ತರಾತುರಿ ಕೋವಿಡ್ ಲಸಿಕೆಯ ವಿವಾದ

Update: 2021-01-04 19:30 GMT

ಕೊರೋನ ಸೋಂಕು ತಡೆಗೆ ಇಂಗ್ಲೆಂಡ್‌ನ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯ ಹಾಗೂ ಜಾಗತಿಕ ಫಾರ್ಮಾಸ್ಯುಟಿಕಲ್ ಸಂಸ್ಥೆ ಆ್ಯಸ್ಟ್ರಝೆನೆಕ ಜಂಟಿಯಾಗಿ ಅಭಿವೃದ್ಧಿ ಪಡಿಸಿರುವ ಕೋವಿಶೀಲ್ಡ್ ಹಾಗೂ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ಲಸಿಕೆ ಕೋವ್ಯಾಕ್ಸಿನ್‌ನ ತುರ್ತು ಮತ್ತು ನಿರ್ಬಂಧಿತ ಬಳಕೆಗೆ ಭಾರತೀಯ ಔಷಧ ಮಹಾ ನಿಯಂತ್ರಕರು ಅನುಮೋದನೆ ನೀಡಿದ್ದಾರೆ. ಆದರೆ ಅವರು ಸಮ್ಮತಿ ನೀಡಿದ ಬೆನ್ನಲ್ಲೇ ಈ ಅವಸರದ ಲಸಿಕೆಯ ಬಗ್ಗೆ ವ್ಯಾಪಕ ವಿವಾದ ಉಂಟಾಗಿದೆ. ಈ ಲಸಿಕೆಗಳ ಪ್ರಯೋಜನ ಮತ್ತು ಸುರಕ್ಷತೆಯ ಬಗ್ಗೆ ಪ್ರಶ್ನೆಗಳು ಉದ್ಭವವಾಗಿವೆ. ಇದರ ಪ್ರಯೋಜನದ ಕುರಿತು ಹಿರಿಯ ವಿಜ್ಞಾನಿಗಳು, ಪ್ರತಿಪಕ್ಷ ನಾಯಕರು ಸಂದೇಹ ವ್ಯಕ್ತಪಡಿಸಿದ್ದಾರೆ. ಇಂತಹ ಸೂಕ್ಷ್ಮ ವಿಷಯದಲ್ಲಿ ಯಾವುದಕ್ಕೂ ಆತುರ ಪಡುವುದು ಸರಿಯಲ್ಲ ಎಂದು ಹೇಳಿದರೆ ಹೀಗೆ ಹೇಳಿದವರನ್ನೇ ದೇಶ ವಿರೋಧಿಗಳು ಎಂದು ಹಳೆಯ ಚಾಳಿಯನ್ನು ಬಿಜೆಪಿ ನಾಯಕ ನಡ್ಡಾ ಮುಂದುವರಿಸಿರುವುದು ಸಮರ್ಥನೀಯವಲ್ಲ.

ಕೊರೋನ ಇಳಿಮುಖವಾಗಿದ್ದರೂ ಅದರ ಅಪಾಯವನ್ನು ಇನ್ನೂ ತಳ್ಳಿ ಹಾಕುವಂತಿಲ್ಲ. ಎಲ್ಲ ವೈರಾಣುಗಳಂತೆ ಇದೂ ಕೂಡ ರೂಪಾಂತರಗೊಳ್ಳುವುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಹಾಗೆಂದು ಶೇಕಡಾ 60ರಷ್ಟು ಮಾತ್ರ ಪ್ರಯೋಜನಕಾರಿಯೆನ್ನಲಾದ ಲಸಿಕೆಗೆ ಅನುಮೋದನೆ ನೀಡಿರುವುದು ಕೂಡ ಸರಿಯಲ್ಲ. ಕೊರೋನ ಲಸಿಕೆಗೆ ಯಾರ ವಿರೋಧವೂ ಇಲ್ಲ. ಆದಷ್ಟು ಬೇಗ ಅದು ದೊರೆತು ಜನಸಾಮಾನ್ಯರ ಆತಂಕ ನಿವಾರಣೆಯಾಗಲೆಂಬುದೇ ಎಲ್ಲರ ಬಯಕೆಯಾಗಿದೆ. ಹಾಗೆಂದು ತರಾತುರಿಯಲ್ಲಿ ಲಸಿಕೆಗಳಿಗೆ ಸಮ್ಮತಿ ನೀಡಿ ಅದನ್ನು ರಾಜಕೀಯ ಹಿತಾಸಕ್ತಿಗಾಗಿ ಬಳಸಿಕೊಳ್ಳುವುದನ್ನು ಕೂಡ ಒಪ್ಪಲು ಕಷ್ಟವಾಗುತ್ತದೆ.

