ಸಂಪುಟ ಸಂಕಟ: ಸಿಎಂ ಯಡಿಯೂರಪ್ಪ ವಿರುದ್ಧ ಪಕ್ಷದಲ್ಲಿ ತೀವ್ರ ಅಸಮಧಾನ ಸ್ಫೋಟ

Update: 2021-01-13 07:44 GMT

ಬೆಂಗಳೂರು,ಜ.13: ಇಂದು ಕರ್ನಾಟಕ ಸರಕಾರದ ಸಂಪುಟ ವಿಸ್ತರಣೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅಂತಿಮಗೊಳಿಸಿದ್ದು, ಉಮೇಶ್ ಕತ್ತಿ, ಎಸ್ ಅಂಗಾರ, ಸಿ.ಪಿ ಯೋಗೀಶ್ವರ್, ಆರ್. ಶಂಕರ್, ಅರವಿಂದ ಲಿಂಬಾವಳಿ,ಎಂಟಿಬಿ ನಾಗರಾಜ್ ಹಾಗೂ ಮುರುಗೇಶ್ ನಿರಾಣಿಯವರಿಗೆ ಸಚಿವ ಸ್ಥಾನ ನೀಡಲಾಗುತ್ತದೆ ಎಂದು ಹೇಳಿಕೆ ನೀಡಿದ್ದರು. ಮುಖ್ಯಮಂತ್ರಿ ನೂತನ ಸಚಿವರ ಪಟ್ಟಿಯನ್ನು ಪ್ರಕಟಿಸುತ್ತಿದ್ದಂತೆಯೇ ಪಕ್ಷದೊಳಗೆ ಅಸಮಧಾನ ಸ್ಫೋಟಗೊಂಡಿದೆ ಎಂದು ತಿಳಿದು ಬಂದಿದೆ.

ಸಚಿವ ಸ್ಥಾನ ದೊರಕಬಹುದೆಂಬ ನಿರೀಕ್ಷೆಯಲ್ಲಿದ್ದ ಹಲವಾರು ಮಂದಿ ಶಾಸಕರು ತಮ್ಮ ಅಸಮಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್, “ಮುಖ್ಯಮಂತ್ರಿ ಯಡಿಯೂರಪ್ಪರಿಗೆ ದೇವರು ಒಳ್ಳೆಯದು ಮಾಡುವುದಿಲ್ಲ. ಅವರು ಕೊಟ್ಟ ಮಾತಿಗೆ ತಪ್ಪಿದ್ದಾರೆ. ಯೋಗೀಶ್ವರ್ ಗೆ ಯಾವ ಕಾರಣಕ್ಕೆ ಸಚಿವ ಸ್ಥಾನ ನೀಡಿದ್ದಾರೆ ಎಂದು ತಿಳಿಯುತ್ತಿಲ್ಲ. ಯಡಿಯೂರಪ್ಪರ ರಹಸ್ಯ ಯೋಗೀಶ್ವರ್ ಬಳಿ ಇರಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಸಾಮಾಜಿಕ ತಾಣಗಳ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದು, ರೀ ಯಡಿಯೂರಪ್ಪನವರೇ, ಸಂಪುಟ ವಿಸ್ತರಣೆಯಲ್ಲಿ ಸಚಿವರ ಆಯ್ಕೆ ಪ್ರಕ್ರಿಯೆಯ ಮಾನದಂಡಗಳೇನು? ನಿಮಗೆ, ನಿಮ್ಮ ರಾಜ್ಯ, ರಾಷ್ಟ್ರ ನಾಯಕರುಗಳಿಗೆ ನಿಷ್ಠಾವಂತ ಕಾರ್ಯಕರ್ತರು ಕಾಣುತ್ತಿಲ್ಲವೇ? ನಮ್ಮ ಕಷ್ಟ ನಷ್ಟಗಳನ್ನು ಆಲಿಸುತ್ತಿದ್ದ ಶ್ರೀ ಅನಂತ್ ಕುಮಾರ್ ಜೀ ಅವರ ಇಲ್ಲದಿರುವಿಕೆ ಎದ್ದು ಕಾಣುತ್ತಿದೆ” ಎಂದು ಹೇಳಿಕೆ ನೀಡಿದ್ದಾರೆ.

ರೇಣುಕಾಚಾರ್ಯ ಕೂಡಾ ತಮ್ಮ ಅಸಮಧಾನ ವ್ಯಕ್ತಪಡಿಸಿದ್ದು, ನಾನು ಇದುವರೆಗೂ ಲಾಭಿ ಮಾಡಲು ಹೋಗಿಲ್ಲ. ಆದರೆ ಲಾಭಿ ಮಾಡಿದವರಿಗೆ ಮಣೆ ಹಾಕಲಾಗಿದೆ ಎಂದು ಕಣ್ಣೀರಿಟ್ಟಿರುವ ಕುರಿತು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News