ಎ.1ರಿಂದ ಕೇಂದ್ರ ಸರಕಾರದ ನೂತನ ಮಸೂದೆ ಜಾರಿ: ಕೆಲಸದ ಅವಧಿ 12 ಗಂಟೆಗೆ ಏರಿಕೆ, ಸಂಬಳದಲ್ಲಿ ಕಡಿತ

Update: 2021-01-12 06:20 GMT

ಹೊಸದಿಲ್ಲಿ,ಜ.12:  ಎಪ್ರಿಲ್ 1, 2021ರಿಂದ  ದೇಶದ ಉದ್ಯೋಗಿಗಳ ಕೆಲಸದ  ಅವಧಿ, ಗ್ರಾಚುವಿಟಿ, ಪ್ರಾವಿಡೆಂಟ್ ಫಂಡ್ ಇವುಗಳಲ್ಲಿ ಮಹತ್ತರ ಬದಲಾವಣೆಗಳಾಗಬಹುದು. ಕಂಪೆನಿಗಳ ಬ್ಯಾಲೆನ್ಸ್ ಶೀಟ್‍ಗಳನ್ನೂ ಇದು ಬಾಧಿಸಬಹುದು. ಕಳೆದ ವರ್ಷ ಸಂಸತ್ತಿನಲ್ಲಿ ಅನುಮೋದನೆ ಪಡೆದ ಮೂರು ವೇಜಸ್ ಕೋಡ್ ಬಿಲ್ (ವೇತನ ಸಂಹಿತೆ ಮಸೂದೆ) ಇದಕ್ಕೆ ಕಾರಣ. ಈ ಮಸೂದೆಗಳು ಈ ವರ್ಷದ ಎಪ್ರಿಲ್ 1ರಿಂದ ಜಾರಿಗೆ ಬರಲಿವೆ ಎಂದು ಮೂಲಗಳಿಂದ ವರದಿಯಾಗಿದೆ.

ಈ ಮಸೂದೆಯಂತೆ ಒಟ್ಟು ವೇತನದ ಶೇ 50ರಷ್ಟು ಭತ್ಯೆಗಳಿರಬೇಕಿದೆ. ಇದರರ್ಥ ಮೂಲ ವೇತನ (ಸರಕಾರಿ ನೌಕರಿಯಲ್ಲಿ ಮೂಲ ವೇತನ ಮತ್ತು ತುಟ್ಟಿ ಭತ್ಯೆ)  ಒಟ್ಟು ವೇತನದ ಶೇ 50ರಷ್ಟು ಅಥವಾ ಅದಕ್ಕಿಂತ ಹೆಚ್ಚು ಆಗಿರಬೇಕಿದೆ.

ಸಾಮಾನ್ಯವಾಗಿ ವೇತನದಲ್ಲಿ  ಭತ್ಯೆ ಒಟ್ಟು ವೇತನದ ಶೇ 50ಕ್ಕಿಂತ ಕಡಿಮೆಯಾಗಿರುವುದರಿಂದ ಹೊಸ ಕಾನೂನು ಜಾರಿಗೆ ಬರುತ್ತಲೇ ಕೈಗೆ ಸಿಗುವ ವೇತನ ಕಡಿಮೆಯಾಗಲಿದೆ. ಅದೇ ಸಮಯ ಒಟ್ಟು ವೇತನದಲ್ಲಿ ಭತ್ಯೆಗಳು ಹೆಚ್ಚಾಗಲಿವೆ. ಮೂಲ ವೇತನ ಹೆಚ್ಚಳದಿಂದಾಗಿ ಪಿಎಫ್ ಕೂಡ ಹೆಚ್ಚಾಗಲಿರುವುದರಿಂದ ಕೈಗೆ ಸಿಗುವ ವೇತನ ಕಡಿಮೆಯಾಗಲಿದೆ.

ಅದೇ ಸಮಯ ಗ್ರಾಚುವಿಟಿ ಹಾಗೂ ಪಿಎಫ್‍ಗೆ ಕೊಡುಗೆ ಹೆಚ್ಚಾದಾಗ ನಿವೃತ್ತಿ ನಂತರ ದೊರೆಯುವ ಮೊತ್ತ ಹೆಚ್ಚಾಗಲಿದೆ. ಹೆಚ್ಚು ವೇತನ ಪಡೆಯುವವರು ಈ ಹೊಸ ನಿಯಮದಿಂದ ಹೆಚ್ಚು ಬಾಧಿತರಾಗಲಿದ್ದಾರೆ ಹಾಗೂ   ಹೆಚ್ಚು ಹಣ ಪಿಎಫ್ ಹಾಗೂ ಗ್ರಾಚುವಿಟಿಗೆ ಹೋಗಲಿರುವುದರಿಂದ ಮತ್ತು ಕಂಪೆನಿಗಳೂ ತಮ್ಮ ಪಾಲಿನ ಪಿಎಫ್ ನೀಡಬೇಕಿರುವುದರಿಂದ ಅವುಗಳ ಮೇಲಿನ ಹೊರೆಯೂ ಅಧಿಕವಾಗಲಿದೆ.

ಅಷ್ಟೇ ಅಲ್ಲದೆ ಗರಿಷ್ಠ ಕೆಲಸದ ಗಂಟೆಗಳು ಕೂಡ 12 ಗಂಟೆಗಳಿಗೆ ಏರಿಕೆಯಾಗಲಿದೆ. ಇದರನ್ವಯ 15ರಿಂದ 30 ನಿಮಿಷ ಹೆಚ್ಚುವರಿ ಕೆಲಸ ಮಾಡುವುದು ಓವರ್ ಟೈಮ್ ಎಂದು ಪರಿಗಣಿಸಲಾಗುವುದು ಹಾಗೂ ಹೆಚ್ಚುವರಿ ಕೆಲಸ  30 ನಿಮಿಷಕ್ಕಿಂತ ಕಡಿಮೆ ಆಗಿದ್ದರೆ ಓವರ್ ಟೈಮ್ ಎಂದು ಪರಿಗಣಿತವಾಗುವುದಿಲ್ಲ.  ಮೇಲಾಗಿ ಉದ್ಯೋಗಿಗಳು ಸತತ 5 ಗಂಟೆ ಮೇಲ್ಪಟ್ಟು ಕೆಲಸ ಮಾಡುವುದನ್ನೂ ಅದು ನಿಷೇಧಿಸುತ್ತದೆ. ಐದು ಗಂಟೆಗಳಿಗೊಮ್ಮೆ ಉದ್ಯೋಗಿಗಳಿಗೆ ವಿರಾಮ ನೀಡಬೇಕೆಂದು ನಿಯಮ ಸೂಚಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News