ಈಗ ಅಭಿವೃದ್ಧಿಪಡಿಸಿರುವ ಕೊರೋನ ಲಸಿಕೆಗಳಿಂದ ನಪುಂಸಕತ್ವ ಉಂಟಾಗಬಹುದು ಎಂಬ ಸಮಾಜವಾದಿ ಧುರೀಣ ಅಶುತೋಷ್ ಸಿನ್ಹಾ ಅವರ ಆತಂಕವನ್ನೂ ತಳ್ಳಿ ಹಾಕಲಾಗುವುದಿಲ್ಲ. ಜಾಗತಿಕವಾಗಿ ಒಪ್ಪಿತವಾದ ಮೂರನೇ ಹಂತದ ಪ್ರಯೋಗಗಳ ಮಾನದಂಡಗಳನ್ನು ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್‌ಗಾಗಿ ಸಡಿಲಿಸಲಾಗಿರುವ ಬಗ್ಗೆ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಆಕ್ಷೇಪಿಸಿರುವುದರಲ್ಲಿ ತಪ್ಪೇನೂ ಇಲ್ಲ. ಕೋವ್ಯಾಕ್ಸಿನ್‌ನ ಮೂರನೇ ಹಂತದ ಪ್ರಯೋಗ ನಡೆದಿಲ್ಲ. ಈಗ ನೀಡಿರುವ ಅನುಮೋದನೆ ಆತುರದ ಕ್ರಮ ಮತ್ತು ಅಪಾಯಕಾರಿಯಾಗಿದೆ. ಎಲ್ಲ ಪ್ರಯೋಗಗಳು ಪೂರ್ಣಗೊಳ್ಳುವವರೆಗೆ ಲಸಿಕೆಗಳನ್ನು ಬಳಕೆಗೆ ಬಿಡಬಾರದು ಎಂಬ ಅನೇಕರ ಅಭಿಪ್ರಾಯ ಸರಿಯಾಗಿದೆ. ಯಾವುದೇ ಲಸಿಕೆಯ ಪ್ರಯೋಗಗಳು ಮತ್ತು ಫಲಿತಾಂಶದ ದತ್ತಾಂಶಗಳನ್ನು ಬಹಿರಂಗ ಪಡಿಸಿ ಜನರಲ್ಲಿ ವಿಶ್ವಾಸ ಮೂಡಿಸಬೇಕಾಗುತ್ತದೆ. ಜಾಗತಿಕ ಮಟ್ಟದಲ್ಲಿ ಇದೇ ಕ್ರಮ ಅನುಸರಿಸಲಾಗುತ್ತದೆ ಎಂದು ಕಮ್ಯುನಿಸ್ಟ್ ನಾಯಕ ಸೀತಾರಾಮ ಯೆಚೂರಿ ಅವರು ಹೇಳಿರುವುದು ಕೂಡ ಸೂಕ್ತವಾಗಿದೆ.

ಕೊರೋನದಂತಹ ಮಾರಕ ವೈರಾಣು ತಡೆಯ ಬಗ್ಗೆ ಎಲ್ಲರಿಗೂ ಕಾಳಜಿ ಇದೆ. ಆದರೆ ಪ್ರಧಾನಿ ಮೋದಿಯವರು ಮಾಡಿದ್ದೆಲ್ಲ ಸರಿ ಎಂದು ಹಿಂದೆ ಚಪ್ಪಾಳೆ ತಟ್ಟಿದಂತೆ, ಗಂಟೆ ಜಾಗಟೆ ಬಾರಿಸಿದಂತೆ, ದೀಪ ಹಚ್ಚಿದಂತೆ, ಲಾಕ್‌ಡೌನ್ ಮಾಡಿದಂತೆ ಲಸಿಕೆಗಳನ್ನು ಸರಿಯಾದ ಪ್ರಯೋಗ ಮಾಡದೆ ಬಳಸಲು ಬಿಡುವುದನ್ನು ಒಪ್ಪಲು ಹೇಗೆ ಸಾಧ್ಯ?

