ಕೋವಿಡ್‌ ಲಸಿಕೆ ಪಡೆಯುವ ವಿಧಾನ, ಸ್ಥಳ, ನೋಂದಣಿ ಪ್ರಕ್ರಿಯೆ ಹೇಗೆ?: ಇಲ್ಲಿದೆ ಸಂಪೂರ್ಣ ವಿವರ

Update: 2021-01-03 16:57 GMT

ಹೊಸದಿಲ್ಲಿ: ಭಾರತದಲ್ಲಿ ಒಟ್ಟು ಎರಡು ಕೋವಿಡ್‌ ಲಸಿಕೆಗಳಿಗೆ ಅನುಮತಿ ನೀಡಲಾಗಿದ್ದು, ಆಸ್ಟ್ರೆಝೆಂಕಾ, ಆಕ್ಸ್‌ ಫರ್ಡ್‌ ಯುನಿವರ್ಸಿಟಿಯ ಕೋವಿಶೀಲ್ಡ್‌ ಹಾಗೂ ಹೈದರಾಬಾದ್‌ ಮೂಲದ ಭಾರತ್‌ ಬಯೋಟೆಕ್‌ ನ ಕೋವ್ಯಾಕ್ಸಿನ್‌ ಲಸಿಕೆಗಳಿಗೆ ಡಿಸಿಜಿಐ ಅನುಮತಿ ನೀಡಿದೆ. ಈ ಲಸಿಕೆಯನ್ನು ನೀಡುವ ವಿಧ ಹೇಗೆ? ಮೊದಲ ಪ್ರಾಶಸ್ತ್ಯ ಯಾರಿಗೆ? ನೋಂದಣಿಯ ವಿಧಾನಗಳೇನು? ಮುಂತಾದ ಪ್ರಶ್ನೆಗೆ ಇಲ್ಲಿದೆ ಉತ್ತರ.

ಮೊದಲಿಗೆ ಲಸಿಕೆಯನ್ನು ಪಡೆಯುವವರು ಯಾರು?

ಮೊದಲು ಕೋವಿಡ್‌ ಲಸಿಕೆಯನ್ನು ಆರೋಗ್ಯ ಕಾರ್ಯಕರ್ತರು, ಆರೋಗ್ಯ ವಲಯದ ಮುಂಚೂಣಿ ಕಾರ್ಮಿಕರು, 50 ವರ್ಷಕ್ಕಿಂತ ಹೆಚ್ಚಿನ ಪ್ರಾಯ ಹೊಂದಿರುವವರು, ಸೋಂಕು ಪೀಡಿತರು ಕ್ರಮವಾಗಿ ಲಸಿಕೆಯನ್ನು ಪಡೆಯಲಿದ್ದಾರೆ. ಕೊನೆಗೆ ಎಲ್ಲಾ ನಾಗರಿಕರಿಗೂ ಲಸಿಕೆ ಹಾಕಲಾಗುವುದು.

ಸೋಂಕಿನ ಹರಡುವಿಕೆ ಮತ್ತು ಜನಸಂಖ್ಯಾ ಪ್ರಮಾಣದ ಆಧಾರದಲ್ಲಿ 50 ಮತ್ತು 60 ವರ್ಷ ವಯಸ್ಸಿನವರ ಮಧ್ಯೆ ಮತ್ತೊಂದು ವಿಭಾಗವಾಗಿ ವಿಂಗಡಿಸುವ ಸಾಧ್ಯತೆಯೂ ಇದೆ. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿನ ಮತದಾರರ ಪಟ್ಟಿಯು 50 ಮತ್ತು 60 ವರ್ಷ ವಯಸ್ಸಿನವರನ್ನು ಪತ್ತೆ ಹಚ್ಚುವಲ್ಲಿ ಸಹಕಾರಿಯಾಗಲಿದೆ ಎಂದು ವರದಿ ತಿಳಿಸಿದೆ.

ಒಬ್ಬರಿಗೆ ಎಷ್ಟು ಡೋಸ್‌ ಪಡೆಯಬಹುದು?

