ಡಿನೋಟಿಫಿಕೇಶನ್ ಪ್ರಕರಣ ರದ್ದುಗೊಳಿಸಲು ಹೈಕೋರ್ಟ್ ನಕಾರ: ಮತ್ತೊಂದು ಸಂಕಷ್ಟದಲ್ಲಿ ಸಿಎಂ ಬಿಎಸ್‌ವೈ

Update: 2021-01-05 11:39 GMT

ಬೆಂಗಳೂರು, ಜ.4: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ವಿರುದ್ಧ ಆರ್.ಟಿ.ನಗರದ ಗಂಗೇನಹಳ್ಳಿ ವ್ಯಾಪ್ತಿಯ ಮಠದಹಳ್ಳಿ ಬಡಾವಣೆ ಪ್ರದೇಶದಲ್ಲಿ 1 ಎಕರೆ 11 ಗುಂಟೆ ಜಮೀನು ಡಿನೋಟಿಫಿಕೇಶನ್ ಆರೋಪ ಸಂಬಂಧ ದಾಖಲಾಗಿರುವ ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಎಫ್‌ಐಆರ್ ರದ್ದು ಕೋರಿ ಬಿಎಸ್‌ವೈ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಅವರಿದ್ದ ಏಕಸದಸ್ಯ ನ್ಯಾಯಪೀಠ, ಅರ್ಜಿ ವಜಾಗೊಳಿಸಿ ಆದೇಶಿಸಿದೆ. ಜತೆಗೆ ಬಿಎಸ್‌ವೈ ವಿರುದ್ಧದ ಡಿನೋಫಿಕೇಷನ್ ಪ್ರಕರಣವನ್ನು ತನಿಖೆ ನಡೆಸುವಂತೆ ಲೋಕಾಯುಕ್ತ ಪೊಲೀಸರಿಗೆ ಆದೇಶ ನೀಡಿದೆ.

2015ರಲ್ಲಿ ಸಾಮಾಜಿಕ ಕಾರ್ಯಕರ್ತ ಜಯಕುಮಾರ್ ಹಿರೇಮಠ ಎನ್ನುವವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಬಿಎಸ್‌ವೈ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಹೀಗಾಗಿ, ಹೈಕೋರ್ಟ್ ಬಿಎಸ್‌ವೈ ವಿರುದ್ಧ ಡಿನೋಟಿಫಿಕೇಷನ್ ಪ್ರಕರಣವನ್ನು ತನಿಖೆ ನಡೆಸುವಂತೆ ಲೋಕಾಯುಕ್ತಕ್ಕೆ ಆದೇಶ ಹೊರಡಿಸಿದೆ.

ಈ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಎರಡನೆ ಆರೋಪಿಯಾಗಿದ್ದಾರೆ.

ಬೆಳ್ಳಂದೂರು ಪ್ರಕಣದಲ್ಲೂ ಬಿಎಸ್‌ವೈಗೆ ಹಿನ್ನೆಡೆ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ವಿರುದ್ಧ ದಾಖಲಾಗಿರುವ ಬೆಳ್ಳಂದೂರು ಬಳಿಯ ಜಮೀನು ಡಿನೋಟಿಫಿಕೇಶನ್ ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ 2020ರ ಡಿ.22ರಂದು ವಜಾಗೊಳಿಸಿ ಆದೇಶಿಸಿತ್ತು. ಹೀಗಾಗಿ, ಬಿ.ಎಸ್.ಯಡಿಯೂರಪ್ಪಗೆ ಈಗ ಎರಡು ಡಿನೋಫಿಕೇಶನ್ ಪ್ರಕರಣ ಸುತ್ತು ಹಾಕಿಕೊಂಡಿದೆ. ಇದೇ ಪ್ರಕರಣದಲ್ಲಿ ಮಾಜಿ ಸಚಿವ ಆರ್.ವಿ.ದೇಶಪಾಂಡೆ ವಿರುದ್ಧದ ಕೇಸ್‌ನ್ನು ರದ್ದುಪಡಿಸಲಾಗಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News