ಮಾಜಿ ಸಚಿವರ ಪುತ್ರಿಯ ಅಪಹರಣ ಪ್ರಕರಣ

Update: 2021-01-12 18:33 GMT

ಜಮ್ಮು, ಜ. 12: ಆಗಿನ ಕೇಂದ್ರ ಗೃಹ ಸಚಿವ ಮುಫ್ತಿ ಮುಹಮ್ಮದ್ ಸಯೀದ್ ಅವರ ಪುತ್ರಿ ರುಬಯ್ಯಿ ಸಯೀದ್ ಅವರನ್ನು ಅಪಹರಿಸಿದ 31 ವರ್ಷ ಹಳೆಯ ಪ್ರಕರಣಕ್ಕೆ ಸಂಬಂಧಿಸಿ ಜಮ್ಮು ಹಾಗೂ ಕಾಶ್ಮೀರ ಲಿಬರೇಶನ್ ಫ್ರಂಟ್ (ಜೆಕೆಎಲ್‌ಎಫ್)ನ ವರಿಷ್ಠ ಮುಹಮ್ಮದ್ ಯಾಸಿನ್ ಮಲ್ಲಿಕ್ ಹಾಗೂ ಇತರ 9 ಮಂದಿ ವಿರುದ್ಧ ವಿಶೇಷ ಟಾಡಾ ನ್ಯಾಯಾಲಯ ದೋಷಾರೋಪ ರೂಪಿಸಿದೆ.

ಜೆಕೆಎಲ್‌ಎಫ್ ಅನ್ನು ಕೇಂದ್ರ ಸರಕಾರ ನಿಷೇಧಿಸಿದ ತಿಂಗಳ ಬಳಿಕ ಭಯೋತ್ಪಾದನೆಗೆ ಹಣಕಾಸಿನ ನೆರವಿಗೆ ಸಂಬಂಧಿಸಿ 2019 ಎಪ್ರಿಲ್‌ನಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮಲ್ಲಿಕ್ ಅವರನ್ನು ಬಂಧಿಸಿದ ಬಳಿಕ ದಿಲ್ಲಿಯ ತಿಹಾರ್ ಜೈಲಿನಲ್ಲಿ ಇರಿಸಲಾಗಿದೆ. ಶ್ರೀನಗರದ ಹೊರವಲಯದಲ್ಲಿ 1990 ಜನವರಿಯಲ್ಲಿ ಐಎಎಫ್‌ನ ನಾಲ್ವರು ಸಿಬ್ಬಂದಿಯನ್ನು ಗುಂಡು ಹಾರಿಸಿ ಹತ್ಯೆಗೈದಿರುವುದಕ್ಕೆ ಸಂಬಂಧಿಸಿದ ಇನ್ನೊಂದು ಪ್ರಕರಣದಲ್ಲಿ ಮಲ್ಲಿಕ್ ಹಾಗೂ ಇತರ 6 ಮಂದಿಯ ವಿರುದ್ಧ ಕಳೆದ ವರ್ಷ ಮಾರ್ಚ್‌ನಲ್ಲಿ ವಿಶೇಷ ಟಾಡಾ ನ್ಯಾಯಾಲಯ ಆರೋಪ ರೂಪಿಸಿತ್ತು. ಮಲ್ಲಿಕ್ ಹಾಗೂ ಇತರ 9 ಆರೋಪಿಗಳಾದ ಅಲಿ ಮುಹಮ್ಮದ್ ಮಿರ್, ಮುಹಮ್ಮದ್ ಝಾಮಾನ್ ಮಿರ್, ಇಕ್ಬಾಲ್ ಅಹ್ಮದ್ ಗಂಡ್ರೂ, ಜಾವೇದ್ ಅಹ್ಮದ್ ಮಿರ್, ಮುಹ್ಮದ್ ರಫೀಕ್ ಪಹ್ಲೂ, ಮಂಝೂರ್ ಅಹ್ಮದ್ ಸೋಫಿ, ವಜಾಹತ್ ಬಷೀರ್, ಮೆಹ್ರಾಜ್ ಉದ್ ದಿನ್ ಶೇಕ್ ಹಾಗೂ ಶೌಕತ್ ಅಹ್ಮದ್ ಬಕ್ಷಿ ವಿರುದ್ಧ ಆರೋಪ ರೂಪಿಸುವಂತೆ ವಿಶೇಷ ಟಾಡಾ ನ್ಯಾಯಾಲಯದ ನ್ಯಾಯಮೂರ್ತಿ ಸುನಿತಾ ಗುಪ್ತಾ ಸೋಮವಾರ ಆದೇಶಿಸಿದ್ದರು. ಟಾಡಾ ನ್ಯಾಯಾಲಯದ ಮುಂದೆ ಸಿಬಿಐ ಸಲ್ಲಿಸಿದ ಆರೋಪ ಪಟ್ಟಿಯಲ್ಲಿರುವ 12 ಮಂದಿ ಆರೋಪಿಗಳಲ್ಲಿ ಈ 10 ಮಂದಿ ಒಳಗೊಂಡಿದ್ದಾರೆ. ಇತರ ಇಬ್ಬರು ಮುಹಮ್ಮದ್ ರಫೀಕ್ ದಾರ್ ಹಾಗೂ ಮುಸ್ತಾಕ್ ಅಹ್ಮದ್ ಲೋನೆ ಸೇರಿದ್ದಾರೆ. ಜೆಕೆಎಲ್‌ಎಫ್‌ನ ಉನ್ನತ ಕಮಾಂಡರ್‌ಗಳಾಗಿರುವ ಇವರಿಬ್ಬರು ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News