ಪಾಲಕ್ಕಾಡ್: ಮಹಾತ್ಮಾ ಗಾಂಧಿ ಪ್ರತಿಮೆ ಮೇಲೆ ಪಕ್ಷದ ಧ್ವಜ ಅಳವಡಿಸಿದ ಬಿಜೆಪಿ ಕಾರ್ಯಕರ್ತರು

Update: 2021-01-11 18:02 GMT
photo courtesy: thehindu.com

ಪಾಲಕ್ಕಾಡ್, ಜ. 12: ಪಾಲಕ್ಕಾಡ್ ನಗರ ಸಭೆಯ ಆಡಳಿತಾರೂಢ ಬಿಜೆಪಿಯ ಕಾರ್ಯಕರ್ತರು ಸೋಮವಾರ ನಗರಸಭೆಯ ಕಟ್ಟಡದ ಒಳಗಿರುವ ಮಹಾತ್ಮಾ ಗಾಂಧಿ ಪ್ರತಿಮೆ ಮೇಲೆ ಪಕ್ಷದ ಧ್ವಜ ಅಳವಡಿಸಿದ ಹಿನ್ನೆಲೆಯಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಸಿಪಿಎಂ ಪ್ರತಿಭಟನೆ ನಡೆಸಿದ ಪರಿಣಾಮ ಇಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.

ನಗರ ಸಭೆಯ ವಿವಿಧ ಸ್ಥಾಯಿ ಸಮಿತಿಯ ಚುನಾವಣೆ ಹಿನ್ನೆಲೆಯಲ್ಲಿ ನಗರ ಸಭೆಯ ಕಟ್ಟಡದಲ್ಲಿ ನಗರ ಸಭೆಯ ಎಲ್ಲ ಕೌನ್ಸಿಲರ್‌ಗಳು ಉಪಸ್ಥಿತರಿದ್ದರು.

ಅನಂತರ ಪೊಲೀಸರು ಬಿಜೆಪಿ ಅಳವಡಿಸಿದ ಧ್ವಜವನ್ನು ತೆಗೆದರೂ ಕಾಂಗ್ರೆಸ್ ಕೌನ್ಸಿಲರ್‌ಗಳು ನಗರಸಭೆಯ ಅಧ್ಯಕ್ಷರ ಕಚೇರಿಯ ಹೊರಗೆ ಧರಣಿ ನಡೆಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ನಗರ ಸಭೆಯ ಅಧ್ಯಕ್ಷೆ ಕೆ. ಪ್ರಿಯಾ, ಸ್ಥಾಯಿ ಸಮಿತಿಯ ಸದಸ್ಯರನ್ನು ಆಯ್ಕೆ ಮಾಡಲು ಎಲ್ಲ ಬಿಜೆಪಿ ನಾಯಕರು ಬ್ಯುಸಿಯಾಗಿದ್ದರು ಎಂದರು. ಅಲ್ಲದೆ, ಮಹಾತ್ಮಾ ಗಾಂಧಿ ಪ್ರತಿಮೆ ಮೇಲೆ ಧ್ವಜ ಹಾರಿಸಿದ ಸಮಾಜ ವಿರೋಧಿ ಶಕ್ತಿಗಳನ್ನು ಟೀಕಿಸಿದರು.

ಈ ಸಂಬಂಧ ನಗರ ಸಭೆ ಪೊಲೀಸ್ ಠಾಣೆಗೆ ದೂರು ನೀಡಲಿದೆ ಎಂದು ಅವರು ಹೇಳಿದ್ದಾರೆ.

ಈ ನಡುವೆ ಯುವ ಕಾಂಗ್ರೆಸ್ ಹಾಗೂ ಡಿವೈಎಫ್‌ಐ ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತರ ಕೃತ್ಯ ಖಂಡಿಸಿ ಪಾಲಕ್ಕಾಡ್ ನಗರಸಭೆ ಕಚೇರಿಗೆ ರ್ಯಾಲಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News