ತುರ್ತು ಬಳಕೆಗೆ ಕೋವಿಡ್ ಲಸಿಕೆಗಳನ್ನು ಬಳಸಲು ಒಪ್ಪಿಗೆ ನೀಡಿದ್ದರೂ ಇದರ ಪರಿಣಾಮದ ಬಗ್ಗೆ ಖಚಿತ ಮಾಹಿತಿ ಇಲ್ಲ. ಕೋವಿಶೀಲ್ಡ್ ಲಸಿಕೆ ಶೇಕಡಾ 70.4ರಷ್ಟು ಪ್ರಯೋಜನಕಾರಿ ಎಂದು ವಿದೇಶದಲ್ಲಿ ನಡೆಸಿದ ಪ್ರಯೋಗದಿಂದ ಸಾಬೀತಾಗಿದೆ ಎಂದು ಔಷಧ ಮಹಾನಿಯಂತ್ರಕರು ಹೇಳಿದ್ದರೂ ಇದರ ಪ್ರಯೋಗದ ವಿಧಾನದ ಬಗ್ಗೆ ಅನೇಕ ಸಂಶೋಧಕರು ಸಂದೇಹ ವ್ಯಕ್ತಪಡಿಸಿದ್ದಾರೆ. ಈ ಲಸಿಕೆಯ ಸೇವನೆಯ ಪ್ರಮಾಣದ ಬಗ್ಗೆಯೂ ಗೊಂದಲಗಳಿವೆ. ಎರಡು ಪೂರ್ತಿ ಡೋಸ್‌ಗಳನ್ನು ಒಮ್ಮೆಲೇ ನೀಡಬೇಕೇ ಅಥವಾ ಮೊದಲು ಅರ್ಧ ಡೋಸ್ ನೀಡಿ ಎರಡನೇ ಬಾರಿ ಪೂರ್ತಿ ಡೋಸ್ ನೀಡಬೇಕೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಕೆಲವು ಷರತ್ತುಗಳ ಮೇಲೆ ಕೋವಿಶೀಲ್ಡ್ ಲಸಿಕೆಗೆ ಅನುಮತಿ ನೀಡಲಾಗಿದೆ ಎಂದು ಔಷಧ ನಿಯಂತ್ರಕರು ಹೇಳಿದ್ದರೂ ಆ ಷರತ್ತುಗಳೇನು ಎಂಬ ಬಗ್ಗೆ ಯಾರಿಗೂ ಮಾಹಿತಿಯಿಲ್ಲ. ಇದಕ್ಕೆ ಅನುಮತಿ ನೀಡಿರುವ ವಿಧಾನಗಳ ಬಗೆಗೂ ಅನೇಕ ಪ್ರಶ್ನೆಗಳು ಉದ್ಭವವಾಗಿವೆ. ಅಲ್ಲದೆ ಕೋವ್ಯಾಕ್ಸಿನ್ ಲಸಿಕೆಯ ಪರಿಣಾಮಗಳ ಬಗ್ಗೆಯೂ ಮಾಹಿತಿ ಅಲಭ್ಯವಾಗಿರುವಾಗ ಔಷಧ ನಿಯಂತ್ರಕ ಸಂಸ್ಥೆಯೊಂದು ಹೇಗೆ ಇದಕ್ಕೆ ಅನುಮತಿ ನೀಡಲು ಸಾಧ್ಯ? ಎಂಬ ಪ್ರಶ್ನೆಗೆ ಉತ್ತರ ಬೇಕಾಗಿದೆ. ಇದಿಷ್ಟೇ ಅಲ್ಲ ಕೊರೋನ ರೂಪಾಂತರಿತ ವೈರಸ್‌ನಿಂದ ಉಂಟಾಗಬಹುದಾದ ತುರ್ತು ಪರಿಸ್ಥಿತಿಯನ್ನು ಎದುರಿಸಲು ಹೆಚ್ಚುವರಿಯಾಗಿ ಕೋವ್ಯಾಕ್ಸಿನ್ ಲಸಿಕೆಗೆ ಅನುಮತಿ ನೀಡಲಾಗಿದೆ ಎಂಬ ವಾದದ ಔಚಿತ್ಯದ ಬಗ್ಗೆ ವಿಜ್ಞಾನಿಗಳು ಪ್ರಶ್ನಿಸಿರುವುದು ಸೂಕ್ತವಾಗಿದೆ. ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಸರಿಯಾದ ಪ್ರಯೋಗಗಳಿಲ್ಲದೆ ತರಾತುರಿಯಲ್ಲಿ ಲಸಿಕೆಗೆ ಅನುಮೋದನೆ ನೀಡಿರುವುದು ಸರಿಯಾದ ಕ್ರಮವಲ್ಲ ಎಂಬುದು ಅನೇಕ ಹಿರಿಯ ವಿಜ್ಞಾನಿಗಳ ಅಭಿಪ್ರಾಯವಾಗಿದೆ.

