​ಹಿಮಾಚಲ ಪ್ರದೇಶದಲ್ಲಿ 1400ಕ್ಕೂ ಹೆಚ್ಚು ವಲಸೆ ಹಕ್ಕಿಗಳ ಸಾವು

Update: 2021-01-04 03:38 GMT

ಶಿಮ್ಲಾ : ಹಿಮಾಚಲ ಪ್ರದೇಶದ ಕಂಗ್ರಾ ಜಿಲ್ಲೆಯ ಪಾಂಗ್ ಅಣೆಕಟ್ಟು ಪ್ರದೇಶದಲ್ಲಿ 1400ಕ್ಕೂ ಹೆಚ್ಚು ವಲಸೆ ಹಕ್ಕಿಗಳು ಸಾವಿಗೀಡಾಗಿರುವ ಹಿನ್ನೆಲೆಯಲ್ಲಿ ರಕ್ಷಿತಾರಣ್ಯ ಪ್ರದೇಶದಲ್ಲಿ ಎಲ್ಲ ಪ್ರವಾಸಿ ಚಟುವಟಿಕೆಗಳನ್ನು ಸ್ಥಗಿತಗೊಳಿಸಲು ಸ್ಥಳೀಯಾಡಳಿತ ಸೂಚಿಸಿದೆ. ಮಂದಿನ ಆದೇಶದವರೆಗೆ ಎಲ್ಲ ಪ್ರವಾಸಿ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ ಎಂದು ಸ್ಥಳೀಯಾಡಳಿತ ಪ್ರಕಟಿಸಿದೆ.

ಈ ಪಕ್ಷಿಗಳ ಸಾವಿಗೆ ಕಾರಣ ಪತ್ತೆ ಮಾಡುವ ನಿಟ್ಟಿನಲ್ಲಿ ವನ್ಯವಿಭಾಗದ ಅಧಿಕಾರಿಗಳು, ಸತ್ತ ಹಕ್ಕಿಗಳಿಂದ ಪಡೆದ ಮಾದರಿಗಳನ್ನು ಪರೀಕ್ಷೆಗಾಗಿ ಭೋಪಾಲ್‌ನಲ್ಲಿರುವ ಪ್ರಾಣಿ ರೋಗ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದಾರೆ.

ಡಿಸೆಂಬರ್ 29ರಂದು ಪಾಂಗ್ ಡ್ಯಾಮ್ ಲೇಕ್ ವನ್ಯಧಾಮದ ಉದ್ದಗಲಕ್ಕೂ ಸತ್ತ ಹಕ್ಕಿಗಳಿಗಾಗಿ ಶೋಧ ನಡೆಸುವಂತೆ ಆದೇಶಿಸಲಾಗಿತ್ತು. ಶೋಧ ಕಾರ್ಯಾಚರಣೆ ವೇಳೆ 421 ಹಕ್ಕಿಗಳ ಕಳೇಬರ ನಗ್ರೋತಾದ ಧಮೇಟಾ ಮತ್ತು ಗುಲ್ಗಾರಾ ವ್ಯಾಪ್ತಿಯ ಮಜ್ಹರ್, ಭತರಿ, ಸಿಹಾಲ್, ಜಗ್ನೋಲಿ, ಛಟ್ಟಾ, ಧಮೇಟಾ ಮತ್ತು ಖುತೇರಾ ಪ್ರದೇಶಗಳಲ್ಲಿ ಕಂಡುಬಂದಿತ್ತು. ಆ ಬಳಿಕ ಮತ್ತಷ್ಟು ಹಕ್ಕಿಗಳು ಸತ್ತಿರುವುದು ಬೆಳಕಿಗೆ ಬಂದಿತ್ತು.

ವಿಕೋಪ ನಿರ್ವಹಣೆ ಕಾಯ್ದೆ- 2005ರ ಅನ್ವಯ ಕಂಗ್ರಾ ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಪ್ರಜಾಪತಿ ಆದೇಶ ಹೊರಡಿಸಿ, ಮುಂದಿನ ಆದೇಶದ ವರೆಗೆ ಪಾಂಗ್ ಡಾಮ್ ಸರೋವರದ ಒಂದು ಕಿಲೋಮೀಟರ್ ಸರಹದ್ದಿನಲ್ಲಿ ಯಾವುದೇ ಜನಸಂಚಾರ ಅಥವಾ ಸಾಕುಪ್ರಾಣಿಗಳನ್ನು ಮೇಯಿಸಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇಡೀ ಪ್ರದೇಶವನ್ನು ಅಲರ್ಟ್ ಝೋನ್ ಆಗಿ ಘೋಷಿಸಲಾಗಿದೆ. ಮತ್ತೆ 9 ಕಿಲೋಮೀಟರ್ ಪ್ರದೇಶ ಕಣ್ಗಾವಲು ಪ್ರದೇಶವಾಗಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News