ಟೆಸ್ಟ್ ತಂಡದ ಉಪ ನಾಯಕನಾಗಿ ರೋಹಿತ್ ಶರ್ಮಾ

Update: 2021-01-01 18:14 GMT

ಹೊಸದಿಲ್ಲಿ, ಜ.1: ಹಿರಿಯ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ವೃತ್ತಿಜೀವನದಲ್ಲಿ ಇದೇ ಮೊದಲ ಬಾರಿ ಭಾರತೀಯ ಟೆಸ್ಟ್ ಕ್ರಿಕೆಟ್ ತಂಡದ ಉಪ ನಾಯಕನಾಗಿ ಶುಕ್ರವಾರ ಆಯ್ಕೆಯಾಗಿದ್ದಾರೆ. ರೋಹಿತ್ ಅವರು ಚೇತೇಶ್ವರ ಪೂಜಾರ ಅವರ ಸ್ಥಾನವನ್ನು ತುಂಬಲಿದ್ದಾರೆ. ಮೆಲ್ಬೋರ್ನ್‌ನಲ್ಲಿ ನಡೆದಿದ್ದ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಪೂಜಾರಗೆ ಉಪ ನಾಯಕನ ಜವಾಬ್ದಾರಿ ವಹಿಸಿಕೊಡಲಾಗಿತ್ತು.

ಖಾಯಂ ನಾಯಕ ವಿರಾಟ್ ಕೊಹ್ಲಿ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಕಾರಣ ಅಡಿಲೇಡ್‌ನಲ್ಲಿ ನಡೆದ ಮೊದಲ ಟೆಸ್ಟ್‌ನ ಬಳಿಕ ಸ್ವದೇಶಕ್ಕೆ ವಾಪಸಾಗಿದ್ದಾರೆ. ಹೀಗಾಗಿ ಎರಡನೇ ಪಂದ್ಯಕ್ಕೆ ಪೂಜಾರ ಅವರನ್ನು ಉಪ ನಾಯಕನನ್ನಾಗಿ ನೇಮಿಸಲಾಗಿತ್ತು. ರೋಹಿತ್ ಫಿಟ್ ಆಗಿ ತಂಡವನ್ನು ಸೇರಿದ ಬಳಿಕ ರೋಹಿತ್‌ರನ್ನು ಉಪನಾಯಕನನ್ನಾಗಿ ಆಯ್ಕೆಮಾಡಲು ತಂಡದ ಆಡಳಿತ ಈ ಮೊದಲೇ ಸ್ಪಷ್ಟ ನಿರ್ಧಾರಕ್ಕೆ ಬಂದಿತ್ತ್ತು ಎಂದು ಹಿರಿಯ ಬಿಸಿಸಿಐ ಅಧಿಕಾರಿ ಪಿಟಿಐಗೆ ತಿಳಿಸಿದ್ದಾರೆ.

 ಸಿಡ್ನಿ ಹೊಟೇಲ್‌ನಲ್ಲಿ 14 ದಿನಗಳ ಕ್ವಾರಂಟೈನ್ ಅವಧಿಯನ್ನು ಪೂರೈಸಿರುವ ರೋಹಿತ್ ಬುಧವಾರ ಮೆಲ್ಬೋರ್ನ್‌ನಲ್ಲಿ ಭಾರತ ತಂಡವನ್ನು ಸೇರಿಕೊಂಡರು. ರೋಹಿತ್‌ಗೆ ಭವ್ಯ ಸ್ವಾಗತವನ್ನು ಕೋರಲಾಯಿತು.

ಕಳಪೆ ಫಾರ್ಮ್‌ನಲ್ಲಿರುವ ಮಯಾಂಕ್ ಅಗರ್ವಾಲ್ 11ರ ಬಳಗದಿಂದ ಕೈಬಿಡಲ್ಪಟ್ಟರೆ ರೋಹಿತ್ ಅವರು ಶುಭಮನ್ ಗಿಲ್‌ರೊಂದಿಗೆ ಇನಿಂಗ್ಸ್ ಆರಂಭಿಸುತ್ತಾರೋ ಅಥವಾ ಮಧ್ಯಮ ಕ್ರಮಾಂಕದಲ್ಲಿ ಹನುಮ ವಿಹಾರಿ ಬದಲಿಗೆ ಆಡಲಿದ್ದಾರೋ ಎಂಬ ಕುರಿತು ಸ್ಪಷ್ಟತೆ ಇಲ್ಲವಾಗಿದೆ.

 ರೋಹಿತ್ ಗುರುವಾರದಿಂದ ನೆಟ್ ಅಭ್ಯಾಸ ಆರಂಭಿಸಿದ್ದಾರೆ. ಹೊಸ ವರ್ಷದ ವಿರಾಮದ ಬಳಿಕ ಶನಿವಾರದಿಂದ ಟೀಮ್ ಇಂಡಿಯಾ ಸರ್ವ ಸನ್ನದ್ಧವಾಗಿ ಅಭ್ಯಾಸ ಆರಂಭಿಸಲಿದೆ.

ರೋಹಿತ್ 46ಕ್ಕೂ ಅಧಿಕ ಸರಾಸರಿಯಲ್ಲಿ 32 ಟೆಸ್ಟ್ ಪಂದ್ಯಗಳಲ್ಲಿ 2,141 ರನ್ ಗಳಿಸಿದ್ದಾರೆ. ಆರು ಶತಕಗಳನ್ನು ಸಿಡಿಸಿದ್ದಾರೆ. 2019ರಲ್ಲಿ ದಕ್ಷಿಣ ಆಫ್ರಿಕದ ವಿರುದ್ಧ 212 ರನ್ ಗಳಿಸಿದ್ದು, ಇದು ಅವರ ವೈಯಕ್ತಿಕ ಶ್ರೇಷ್ಠ ಸ್ಕೋರ್ ಆಗಿದೆ.

ಭಾರತೀಯ ಕ್ರಿಕೆಟ್ ತಂಡ ಜನವರಿ 7ರಿಂದ ಸಿಡ್ನಿಯಲ್ಲಿ ಆರಂಭವಾಗಲಿರುವ ಹೊಸ ವರ್ಷದ ಟೆಸ್ಟ್ ಪಂದ್ಯವನ್ನು ಆಡಲು ಜನವರಿ 5ರಂದು ಸಿಡ್ನಿಗೆ ತೆರಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News