ಇದು ಕೋಟ್ಯಂತರ ಜನರ ಬದುಕಿನ ಪ್ರಶ್ನೆ. ಲಸಿಕೆಯೊಂದು ಅನುಮತಿ ಪಡೆದು ಬಂದಿದೆ ಎಂದು ನಮ್ಮ ಜೀವಗಳನ್ನು ಪ್ರಯೋಗಕ್ಕೆ ಒಡ್ಡಿಕೊಳ್ಳಲು ಆಗುವುದಿಲ್ಲ. ಇದರಲ್ಲಿ ಪಾರದರ್ಶಕತೆ ಇದ್ದರೆ ಈ ಪ್ರಶ್ನೆ ಉದ್ಭವಿಸುತ್ತಿರಲಿಲ್ಲ. ಆದರೆ ಎಲ್ಲವೂ ಅವಸರವಸರವಾಗಿ ನಡೆದಿರುವುದರಿಂದ ದೇಶದ ಜನರು ಇದನ್ನು ಮುಕ್ತ ಮತ್ತು ನಿರ್ಭಯವಾಗಿ ಸ್ವೀಕರಿಸುತ್ತಾರೆಂದು ಹೇಳಲು ಸಾಧ್ಯವಿಲ್ಲ.

ಅದೇನಿದ್ದರೂ ಕೋವಿಡ್ ಲಸಿಕೆ ಸಿದ್ಧಪಡಿಸಿರುವ ಬಗ್ಗೆ ತಕರಾರಿಲ್ಲ, ಆದರೆ ಈ ಬಗ್ಗೆ ಜನಸಾಮಾನ್ಯರಲ್ಲಿ ಉಂಟಾಗಬಹುದಾದ ಸಂದೇಹಗಳ ನಿವಾರಣೆಗೆ ಸರಕಾರ ಮುಂದಾಗುವುದು ಸೂಕ್ತ.
ಪ್ರಯೋಗ ಪ್ರಕ್ರಿಯೆ ಪೂರ್ಣಗೊಳ್ಳುವ ಮೊದಲೇ ಲಸಿಕೆಗಳಿಗೆ ಅನುಮೋದನೆ ನೀಡುವ ಆತುರದ ನಿರ್ಧಾರದಿಂದ ಜನಸಾಮಾನ್ಯರ ಆರೋಗ್ಯದ ಮೇಲೆ ಉಂಟಾಗಬಹುದಾದ ಯಾವುದೇ ದುಷ್ಪರಿಣಾಮಗಳಿಗೆ ಹೊಣೆ ಯಾರು? ದೇಶದ ಜನರಲ್ಲಿ ಉಂಟಾಗಿರುವ ಆತಂಕಕಾರಿ ಸಂದೇಹಗಳನ್ನು ಸರಕಾರ ಮೊದಲು ನಿವಾರಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News