ಒಂದು ದೇಶ, ಒಂದು ಅನಿಲ ಗ್ರಿಡ್ ಸಾಕಾರಕ್ಕೆ ಸರಕಾರ ಬದ್ಧ: ಪ್ರಧಾನಿ ನರೇಂದ್ರ ಮೋದಿ

Update: 2021-01-05 11:55 GMT

ಬೆಂಗಳೂರು, ಜ.5: ಒಂದು ದೇಶ, ಒಂದು ಅನಿಲ(ಗ್ಯಾಸ್) ಗ್ರಿಡ್ ಪರಿಕಲ್ಪನೆಯನ್ನು ಸಾಕಾರಗೊಳಿಸುವ ಮೂಲಕ ದೇಶದಲ್ಲಿ ನೈಸರ್ಗಿಕ ಅನಿಲದ ಬಳಕೆಯ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸಲು ಭಾರತ ಸರಕಾರ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ನುಡಿದರು.

ಮಂಗಳವಾರ ಹೊಸದಿಲ್ಲಿಯಿಂದ ವರ್ಚುಯಲ್ ವೇದಿಕೆ ಮೂಲಕ ಕೊಚ್ಚಿ-ಮಂಗಳೂರು ನೈಸರ್ಗಿಕ ಅನಿಲ್ ಪೈಪ್‍ಲೈನ್ ಅನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಭಾರತ ಸರಕಾರವು ಇಂಧನ ಪೂರೈಕೆಗೆ ಒಂದು ಸಮಗ್ರ ಯೋಜನೆಯನ್ನು ರೂಪಿಸಿದ್ದು, ಪರಿಸರ ಸ್ನೇಹಿ ಇಂಧನ ಬಳಕೆಗೆ ಆದ್ಯತೆ ನೀಡುತ್ತಿದೆ. ಆ ಮೂಲಕ ಜನ ಸ್ನೇಹಿ ಹಾಗೂ ಉದ್ಯಮ ಸ್ನೇಹಿ ವಾತಾವರಣ ನಿರ್ಮಿಸಲು ಶ್ರಮಿಸುತ್ತಿದೆ ಎಂದು ಪ್ರತಿಪಾದಿಸಿದರು.

1987 ರಿಂದ 2014ರ ಅವಧಿಯಲ್ಲಿ ದೇಶದಲ್ಲಿ 15 ಸಾವಿರ ಕಿ.ಮೀ. ನೈಸರ್ಗಿಕ ಅನಿಲ ಪೈಪ್‍ಲೈನ್ ಅಳವಡಿಸಲಾಗಿತ್ತು. ಆದರೆ ಕಳೆದ ಆರು ವರ್ಷಗಳ ಅವಧಿಯಲ್ಲಿ 16 ಸಾವಿರ ಕಿ.ಮೀ.ನಷ್ಟು ನೈಸರ್ಗಿಕ ಅನಿಲ ಪೈಪ್‍ಲೈನ್ ಅಳವಡಿಸುವ ಹೊಸ ಕಾಮಗಾರಿಗಳಿಗೆ ಚಾಲನೆ ನೀಡಿದ್ದು, ಮುಂದಿನ ನಾಲ್ಕಾರು ವರ್ಷಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದ ಪ್ರಧಾನಮಂತ್ರಿ, ಸಾರಿಗೆ ಸಂಪರ್ಕ ಹಾಗೂ ಪರಿಸರ ಸ್ನೇಹಿ ಇಂಧನ ವಲಯದಲ್ಲಿ ಪ್ರಗತಿ ಸಾಧಿಸಿದ ದೇಶಗಳು ಅಭಿವೃದ್ಧಿ ನಕ್ಷೆಯಲ್ಲಿ ಮುಂಚೂಣಿಯಲ್ಲಿರುತ್ತವೆ. ಭಾರತವೂ ಅಭಿವೃದ್ಧಿಯ ಮುಂಚೂಣಿಯಲ್ಲಿರಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ವಿವರಿಸಿದರು.