ಒಬ್ಬರಿಗೆ ಎರಡು ಡೋಸ್‌ ಪಡೆಯಬಹುದಾಗಿದೆ. ಒಮ್ಮೆ ಲಸಿಕೆ ನೀಡಿ 28 ದಿನಗಳ ಬಳಿಕ ಇನ್ನೊಂದು ಡೋಸ್‌ ಪಡೆಯಬಹುದಾಗಿದೆ.

ಲಸಿಕೆಯ ಅಡ್ಡ ಪರಿಣಾಮಗಳೇನು?

ತೀವ್ರವಾದ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ ಎಂದು ಈಗಾಗಲೇ ಸಾಬೀತಾಗಿದೆ. ಕೆಲವರಿಗೆ ಮಾತ್ರ ಸಣ್ಣ ಮಟ್ಟದ ಜ್ವರ, ಮೈ ಕೈ ನೋವು ಅಥವಾ ತುರಿಕೆ ಉಂಟಾಗುವ ಸಾಧ್ಯತೆಗಳಿವೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

ನೋಂದಣಿ ಪ್ರಕ್ರಿಯೆ ಹೇಗೆ?

ಕೋವಿಡ್‌ ಲಸಿಕೆಗಾಗಿ ನಾವು ಸ್ವತಃ ನೋಂದಣಿ ಮಾಡಿಕೊಳ್ಳಬೇಕು.

1. ಮೊದಲಿಗೆ ಕೋವಿನ್‌ (Co-WIN) ವೆಬ್‌ ಸೈಟ್‌ ನಲ್ಲಿ ನೋಂದಣಿ ಮಾಡಿಕೊಳ್ಳಬೇಕು.
2. ನಿಮ್ಮ ಫೋಟೊ ಸಹಿತ ಗುರುತಿನ ಚೀಟಿಯನ್ನು ಅಪ್ಲೋಡ್‌ ಮಾಡಬೇಕು. ಆಧಾರ್‌ ಕಾರ್ಡ್‌, ಡ್ರೈವಿಂಗ್‌ ಲೈಸೆನ್ಸ್‌, ಆರೋಗ್ಯ ವಿಮೆಯ ಸ್ಮಾರ್ಟ್‌ ಕಾರ್ಡ್‌, ಕಾರ್ಮಿಕರ ಗುರುತಿನ ಚೀಟಿ, MNAREGA ಕಾರ್ಡ್‌, ಲೋಕಸಭಾ, ವಿಧಾನಸಭಾ, ವಧಾನ ಪರಿಷತ್‌ ಸದಸ್ಯರಿಗೆ ನೀಡಲಾಗುವ ಗುರುತಿನ ಚೀಟಿ, ಪ್ಯಾನ್‌ ಕಾರ್ಡ್‌, ಅಂಚೆ ಕಚೇರಿ ಅಥವಾ ಬ್ಯಾಂಕ್‌ ಪಾಸ್‌ ಬುಕ್‌, ಪಿಂಚಣಿ ದಾಖಲೆಗಳು, ಸಾರ್ವಜನಿಕ ನಿಯಂತ್ರಣ ಸಂಸ್ಥೆಗಳು ಅಥವಾ ಸರಕಾರಿ ಸಂಸ್ಥೆಗಳಲ್ಲಿ ಕೆಲಸ ಮಾಡುವ ಗುರುತಿನ ಚೀಟಿ, ಮತದಾನ ಗುರುತಿನ ಚೀಟಿ ಮುಂತಾದವುಗಳನ್ನು ಅಪ್ಲೋಡ್‌ ಮಾಡುವ ಮೂಲಕ ನೋಂದಣಿ ಮಾಡಿಕೊಳ್ಳಬಹುದು.

3. ಆಧಾರ್‌ ಕಾರ್ಡ್‌ ಅಪ್ಲೋಡ್‌ ಮಾಡುವ ವೇಳೆ ವೆರಿಫಿಕೇಶನ್‌ ಗಾಗಿ ಕೋವಿನ್‌ ವೆಬ್‌ ಸೈಟ್‌ ಬಯೋಮೆಟ್ರಿಕ್‌, ಒಟಿಪಿ ಅಥವಾ ಜನಸಂಖ್ಯಾ ದೃಢೀಕರಣ ಸಂಖ್ಯೆಯನ್ನು ಕೇಳಬಹುದು. ನಿಮಗೆ ಸುಲಭವಾದ ಆಯ್ಕೆಯನ್ನು ಆಯ್ದುಕೊಳ್ಳಬಹುದಾಗಿದೆ.

