೈನ್‍ನಲ್ಲಿ ಶಿಕ್ಷಣ ನೀಡುತ್ತಿದ್ದರು. ಪಠ್ಯಕ್ರಮ ಮೊದಲ ಅಧ್ಯಯ ದಿಂದಲೇ ಪಾಠ ಪ್ರವಚನ ಪ್ರಾರಂಭಿಸಲಾಯಿತು. ಮೊದಲ ದಿನ ಜಿಲ್ಲಾದ್ಯಂತ ಶೇ.40ರಷ್ಟು ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಿದ್ದು, ಥರ್ಮಲ್ ಸ್ಕ್ಯಾನಿಂಗ್, ಸ್ಯಾನಿಟೈಸರ್ ನೀಡಿ, ಮಾಸ್ಕ್ ಧರಿಸಿದ ನಂತರ ತರಗತಿಗಳಿಗೆ ತೆರಳಲು ಅವಕಾಶ ನೀಡಲಾಗಿದೆ. ದೈಹಿಕ ಅಂತರ ಕಾಪಾಡಿಕೊಳ್ಳಲು ಡೆಸ್ಕ್ ವ್ಯವಸ್ಥೆ ಕಲ್ಪಿಸಲಾಗಿತ್ತು.

ಎಸೆಸೆಲ್ಸಿ ತರಗತಿಯೂ ಶುಕ್ರವಾರದಿಂದ ಆರಂಭಗೊಂಡಿದ್ದು, ಜಿಲ್ಲೆಯ ಬೀರೂರು ಬ್ಲಾಕ್ 1,338 ವಿದ್ಯಾರ್ಥಿಗಳಲ್ಲಿ 701, ಚಿಕ್ಕಮಗಳೂರು ಬ್ಲಾಕ್ 3,094 ವಿದ್ಯಾರ್ಥಿ ಗಳಲ್ಲಿ 1,737, ಕಡೂರು ಬ್ಲಾಕ್‍ನಿಂದ 2,406 ವಿದ್ಯಾರ್ಥಿಗಳಲ್ಲಿ 1,341, ಕೊಪ್ಪ ಬ್ಲಾಕ್‍ನಲ್ಲಿ 1,215 ವಿದ್ಯಾರ್ಥಿಗಳಲ್ಲಿ 649, ಮೂಡಿಗೆರೆ ಬ್ಲಾಕ್ 1,274 ವಿದ್ಯಾರ್ಥಿ ಗಳಲ್ಲಿ 559, ನರಸಿಂಹರಾಜಪುರ ಬ್ಲಾಕ್ 922 ವಿದ್ಯಾರ್ಥಿಗಳಲ್ಲಿ 494, ಶೃಂಗೇರಿ 538 ಕ್ಕೆ 350, ತರೀಕೆರೆ ಬ್ಲಾಕ್ 2,181ವಿದ್ಯಾರ್ಥಿಗಳಲ್ಲಿ 890 ವಿದ್ಯಾರ್ಥಿಗಳು ಒಟ್ಟು 12,968 ವಿದ್ಯಾರ್ಥಿಗಳಲ್ಲಿ 6,724 ವಿದ್ಯಾರ್ಥಿಗಳು ಮೊದಲ ದಿನ ನಗುಮೊಗದಲ್ಲೇ ಶಾಲೆಗೆ ಹಾಜರಾದರು.

ಮಾಧ್ಯಮಿಕ ಶಾಲೆಯ 6 ಮತ್ತು 7ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾಗಮದ 2ನೇ ಹಂತದ ತರಗತಿಗಳು ಆರಂಭವಾದವು. ಬೆಳಿಗ್ಗೆ 9 ರಿಂದ ಮಧ್ಯಾಹ್ನದವರೆಗೆ ಕನ್ನಡ, ಇಂಗ್ಲಿಷ್ ಹಿಂದಿ ಭಾಷೆಗಳ ವಿಷಯ ಕುರಿತು ಶಿಕ್ಷಕರು ಬೋಧಿಸಿದರು. ಶನಿವಾರ ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನಗಳ ಪಾಠಗಳು ನಡೆಯಲಿವೆ. ಇನ್ನು ಜಿಲ್ಲೆಯ ಮಾಧ್ಯಮಿಕ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ವಿರಳವಾಗಿತ್ತು. ತರಗತಿಗೆ ಬಂದ ಕೆಲವೇ ಕೆಲ ವಿದ್ಯಾರ್ಥಿಗಳಿಗೆ ಶಿಕ್ಷಕರು ಭವ್ಯ ಸ್ವಾಗತವನ್ನು ಕೋರಿದರು.