ಒಂದು ದೇಶ ಒಂದು ಗ್ಯಾಸ್ ಗ್ರಿಡ್ ಪರಿಕಲ್ಪನೆಯು ಪೂರ್ಣಪ್ರಮಾಣದಲ್ಲಿ ಸಾಕಾರಗೊಂಡಾಗ ರಸಗೊಬ್ಬರ, ರಾಸಾಯನಿಕ, ಪೆಟ್ರೋಲಿಯಂ ಮತ್ತು ಇಂಧನ ವಲಯಗಳಿಗೆ ಹೆಚ್ಚಿನ ಲಾಭವಾಗಲಿದೆ. ಬಡ, ಮಧ್ಯಮ ವರ್ಗದ ಜನರು ಮತ್ತು ಕೈಗಾರಿಕೋದ್ಯಮಿಗಳಿಗೆ ಅನುಕೂಲವಾಗಲಿದೆ. ಅಲ್ಲದೆ ಸಾವಿರಾರು ಕೋಟಿ ವಿದೇಶಿ ವಿನಿಮಯ ಮೊತ್ತ ಉಳಿತಾಯವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ದೇಶದಲ್ಲಿ ನೈಸರ್ಗಿಕ ಅನಿಲ ಬಳಕೆ ಶೇ.6.3ರಷ್ಟಿದ್ದು, 2030ರ ವೇಳೆಗೆ ಇದನ್ನು ಶೇ.15ಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಕೊಚ್ಚಿ-ಮಂಗಳೂರು ಪೈಪ್‍ಲೈನ್‍ನಿಂದ ಈ ಭಾಗದ ಕೈಗಾರಿಕೋದ್ಯಮಗಳಿಗೆ ಅನುಕೂಲವಾಗಲಿದೆ. ಜೊತೆಗೆ ವಾಹನಗಳಲ್ಲಿ ಸಿಎನ್‍ಜಿ ಬಳಕೆಗೂ ಉತ್ತೇಜನ ದೊರೆಯಲಿದೆ. ಈ ವ್ಯಾಪ್ತಿಯಲ್ಲಿ ಸುಮಾರು 700 ಸಿಎನ್‍ಜಿ ಸ್ಟೇಷನ್‍ಗಳನ್ನು ಸ್ಥಾಪಿಸಲಾಗುವುದು ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೊಚ್ಚಿ-ಮಂಗಳೂರು ನೈಸರ್ಗಿಕ ಅನಿಲ ಪೈಪ್‍ಲೈನ್ ಯೋಜನೆಯಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಈ ಭಾಗದಲ್ಲಿ 4 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ಪೈಪ್ ಮೂಲಕ ನೈಸರ್ಗಿಕ ಅನಿಲ ಪೂರೈಸಲಾಗುವುದು. ಅಲ್ಲದೆ, ವಾಣಿಜ್ಯ ಚಟುವಟಿಕೆಗಳಿಗೆ, ಉದ್ದಿಮೆಗಳಿಗೆ, ವಿಶೇಷವಾಗಿ ಎಂ.ಸಿ.ಎಫ್ ಹಾಗೂ ಎಂ.ಆರ್.ಪಿ.ಎಲ್‍ಗಳಿಗೆ ಅನುಕೂಲವಾಗಲಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಧಾಬೋಲ್-ಬೆಂಗಳೂರು ಅನಿಲ್ ಪೈಪ್‍ಲೈನ್ ಯೋಜನೆ ಈಗಾಗಲೇ ಕಾರ್ಯಗತವಾಗಿದ್ದು, ಬೆಂಗಳೂರು ನಗರವೊಂದರಲ್ಲೇ 25 ಸಾವಿರ ಮನೆಗಳಿಗೆ ಪೈಪ್ ಮೂಲಕ ನೈಸರ್ಗಿಕ ಅನಿಲ ಪೂರೈಸಲಾಗುತ್ತಿದೆ. ಸುಮಾರು 2.8 ಲಕ್ಷಕ್ಕೂ ಹೆಚ್ಚು ಜನರು ನೈಸರ್ಗಿಕ ಅನಿಲ ಸಂಪರ್ಕ ಕೋರಿ ನೋಂದಾಯಿಸಿಕೊಂಡಿದ್ದು, 1.68 ಲಕ್ಷ ಮನೆಗಳಲ್ಲಿ ಅಗತ್ಯ ಸೌಕರ್ಯ ಕಲ್ಪಿಸಲಾಗಿದೆ ಎಂದು ಅವರು ಹೇಳಿದರು.

ಮುಂದಿನ ದಿನಗಳಲ್ಲಿ ರಾಜ್ಯದ ಪ್ರಮುಖ ನಗರಗಳಲ್ಲಿ ನೈಸರ್ಗಿಕ ಅನಿಲ ಬಳಕೆ ಪ್ರಮಾಣ ಹೆಚ್ಚಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ ಮುಖ್ಯಮಂತ್ರಿ, ಹಲವು ಸವಾಲುಗಳ ನಡುವೆಯೂ ಯೋಜನೆಯನ್ನು ಪೂರ್ಣಗೊಳಿಸಿದ ಪ್ರಧಾನಮಂತ್ರಿಯವರ ದೃಢಸಂಕಲ್ಪವನ್ನು ಶ್ಲಾಘಿಸಿದರು.

ಸಮಾರಂಭದಲ್ಲಿ ಮಾತನಾಡಿದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಹಲವು ಅಡೆತಡೆಗಳ ನಡುವೆಯೂ ಪೂರ್ಣಗೊಂಡ ಈ ಯೋಜನೆಯಿಂದ ಆರ್ಥಿಕ ಅಭಿವೃದ್ಧಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು. ಪ್ರಾಸ್ತಾವಿಕವಾಗಿ ಮಾತನಾಡಿದ ಕೇಂದ್ರ ಪೆಟ್ರೋಲಿಯಂ ಮತ್ತು ಉಕ್ಕು ಸಚಿವ ಧರ್ಮೇಂದ್ರ ಪ್ರಧಾನ್, ಭಾರತ ಸರಕಾರವು ದೇಶದಲ್ಲಿ ನೈಸರ್ಗಿಕ ಅನಿಲ ಪೈಪ್‍ಲೈನ್ ವ್ಯಾಪ್ತಿಯನ್ನು ದ್ವಿಗುಣ ಗೊಳಿಸುವ ಮೂಲಕ, ನೈಸರ್ಗಿಕ ಅನಿಲ ಬಳಕೆಯನ್ನು ಶೇ.6.3 ರಿಂದ ಶೇ.15ಕ್ಕೆ ಹೆಚ್ಚಿಸಲು ಉದ್ದೇಶಿಸಿದೆ ಎಂದು ನುಡಿದರು.

ಕೇರಳ ರಾಜ್ಯಪಾಲ ಆರೀಫ್ ಮುಹಮ್ಮದ್ ಖಾನ್, ಕರ್ನಾಟಕ ರಾಜ್ಯಪಾಲ ವಜುಭಾಯಿ ವಾಲಾ, ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ, ಕೇಂದ್ರ ವಿದೇಶಾಂಗ ವ್ಯವಹಾರ ಖಾತೆ ರಾಜ್ಯ ಸಚಿವ ವಿ.ಮುರಳೀಧರನ್ ಮತ್ತು ಇತರ ಗಣ್ಯರು ಈ ವರ್ಚುವಲ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News