4. ನೋಂದಣಿ ಮಾಡಿದ ಬಳಿಕ ಲಸಿಕೆ ನೀಡುವ ಸಮಯ ಮತ್ತು ದಿನಾಂಕವನ್ನು ನೀಡಲಾಗುವುದು.

5. ಲಸಿಕಾ ಕೇಂದ್ರದಲ್ಲಿ ನೋಂದಣಿ ಮಾಡಲು ಅವಕಾಶಗಳಿಲ್ಲ. ನೋಂದಣಿ ಮಾಡಿದವರಿಗೆ ಮಾತ್ರ ಪ್ರಥಮ ಆದ್ಯತೆ ನೀಡಲಾಗುತ್ತದೆ.

6. ಕೇಂದ್ರ ಮತ್ತು ರಾಜ್ಯ ಸರಕಾರ ಆಯೋಜಿಸುವ ಈ ಸಂಪೂರ್ಣ ಪದ್ಧತಿಯನ್ನು ಜಿಲ್ಲಾಡಳಿತವು ವಹಿಸಿಕೊಳ್ಳಬೇಕಾಗುತ್ತದೆ.

ಕೋ-ವಿನ್‌ ಸಿಸ್ಟಂ ಎಂದರೇನು?

ಕೋವಿಡ್‌ ೧೯ ವ್ಯಾಕ್ಸಿನ್‌ ಇಂಟೆಲಿಜೆನ್ಸ್‌ ನೆಟ್‌ ವರ್ಕ್‌ (ಕೋ-ವಿನ್)‌ ಪದ್ಧತಿಯು ಸಂಪೂರ್ಣವಾದ ತಯಾರಿಯೊಂದಿಗೆ, ಬಹಳ ಎಚ್ಚರಿಕೆ ವಹಿಸಿ ಭಾರತದ ಜನರಿಗೆ ಕೋವಿಡ್-‌೧೯ ಲಸಿಕೆಯನ್ನು ನೀಡಲು ಬಳಸಲಿರುವ ವಿಧಾನವಾಗಿದೆ. ಈ ವಿಧಾನದ ಮೂಲಕ ಕೋವಿಡ್‌ ಲಸಿಕೆ ಪಡೆದವರ ಮಾಹಿತಿಯನ್ನು ಶೇಖರಿಸಿಡಲಾಗುತ್ತದೆ ಹಾಗೂ ಲಸಿಕೆ ನೀಡಿಕೆಯ ಪ್ರಾರಂಭದಿಂದ ಅಂತ್ಯದವರೆಗೆ ಇದೇ ಡಿಜಿಟಲ್‌ ವಿಧಾನವನ್ನು ಅನುಸರಿಸಲಾಗುತ್ತದೆ.

ಲಸಿಕೆ ನೀಡುವವರು ಯಾರು?

ಲಸಿಕೆ ನೀಡಿಕೆ ತಂಡದಲ್ಲಿ ಈ ಕೆಳಗಿನವರಿರುತ್ತಾರೆ,

1. ಲಸಿಕೆ ನೀಡುವ ಅಧಿಕಾರಿ (ಎಂಬಿಬಿಎಸ್‌/ಬಿಡಿಎಸ್)‌, ನರ್ಸ್‌, ಔಷಧಿಯ ಕುರಿತು ವಿವರವಿರುವ ಫಾರ್ಮಾಸಿಸ್ಟ್‌, ಸಹಾಯಕ ನರ್ಸ್‌, ಮಹಿಳಾ ಆರೋಗ್ಯಾಧಿಕಾರಿ, ಹಾಗೂ ಆಡಳಿತದ ಅನುಮತಿಗೆ ಒಳಪಟ್ಟ ವ್ಯಕ್ತಿಗಳು