ಬೀರೂರು, ಚಿಕ್ಕಮಗಳೂರು, ಕಡೂರು, ಕೊಪ್ಪ, ಮೂಡಿಗೆರೆ, ನರಸಿಂಹರಾಜಪುರ ಮತ್ತು ಶೃಂಗೇರಿ ತಾಲೂಕುಗಳಲ್ಲಿ 6ನೇ ತರಗತಿಯಲ್ಲಿನ ಒಟ್ಟು 14,793 ವಿದ್ಯಾರ್ಥಿಗಳು, 7ನೇ ತರಗತಿಯಲ್ಲಿ 14,962 ವಿದ್ಯಾರ್ಥಿಗಳು, 8ರಲ್ಲಿ 14,786 ವಿದ್ಯಾರ್ಥಿಗಳು, 9ನೇ ತರಗತಿಯಲ್ಲಿ 15021 ಮತ್ತು 10ನೇ ತರಗತಿಯಲ್ಲಿ 14,144 ವಿದ್ಯಾರ್ಥಿಗಳಿದ್ದಾರೆ.

ಸರಕಾರ ಹಾಗೂ ಶಿಕ್ಷಣ ಇಲಾಖೆಗಳ ಸೂಚನೆಯಂತೆ 10ನೇ ತರಗತಿ ಹಾಗೂ ದ್ವಿತೀಯ ಪಿಯು ತರಗತಿಗಳನ್ನು ಆರಂಭಿಸಿದ್ದು ಮಾಸ್ಕ್ ಧರಿಸುವಿಕೆ, ಪೋಷಕರ ಒಪ್ಪಿಗೆ ಪತ್ರ ಕಡ್ಡಾಯಗೊಳಿಸಲಾಗಿದೆ. ಸ್ಯಾನಿಟೈಸರ್ ಸಿಂಪಡಣೆ ಮಾಡಿ ಮುಂಜಾಗ್ರತಾ ಕ್ರಮಕೈಗೊಳ್ಳಲಾಗಿದ್ದು ಕೊರೋನ ನಿವಾರಣೆಗಾಗಿ ದೇವರಲ್ಲಿ ಪ್ರಾರ್ಥಿಸಿ ಹೋಮ ಹವನಗಳನ್ನು ಮಾಡಲಾಗಿದೆ.
- ಎಂ.ಜೆ.ಕಾರ್ತಿಕ್, ಸಾಯಿ ಏಂಜಲ್ಸ್ ಸಂಸ್ಥೆ ಜಂಟಿ ಕಾರ್ಯದರ್ಶಿ.

ಮೊದಲ ದಿನದ ತರಗತಿಗೆ ವಿದ್ಯಾರ್ಥಿಗಳು ಖುಷಿ ಖುಷಿಯಿಂದಲೇ ಹಾಜರಾಗಿದ್ದಾರೆ. ಪಾಠ ಆರಂಭಿಸುವ ಮೊದಲು 10 ನಿಮಿಷಗಳ ಕಾಲ ಕೊರೋನ ಸೋಂಕಿನ ಬಗ್ಗೆ ಜಾಗೃತಿ ಮೂಡಿಸಲು ಉಪನ್ಯಾಸಕರಿಗೆ ಮಾರ್ಗದರ್ಶನ ನೀಡಲಾಗಿದೆ. ವಿದ್ಯಾರ್ಥಿಗಳು ಜಾಗೃತಿ ಪಡೆದು ಅವರ ಪೋಷಕರಿಗೆ ಕೊರೋನ ಸೋಂಕಿನ ಬಗ್ಗೆ ಜಾಗೃತಿ ಮೂಡಿಸಲು ಸಹಕಾರಿಯಾಗಲಿದೆ.
-ಕೆ.ನಾಗರಾಜ್, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ.

