'ನಮ್ಮೂರಿಗೆ ಆಕೇಶಿಯಾ ಮರ ಬೇಡ' ಹೋರಾಟ ಒಕ್ಕೂಟದಿಂದ ಸಿಸಿಎಫ್ ಕಚೇರಿಗೆ ಮುತ್ತಿಗೆ ಯತ್ನ

Update: 2021-01-07 14:24 GMT

ಶಿವಮೊಗ್ಗ, ಜ.7: ಮಲೆನಾಡಿಗೆ ಆಕೇಶಿಯಾ ಬೇಡ ಹಾಗೂ ಎಂಪಿಎಂ ಕಾರ್ಖಾನೆಗೆ ನಲವತ್ತು ವರ್ಷಗಳ ಹಿಂದೆ ಗುತ್ತಿಗೆ ನೀಡಿದ್ದ ಅರಣ್ಯ ಭೂಮಿಯನ್ನು ಮರುಪರಭಾರೆ ಮಾಡಿರುವುದನ್ನು ಖಂಡಿಸಿ ನಮ್ಮೂರಿಗೆ ಆಕೇಶಿಯಾ ಮರ ಬೇಡ ಹೋರಾಟ ಒಕ್ಕೂಟದವರು ಇಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಹೋರಾಟಗಾರರು ಹಾಗೂ ಪೊಲೀಸರ ನಡುವೆ ತಳ್ಳಾಟ ನೂಕಾಟ, ವಾಗ್ವಾದ ನಡೆಯಿತು.

ನಮ್ಮೂರಿಗೆ ಆಕೇಶಿಯಾ ಮರ ಬೇಡ ಹೋರಾಟ ಒಕ್ಕೂಟ ಕರೆ ನೀಡಿದ್ದ ಬೃಹತ್ ಪ್ರತಿಭಟನೆಗೆ ರಾಜ್ಯದ ನಾನಾ ಮೂಲೆಗಳಿಂದ ಪರಿಸರ ಹೋರಾಟಗಾರರು, ಪ್ರಗತಿಪರ ಚಿಂತಕರು, ವಿವಿಧ ಸಂಘಟನೆಗಳ ಮುಖಂಡರು ಹಾಗೂ ಸಾರ್ವಜನಿಕರು ಶಿವಮೊಗ್ಗಕ್ಕೆ ಆಗಮಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಹೋರಾಟಕ್ಕೆ ಶಕ್ತಿ ತುಂಬುವ ಪ್ರಯತ್ನ ಮಾಡಿದರು.

ನಗರದ ಬೆಕ್ಕಿನಕಲ್ಮಠ ವೃತ್ತದಿಂದ ಹೊರಟ ಬೃಹತ್ ಪ್ರತಿಭಟನಾ ಮೆರವಣಿಗೆ ಹೊಳೆ ಬಸ್‌ಸ್ಟಾಪ್ ಬಳಿ ಇರುವ ಮುಖ್ಯ ಅರಣ್ಯಾ ಸಂರಕ್ಷಣಾಧಿಕಾರಿ ಕಚೇರಿ ಆವರಣ ತಲುಪಿ, ಕಚೇರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದರು. ಈ ವೇಳೆ ಸಿಸಿಎಫ್ ಕಚೇರಿ ಒಳಗಡೆ ಪ್ರತಿಭಟನಾಕಾರರನ್ನು ಬಿಡದ ಪೊಲೀಸರ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ರೈತ ಮುಖಂಡ ಕೆ.ಟಿ ಗಂಗಾಧರ್, ನಷ್ಟದ ಸುಳಿವಿಗೆ ಸಿಲುಕಿ ಎಂಪಿಎಂ ಕಂಪನಿ ಮುಚ್ಚಿಹೋಗಿ ವರ್ಷಗಳೇ ಉರುಳಿವೆ. ಈಗ ಭೂಮಿಯ ಲೀಸ್ ಅವಧಿ ಮುಗಿದಿದೆ. ಆದರೆ ಸರ್ಕಾರ ಅರಣ್ಯ ಭೂಮಿಯನ್ನು ಅರಣ್ಯ ಇಲಾಖೆಗೆ ಮರಳಿ ಪಡೆಯುವ ಬದಲು, ಮತ್ತೆ ಲೀಸ್ ನವೀಕರಣದ ಮೂಲಕ ಈ ಭೂಮಿಯನ್ನು ಮುಚ್ಚಿಹೋಗಿರುವ ಕಂಪನಿಗೆ ಪರಭಾರೆ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾನೂನು ಪ್ರಕಾರ ಕೆಲಸ ಮಾಡಿ ಅಂದರೆ ರಾಜಕಾರಣಿಗಳ ಪರ ಕೆಲಸ ಮಾಡುತ್ತೀರಾ ಎಂದು ಅರಣ್ಯಾಧಿಕಾರಿಗಳನ್ನು ತರಾಟೆಗೆ ತೆಗದುಕೊಂಡ ಅವರು, ಹೋರಾಟ ಈಗ ಪ್ರಾರಂಭವಾಗಿದೆ. ಅರಣ್ಯ ಭೂಮಿಯನ್ನು ಯಾವುದೇ ಕಾರಣಕ್ಕೂ ಎಂಪಿಎಂಗೆ ಕೊಡಬಾರದು. ಕೊಟ್ಟರೆ ಉಗ್ರ ಹೋರಾಟ ಮಾಡುತ್ತೇವೆ ಎಂದರು.