2. ಲಸಿಕಾ ಅಧಿಕಾರಿ -೧: ಪೊಲೀಸ್‌, ಹೋಮ್‌ ಗಾರ್ಡ್‌, ಸೈನಿಕರು, ಎನ್‌ಸಿಸಿ ಕಾರ್ಯಕರ್ತರು, ರಾಷ್ಟ್ರೀಯ ಸೇವಾ ಯೋಜನೆ ಎನ್ನೆಸ್ಸೆಸ್‌ ನ ಕಾರ್ಯಕರ್ತರು ನೇಹರು ಯುವ ಕೇಂದ್ರ ಸಂಘಟನೆಯ ಕಾರ್ಯಕರ್ತರ ಪೈಕಿ ಓಂದು ಅಥವಾ ಹೆಚ್ಚಿನ ಜನರು ನೋಂದಣಿ ಮಾಡಿದವರನ್ನು ಪರಿಶೀಲಿಸಲಿದ್ದಾರೆ. ಕೇಂದ್ರದ ಆಗಮನ ಸ್ಥಳದಲ್ಲಿ ಇವರ ಉಪಸ್ಥಿತಿ ಇರುತ್ತದೆ.

3. ಲಸಿಕಾ ಅಧಿಕಾರಿ-೨: ಗುರುತಿನ ಚೀಟಿಗಳನ್ನು ಪರಿಶೀಲಿಸುವವರು

4. ಲಸಿಕಾ ಅಧಿಕಾರಿ-3 ಮತ್ತು 4: ಇಬ್ಬರು ಸಹಾಯಕ ಸಿಬ್ಬಂದಿಯು ಲಸಿಕಾ ಕೇಂದ್ರದ ಜನದಟ್ಟನೆಯ ನಿಯಂತ್ರಣಕ್ಕಾಗಿ ನೇಮಕಗೊಂಡಿರುತ್ತಾರೆ. ಲಸಿಕೆ ನೀಡಿದ 30 ನಿಮಿಷದವರೆಗೆ ಆಗಮಿಸಿದವರ ಆರೈಕೆಯೂ ಇವರ ಜವಾಬ್ದಾರಿಯಾಗಿರುತ್ತದೆ.

ಎಲ್ಲಿ ಮತ್ತು ಯಾವಾಗ ಲಸಿಕೆಯನ್ನು ಪಡೆಯಬಹುದು?

1. 100 ಮಂದಿಗೆ ಒಂದು ಅವಧಿಯಲ್ಲಿ ಲಸಿಕೆಯನ್ನು ಪಡೆಯಬಹುದಾಗಿದೆ.
2. ಮೊದಲಿಗೆ ಆರೋಗ್ಯ ಕಾರ್ಯಕರ್ತರು ಮುಂಚೂಣಿ ಕಾರ್ಮಿಕರು ಲಸಿಕೆಯನ್ನು ಪಡೆಯಲಿದ್ದಾರೆ. ಸರಕಾರಿ ಆರೋಗ್ಯ ಕೇಂದ್ರಗಳಲ್ಲಿ ಮತ್ತು ಜಿಲ್ಲಾಡಳಿತವು ಅನುಮೋದಿಸಿದ ಜಾಗಗಳಲ್ಲಿ ಲಸಿಕಾ ಕಾರ್ಯಕ್ರಮ ನಡೆಸಲಾಗುತ್ತದೆ.
3. ಅತೀ ಹೆಚ್ಚು ಜನರು ಇರುವ ಪ್ರದೇಶಗಳಲ್ಲಿ ಚಲಿಸುವ ಲಸಿಕಾ ಕೇಂದ್ರಗಳನ್ನು ಸ್ಥಾಪಿಸುವ ಸಾಧ್ಯತೆ ಇದೆ.
4. ರಾಜ್ಯಗಳು ದಿನಾಂಕ ಮತ್ತು ಸಮಯವನ್ನು ತೀರ್ಮಾನಿಸಲಿದೆ.
5. ಈ ಪದ್ಧತಿಯು ಬಹುತೇಕ ಚುನಾವಣಾ ಪದ್ಧತಿಯನ್ನೇ ಹೋಲುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News