9 ತಿಂಗಳಿಂದ ಕೊರೋನದಿಂದ ಪಾಠ ಪ್ರವಚನದಿಂದ ವಂಚಿತರಾಗಿ ಕಷ್ಟವನ್ನು ಅನುಭವಿಸಿದೆವು. ಆನ್‍ಲೈನ್ ಶಿಕ್ಷಣದಿಂದ ಪಠ್ಯಕ್ರಮಗಳು ಸರಿಯಾಗಿ ಅರ್ಥವಾಗುತ್ತಿರಲಿಲ್ಲ, ಸರಕಾರ ಶಾಲಾ ಕಾಲೇಜು ಆರಂಭಿಸಿರುವುದು ಖುಷಿಯಾ ಗಿದೆ. ಕೊರೋನ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಅಧ್ಯಯನ ಶೀಲರಾಗುತ್ತೇವೆ.
-ರಾಜೇಶ್, ಎಂ.ಇ.ಎಸ್. ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ.

ತರಗತಿಗಳಲ್ಲಿ ಪಾಠ ಪ್ರವಚನ ಕಲಿತಷ್ಟು ಸುಲಭವಾಗಿ ಆನ್‍ಲೈನ್ ಶಿಕ್ಷಣದಲ್ಲಿ ಸಾಧ್ಯವಾಗುತ್ತಿರಲಿಲ್ಲ, ಈಗ ಶಾಲೆ ಆರಂಭವಾಗಿದ್ದು, ತುಂಬಾ ಖುಷಿಯಾಗಿದೆ. 9 ತಿಂಗಳುಗಳ ಕಾಲ ಶಾಲೆಯನ್ನು ತುಂಬಾ ಮಿಸ್ ಮಾಡಿಕೊಂಡಿದ್ದು, ಮನೆಯಲ್ಲಿ ಬೋರ್ ಆಗುತ್ತಿತ್ತು.

-ಅಭಿನಯ, ಜ್ಞಾನರಶ್ಮಿ ಶಾಲೆಯ 9ನೇ ತರಗತಿ ವಿದ್ಯಾರ್ಥಿ.

ಇಂದಿನಿಂದ ಶಾಲೆ ಆರಂಭವಾಗಿದ್ದು, ಶಾಲೆಯನ್ನು ತಳಿರು ತೋರಣಗಳಿಂದ ಅಲಂಕರಿಸಿ ಸ್ವಾಗತಿಸಲಾಯಿತು. ಶುಕ್ರವಾರ ಶಾಲೆಗೆ ಕೇವಲ 6 ಮಕ್ಕಳು ಬಂದಿದ್ದರು. ಬಂದ ವಿದ್ಯಾರ್ಥಿಗಳು ಖಷಿಯಿಂದಲೇ ಪಾಠ ಕೇಳಿದರು.
-ಲೋಕೇಶ್ವರಚಾರ್ಯ, ಹಿರಿಯ ಪ್ರಾಥಮಿಕ ಶಾಲೆ ಆಜಾದ್‍ಪಾರ್ಕ್.

ಕಾಲೇಜು ಆರಂಭಕ್ಕೆ ಸರ್ಕಾರ ಅನುಮತಿ ನೀಡಿದ್ದು, ಆತಂಕದ ನಡುವೆಯೇ ಮಗಳನ್ನು ಕಾಲೇಜಿಗೆ ಕಳಿಸಲು ಬಂದಿದ್ದು, ಕಾಲೇಜಿನಲ್ಲಿ ಕೈಗೊಂಡ ಮುಂಜಾಗೃತ ಕ್ರಮಗಳನ್ನು ನೋಡಿದ ಮೇಲೆ ಸ್ವಲ್ಪ ಧೈರ್ಯ ಬಂದಿದೆ. ಸರಕಾರ ಕಾಲೇಜು ಆರಂಭಕ್ಕೆ ಕ್ರಮಕೈಗೊಂಡಿರುವುದು ಉತ್ತಮ ಕ್ರಮವಾಗಿದೆ. ಮಕ್ಕಳ ಭವಿಷ್ಯಕ್ಕಾಗಿ ಎಲ್ಲ ಶಾಲೆಗಳನ್ನೂ ಆರಂಭಿಸಲು ಸರಕಾರ ಕ್ರಮವಹಿಸಬೇಕು.
- ಪೂರ್ಣಿಮಾ, ಸಾಯಿ ಏಂಜಲ್ಸ್ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿಯ ತಾಯಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News