ಅಮೆರಿಕ: ಎರಡು ಬಾರಿ ವಾಗ್ದಂಡನೆಗೆ ಒಳಗಾದ ಮೊದಲ ಅಧ್ಯಕ್ಷ ಟ್ರಂಪ್

Update: 2021-01-14 03:41 GMT

ವಾಷಿಂಗ್ಟನ್, ಜ.14: ಕಳೆದ ವಾರ ಅಮೆರಿಕದ ಸಂಸತ್ತಿನ ಮೇಲೆ ನಡೆದ ದಾಳಿಗೆ ಕುಮ್ಮಕ್ಕು ನೀಡಿದ ಆರೋಪ ಹೊರಿಸಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ವಾಗ್ದಂಡನೆ ವಿಧಿಸುವ ನಿರ್ಣಯದ ಪರ ಅಮೆರಿಕದ ಪ್ರಜಾಪ್ರತಿನಿಧಿ ಸಭೆ ಮತ ಚಲಾಯಿಸಿದೆ. ಈ ಮೂಲಕ, ಅಮೆರಿಕದ ಇತಿಹಾಸದಲ್ಲೇ ಎರಡು ಬಾರಿ ವಾಗ್ದಂಡನೆಗೆ ಒಳಗಾದ ಮೊಟ್ಟಮೊದಲ ಅಧ್ಯಕ್ಷ ಎಂಬ ಕುಖ್ಯಾತಿಗೆ ಡೊನಾಲ್ಡ್ ಟ್ರಂಪ್ ಪಾತ್ರರಾದರು.

"ಅಮೆರಿಕದ ಅಧ್ಯಕ್ಷ ಸೇರಿದಂತೆ ಯಾರೂ ಕಾನೂನಿಗಿಂತ ಮೇಲಲ್ಲ ಎನ್ನುವುದನ್ನು ಇಂದು ಈ ಸದನ ಎರಡೂ ಪಕ್ಷದ ಒಪ್ಪಿಗೆಯಂತೆ ಎತ್ತಿ ಹಿಡಿದಿದೆ" ಎಂದು ಡೆಮಾಕ್ರಟಿಕ್ ಪಕ್ಷದ ಸ್ಪೀಕರ್ ನ್ಯಾನ್ಸಿ ಪೆಲೋಸಿ ಆ ಬಳಿಕ ನುಡಿದರು.

ಆದರೆ ಅಮೆರಿಕದ ಸೆನೆಟ್, ನೂತನ ಅಧ್ಯಕ್ಷ ಡೆಮಾಕ್ರಟಿಕ್ ಪಕ್ಷದ ಜೋ ಬೈಡೆನ್ ಅಧಿಕಾರ ವಹಿಸಿಕೊಳ್ಳುವ ಮುನ್ನ ಅಂದರೆ ಈ ತಿಂಗಳ 20ಕ್ಕಿಂತ ಮೊದಲು ವಿಚಾರಣೆ ನಡೆಸುವ ಸಾಧ್ಯತೆ ಇಲ್ಲ. ಆದ್ದರಿಂದ ಈ ರಿಯಲ್ ಎಸ್ಟೇಟ್ ದಿಗ್ಗಜ ತಮ್ಮ ಅಧಿಕಾರಾವಧಿ ಪೂರ್ಣಗೊಳ್ಳುವ ಮೊದಲೇ ಹುದ್ದೆ ತ್ಯಜಿಸಬೇಕಾದ ಅಪಕೀರ್ತಿಯಿಂದ ತಪ್ಪಿಸಿಕೊಳ್ಳಬಹುದಾಗಿದೆ.

ಆದರೆ ಆ ಬಳಿಕ ಅವರು ಸೆನೆಟ್ ವಿಚಾರಣೆಯನ್ನು ಎದುರಿಸಬೇಕಾಗುತ್ತದೆ ಹಾಗೂ ಇಲ್ಲಿ ಶಿಕ್ಷೆಗೆ ಒಳಗಾದಲ್ಲಿ 2024ರಲ್ಲಿ ಮತ್ತೆ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸುವುದಕ್ಕೆ ನಿಷೇಧ ವಿಧಿಸಲಾಗುತ್ತದೆ.

"ಡೊನಾಲ್ಡ್ ಟ್ರಂಪ್ ಅವರು ಅರ್ಹವಾಗಿಯೇ ಎರಡು ಬಾರಿ ವಾಗ್ದಂಡನೆಗೆ ಒಳಗಾದ ಕಳಂಕ ಹೊತ್ತ ಮೊದಲ ಅಧ್ಯಕ್ಷರಾಗಿ ಅಮೆರಿಕದ ಇತಿಹಾಸದಲ್ಲಿ ಸೇರಲಿದ್ದಾರೆ" ಎಂದು ಮುಂದಿನ ವಾರ ಸೆನೆಟ್ ಮುಖಂಡರಾಗುವ ಡೆಮಾಕ್ರಟಿಕ್ ಪಕ್ಷದ ಚುಕ್ ಶೆಮರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News