ಪ್ರೊ.ಕುಮಾರ್ ಸ್ವಾಮಿ ಮಾತನಾಡಿ, ಅರಣ್ಯ ಇಲಾಖೆ ನೈಸರ್ಗಿಕ ಅರಣ್ಯ ಬೆಳಸದೆ, ಮಲೆನಾಡಿಗೆ ಮಾರಕವಾಗಿರುವ ನೀಲಗಿರಿ, ಆಕೇಶಿಯಾ ಬೆಳಸಿ ಜನರು ಸಂಕಷ್ಟ ಅನುಭವಿಸುವಂತಾಗಿದೆ ಎಂದರು. ರಾಜಕಾರಣಿಗಳ ಭ್ರಷ್ಟಾಚಾರದಿಂದ ಎಂಪಿಎಂ ಸತ್ತುಹೋಗಿದೆ. ಸತ್ತು ಹೋಗಿರುವ ಎಂಪಿಎಂಗೆ ಈ ಹಿಂದೆ ಗುತ್ತಿಗೆ ನೀಡಿದ್ದ ಅರಣ್ಯ ಭೂಮಿಯನ್ನು ಮರುಪರಭಾರೆ ಮಾಡುತ್ತಿದ್ದಾರೆ. ಇದು ಖಂಡನೀಯ ಎಂದು ಹೇಳಿದರು.

ಶಶಿ ಸಂಪಳ್ಳಿ ಮಾತನಾಡಿ, 80 ಸಾವಿರ ಎಕರೆ ಅರಣ್ಯ ಭೂಮಿಯ ಮೇಲೆ ಕಣ್ಣಿಟ್ಟು ಎಪಿಎಂ ಕಾರ್ಖಾನೆ ಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ದೂರಿದರು. ಅರಣ್ಯ ಭೂಮಿಯನ್ನು ಉಳಿಸಲು ನಾವೇ ಪ್ರಯತ್ನ ಮಾಡುತ್ತೇವೆ. ಆಕೇಶಿಯಾ ನಡೆದಂತೆ ಕೆಲವು ಗ್ರಾಮ ಪಂಚಾಯತ್ ಗಳಲ್ಲಿ ನಿರ್ಣಯ  ತೆಗೆದುಕೊಳ್ಳಲಾಗುತ್ತಿದೆ. 1982ರ ಕಾಯ್ದೆಯ ಪ್ರಕಾರ ಅರಣ್ಯ ಪ್ರದೇಶದಲ್ಲಿ ಅರಣ್ಯ ಅಲ್ಲದ ಇರುವ ಯಾವುದೇ ಚಟುವಟಿಕೆ ನಡೆಸಿದರೆ ಅದು ಕ್ರಿಮಿನಲ್ ಅಪರಾಧ. ಅಂದರೆ ಸಹಜ ಕಾಡನ್ನು ಬುಲ್ಡೋಜರ್ ಮೂಲಕ ನೆಲಸಮ ಮಾಡಿ ಆಕೇಶಿಯಾ, ನೀಲಗಿರಿ ಬೆಳೆಸಿದರೆ ಅದು ಅಪರಾಧ ಎಂದರು.

ಪರಿಸರ ಹೋರಾಟಗಾರ ಕಲ್ಕುಳಿ ವಿಠಲ ಹೆಗಡೆ ಮಾತನಾಡಿ, ಮಲೆನಾಡಿನ ದ್ರೋಹಿಗಳು ಮಾತ್ರ ಆಕೇಶಿಯ ಬೆಳೆಸಲು ಹುನ್ನಾರ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮಲೆನಾಡಿನ ನಿತ್ಯಹರಿದ್ವರ್ಣ ಕಾಡಿನಲ್ಲಿ ಸಾಮಾಜಿಕ ಅರಣ್ಯದ ಹೆಸರಿನಲ್ಲಿ ಅರಣ್ಯ ಇಲಾಖೆ ಆಕೇಶಿಯಾವನ್ನು ಬೆಳಸುತ್ತಿದೆ. ಇದರಿಂದ ಅಂತರ್ಜಲ ಕುಸಿಯುತ್ತಿದೆ ಎಂದರು.

ಡಿಎಸ್‌ಎಸ್ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ಮಾತನಾಡಿ, ಎಂಪಿಎಂ ಅರಣ್ಯ ಭೂಮಿಯನ್ನು ಕಬಳಿಸಲು ಮುಖ್ಯಮಂತ್ರಿ ಕುಟುಂಬ ಆಸಕ್ತಿ ವಹಿಸುತ್ತಿದೆ ಎಂದು ದೂರಿದರು.

