ಅಭಿವೃದ್ಧಿ ರಾಷ್ಟ್ರಗಳಿಗೆ ಸವಾಲೊಡ್ಡಿ ಕೊರೋನ ಲಸಿಕೆ ಆವಿಷ್ಕರಿಸಿದ್ದು ಭಾರತೀಯರಿಗೆ ಹೆಮ್ಮೆ: ಸಚಿವ ಸುಧಾಕರ್

Update: 2021-01-04 13:06 GMT

ಬೆಂಗಳೂರು, ಜ. 4: ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಸವಾಲೊಡ್ಡಿ ನಮ್ಮ ದೇಶದಲ್ಲೇ ಶೀಘ್ರವಾಗಿ ಕೊರೋನ ಸೋಂಕು ನಿಯಂತ್ರಣ ಲಸಿಕೆ ಆವಿಷ್ಕಾರ ಮಾಡಿದ್ದು, ಇದು ಭಾರತೀಯರಿಗೆ ಹೆಮ್ಮೆಯ ವಿಚಾರ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಸಿಕೆ ಆವಿಷ್ಕಾರಕ್ಕಾಗಿ ಶ್ರಮವಹಿಸಿದ ವಿಜ್ಞಾನಿಗಳು ಮತ್ತು ಪ್ರೋತ್ಸಾಹಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದಿಸುತ್ತೇನೆ. ಅಭಿವೃದ್ಧಿ ರಾಷ್ಟ್ರಗಳಿಗೆ ಸವಾಲೊಡ್ಡಿ ನಮ್ಮದೇ ಆದ ಕೊರೋನ ಲಸಿಕೆ ಕಂಡುಹಿಡಿಯಲಾಗಿದೆ. ಈ ಲಸಿಕೆಯನ್ನು ಮೊದಲಿಗೆ ಕೊರೋನ ಯೋಧರಿಗೆ ನೀಡಬಹುದು ಎಂಬ ಅಭಿಪ್ರಾಯ ಇದೆ. 3ನೆ ಹಂತದ ಕ್ಲಿನಿಕಲ್ ಟ್ರಯಲ್ ನಡೆದ ಬಳಿಕ ಅಂತಿಮವಾಗಿ ಪರವಾನಗಿ ದೊರೆಯಬಹುದು. ನಾನು ಸಂಬಂಧಪಟ್ಟ ವಿಜ್ಞಾನಿಗಳೊಂದಿಗೆ ಮಾತನಾಡಿದ್ದು, ಇದು ಯಶಸ್ವಿಯಾದ ಲಸಿಕೆ ಹಾಗೂ ಯಾವುದೇ ಅಡ್ಡ ಪರಿಣಾಮ ಇಲ್ಲ ಎಂದು ತಿಳಿದುಬಂದಿದೆ. ಇದು ವಿಶ್ವಕ್ಕೆ ಭಾರತೀಯರ ಕೊಡುಗೆ ಎಂದು ಬಣ್ಣಿಸಿದರು.

ಸರಕಾರಿ ವ್ಯವಸ್ಥೆಯಡಿ ಲಸಿಕೆ ವಿತರಣೆ ಮಾಡಲು ಸಿದ್ಧತೆ ಪೂರ್ಣಗೊಂಡಿದೆ. ಖಾಸಗಿ ಆಸ್ಪತ್ರೆಗಳ ಸಹಕಾರ ಬೇಕಿದ್ದರೆ ಅದನ್ನೂ ಪಡೆಯುವ ಬಗ್ಗೆ ಚಿಂತಿಸಲಾಗುವುದು ಎಂದ ಅವರು, ಯುನೈಟೆಡ್ ಕಿಂಗ್‍ಡಮ್‍ನಿಂದ ಬಂದವರು ಮತ್ತು ಅವರ ಸಂಪರ್ಕಿತರಲ್ಲಿ ಒಟ್ಟು 48 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದೆ. ಈ ಪೈಕಿ 34 ಮಂದಿ ಯು.ಕೆ.ಯಿಂದ ಹಿಂದಿರುಗಿದವರಾಗಿದ್ದಾರೆ. ಇವರೆಲ್ಲರ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದ್ದು, 10 ಮಂದಿಯಲ್ಲಿ ರೂಪಾಂತರಗೊಂಡ ಕೊರೋನ ವೈರಸ್ ಇರುವುದು ಪತ್ತೆಯಾಗಿದೆ. ಇವರಿಗೆ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದು, ಯಾರಿಗೂ ರೋಗ ತೀವ್ರವಾಗಿ ಕಾಡಿಲ್ಲ ಎಂದು ಡಾ.ಕೆ.ಸುಧಾಕರ್ ಇದೇ ವೆಳೆ ತಿಳಿಸಿದರು.

ಯು.ಕೆ.ಯಿಂದ ಹಿಂದಿರುಗಿದವರಲ್ಲಿ 75 ಮಂದಿಯ ಸಂಪರ್ಕ ಪತ್ತೆಯಾಗಿಲ್ಲ. ಇದನ್ನು ಅದಷ್ಟು ಶೀಘ್ರವೇ ಪತ್ತೆ ಮಾಡಿ ಎಂದು ಬಿಬಿಎಂಪಿ ಹಾಗೂ ಗೃಹ ಇಲಾಖೆಗೆ ಕೋರಲಾಗಿದೆ. 75 ಮಂದಿಯಲ್ಲಿ ಮೂವರು ಮಾತ್ರ ವಿದೇಶಿ ವಿಳಾಸ ಹೊಂದಿದ್ದಾರೆ. ಕೆಲ ವಿದೇಶಿ ಪ್ರಜೆಗಳ ಪಾಸ್‍ಪೋರ್ಟ್ ನಲ್ಲಿ ಮಾಹಿತಿ ಕೊರತೆ, ಸಿಮ್ ಸಮಸ್ಯೆಯಿಂದಾಗಿ ಸಂಪರ್ಕ ಪತ್ತೆಯಾಗದೇ ಇರಬಹುದು ಎಂದು ಡಾ.ಸುಧಾಕರ್ ಸ್ಪಷ್ಟಪಡಿಸಿದರು.

ಕೇಂದ್ರ ಸರಕಾರ ಎಲ್ಲ ವಿಚಾರಗಳನ್ನು ಪರಿಶೀಲಿಸಿ ಸರಿಯಾದ ನಿರ್ಣಯ ಕೈಗೊಂಡಿದೆ. ವಿಮಾನ ಹಾರಾಟಕ್ಕೆ ಸಂಬಂಧಿಸಿದಂತೆಯೂ ಮಾರ್ಗಸೂಚಿ ಇದೆ ಎಂದ ಅವರು, ರೂಪಾಂತರ ಕೊರೋನ ವೈರಸ್ ಸೋಂಕು ಹರಡುವುದನ್ನು ತಪ್ಪಿಸಲು ಸರಕಾರ ಕಟ್ಟುನಿಟ್ಟಿನ ಕ್ರಮ ವಹಿಸಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News