ಕಾಂಗ್ರೆಸ್ ಚುನಾವಣೆಯ ಖರ್ಚಿಗೆ ನೀಡಿದ್ದ ಹಣವನ್ನು ಮುಖ್ಯಮಂತ್ರಿ ನಿಧಿಗೆ ದೇಣಿಗೆ ನೀಡಿದ ಊರ್ಮಿಳಾ

Update: 2021-01-05 11:48 GMT

ಮುಂಬೈ: ನಟಿ ಹಾಗೂ ರಾಜಕಾರಣಿ ಊರ್ಮಿಳಾ ಮಾತೋಂಡ್ಕರ್ 2019ರ ಲೋಕಸಭಾ ಚುನಾವಣೆಗಾಗಿ ಮಹಾರಾಷ್ಟ್ರ ಕಾಂಗ್ರೆಸ್ ನಿಂದ ಸ್ವೀಕರಿಸಿದ್ದ 50 ಲಕ್ಷ ರೂ. ಮೊತ್ತದಲ್ಲಿ ಉಳಿದಿರುವ 20 ಲಕ್ಷ ರೂ.ವನ್ನು ಮಹಾರಾಷ್ಟ್ರದ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಿದ್ದಾರೆ.

ಕಳೆದ ಕೆಲವು ಸಮಯದ ಹಿಂದೆ ಕಾಂಗ್ರೆಸ್ ಪಕ್ಷವನ್ನುತ್ಯಜಿಸಿದ್ದ ಊರ್ಮಿಳಾ ಶಿವಸೇನೆಯನ್ನು ಸೇರಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿ ಮುಂಬೈ ಉತ್ತರ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ನಲ್ಲಿ ಸ್ಪರ್ಧಿಸಿದ್ದರು. ಆದರೆ ಬಿಜೆಪಿ ಅಭ್ಯರ್ಥಿ ಗೋಪಾಲ ಶೆಟ್ಟಿಯ ವಿರುದ್ಧ ಸೋತಿದ್ದರು.

ಭಾರತದ ಚುನಾವಣಾ ಆಯೋಗದ ಮಾರ್ಗಸೂಚಿಯ ಪ್ರಕಾರ ಸರಕಾರಿ ಬ್ಯಾಂಕಿನ ಕಾಂದಿವಲಿ ಶಾಖೆಯಲ್ಲಿ ಚುನಾವಣಾ ವೆಚ್ಚಕ್ಕಾಗಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಶೋಕ್ ಸುತ್ರಾಲೆ ಅವರೊಂದಿಗೆ ಜಂಟಿ ಖಾತೆಯನ್ನು ತೆರೆದಿದ್ದರು.

ಚುನಾವಣಾ ಆಯೋಗದ ಪ್ರಕಾರ ಅಭ್ಯರ್ಥಿಯೊಬ್ಬ ಚುನಾವಣೆಯಲ್ಲಿ 70 ಲಕ್ಷ ರೂ. ತನಕ ವೆಚ್ಚ ಮಾಡಬಹುದು. ಎಪ್ರಿಲ್ 2019ರಲ್ಲಿ ಮಹಾರಾಷ್ಟ್ರ ಕಾಂಗ್ರೆಸ್ ಊರ್ಮಿಳಾ ಅವರ ಜಂಟಿಖಾತೆಗೆ 50 ಲಕ್ಷ ರೂ. ವರ್ಗಾಯಿಸಿತ್ತು.

2019ರ ಚುನಾವಣೆಯಲ್ಲಿ ಊರ್ಮಿಳಾ 30 ಲಕ್ಷ ರೂ. ವ್ಯಯಿಸಿದ್ದರು.  2020ರ ಜುಲೈ ತನಕ ಖಾತೆಯಲ್ಲಿ 20.4 ಲಕ್ಷ ರೂ. ಉಳಿದಿತ್ತು. ಜುಲೈನಲ್ಲಿ ಇದೇ ಖಾತೆಯಿಂದ 20 ಲಕ್ಷ ರೂ.ವನ್ನು ಊರ್ಮಿಳಾ ಅವರು ಮುಖ್ಯಮಂತ್ರಿ ಪರಿಹಾರ ನಿಧಿಗೆ ವರ್ಗಾಯಿಸಿದ್ದರು.

“ಚುನಾವಣೆಗಳಲ್ಲಿ ಸ್ಪರ್ಧಿಸಲು ಅಭ್ಯರ್ಥಿಗೆ ಹಣ ನೀಡಲಾಗುತ್ತದೆ. ಆ ಹಣವು ಪಕ್ಷಕ್ಕೆ ಸೇರಿದ್ದಾಗಿದೆ. ಎಷ್ಟೇ ಮೊತ್ತ ಉಳಿದಿದ್ದರೂ ಅದನ್ನು ಪಕ್ಷಕ್ಕೆ ವಾಪಸ್ ನೀಡಬೇಕು. ಸಾಮಾನ್ಯವಾಗಿ ಈ ವಿಚಾರದಲ್ಲಿ ಅವರು ಹಾಗೆ ಮಾಡಬೇಕಾಗಿತ್ತು’’ ಎಂದು ಎಂಪಿಸಿಸಿ ಖಜಾಂಚಿ ಸುರೇಶ್ ಶೆಟ್ಟಿ ತಿಳಿಸಿದ್ದಾರೆ.

ರಾಜ್ಯ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಬಾಲಾಸಾಹೇಬ್ ಥೋರಟ್ ಅನುಮತಿ ಪಡೆದು ಹಣವನ್ನು ದಾನ ನೀಡಿದ್ದಾಗಿ ಊರ್ಮಿಳಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News