ಎಂಪಿಎಂಗೆ ಅರಣ್ಯ ಭೂಮಿಯನ್ನು ಮರುಪರಭಾರೆ ಮಾಡುವುದನ್ನು ವಿರೋಧಿಸಿ ಕಳೆದ ಆರೇಳು ತಿಂಗಳಿನಿಂದ ಹೋರಾಟ ನಡೆಯುತ್ತಿದೆ ಎಂದ ಅವರು, ಎಂಪಿಎಂಗೆ ಅರಣ್ಯ ಭೂಮಿ ನೀಡುತ್ತಿರುವುದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪನವರಿಗೆ ಗೊತ್ತಿಲ್ಲ. ಮುಖ್ಯಮಂತ್ರಿಗಳು ಜಿಲ್ಲಾ ಉಸ್ತುವಾರಿ ಸಚಿವರನ್ನು ಲೆಕ್ಕಕ್ಕೆ ತೆಗೆದುಕೊಂಡಿಲ್ಲ ಎಂದು ಹೇಳಿದರು.

ವಕೀಲ ಕೆ.ಪಿ ಶ್ರೀಪಾಲ್ ಮಾತನಾಡಿ, ಎಂಪಿಎಂ ಕಾರ್ಖಾನೆ ಹೆಸರಿನಲ್ಲಿ ಮತ್ತೆ ರಿನಿವಲ್ ಮಾಡಿ ಅದನ್ನು ಬೇನಾಮಿಯಾಗಿ ಖಾಸಗಿಯವರಿಗೆ ಕಾರ್ಖಾನೆ ಕೊಡುತ್ತೇವೆ ಎಂಬ ನೆಪದಲ್ಲಿ ಸಂಪೂರ್ಣ ಅರಣ್ಯ ಭೂಮಿಯನ್ನು ತಮ್ಮ ರಿಯಲ್ ಎಸ್ಟೇಟ್‌ಗೆ ಬೇನಾಮಿಯಾಗಿ ಕಬಳಿಸಲು ಕೆಲವು ರಾಜಕಾರಣಿಗಳು ಹೊರಟಿದ್ದಾರೆ. ಅದರ ವಿರುದ್ಧ ಸಿಸಿಎಫ್ ಕಚೇರಿಗೆ ಮುತ್ತಿಗೆ ಹಾಕಿದ್ದೇವೆ ಎಂದರು ತಿಳಿಸಿದರು.

ಎಂಪಿಎಂಗೆ ನೀಡಿರುವ ಭೂಮಿಯ ಸ್ವಾಭಾವಿಕ ಅರಣ್ಯ ಬೆಳಸಬೇಕು. ಗುತ್ತಿಗೆಯನ್ನು ರದ್ದು ಮಾಡಬೇಕು. ಜೊತೆ ಜೊತೆಗೆ ನ್ಯಾಯಾಲಯದಲ್ಲಿ  ಸಾರ್ವಜನಿಕ ಹಿತಾಸಕ್ತಿಯನ್ನು ಹೂಡಿದ್ದೇವೆ. ಕಾನೂನು ಬಾಹಿರವಾಗಿ ಸಂಸದರು ಹಾಗೂ ಮುಖ್ಯಮಂತ್ರಿಗಳ ವ್ಯಕ್ತಿಗತ ಹಿತಾಸಕ್ತಿಯಿಂದಾಗಿ ಸರ್ಕಾರದ ಯಾವುದೇ ಅನುಮತಿ ಇಲ್ಲದೆ ಗುತ್ತಿಗೆ ಅವಧಿಯನ್ನು ನವೀಕರಣ ಮಾಡಿದ್ದಾರೆ. ಇವರ ವಿರುದ್ಧ ಕ್ರಿಮಿನಲ್ ಪ್ರಕರಣ ಹೂಡುತ್ತೇವೆ ಎಂದರು.

ಈ ಸಂದರ್ಭದಲ್ಲಿ ಬಿ. ರಮೇಶ್ ಹೆಗಡೆ,ಜಿ.ಡಿ ಮಂಜನಾಥ್, ಡಿ.ಮಂಜುನಾಥ್, ಶೇಖರ್ ಗೌಳೇರ್, ಅಖಿಲೇಶ್ ಚಿಪ್ಳಿ, ರಾಜೇಂದ್ರ ಕಂಬಳಗೆರೆ, ಯಾದವ ರೆಡ್ಡಿ, ಕೃಷ್ಣಮೂರ್ತಿ ಹಿಳ್ಳೋಡಿ, ಪ್ರೊ.ಶ್ರೀಪತಿ, ವಿರೇಶ್.ಡಿ.ಬಿ ಹಳ್ಳಿ, ಪ್ರಸನ್ನ ಹಿತ್ಲಗದ್ದೆ, ರವಿಹರಿಗೆ, ಅಕ್ಷತಾ ಹುಂಚದಕಟ್ಟೆ ಸೇರಿದಂತೆ ಹಲವರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News