ಸಂಚಾರ ದಟ್ಟಣೆ: ಭಾರತದ ಈ ನಾಲ್ಕು ನಗರಗಳಲ್ಲಿ ಅತ್ಯಧಿಕ

Update: 2021-01-14 04:47 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಜ.14: ಅಧಿಕ ಸಂಚಾರ ದಟ್ಟಣೆಯ ಸಮಸ್ಯೆ ಎದುರಿಸುತ್ತಿರುವ ಭಾರತದ ನಾಲ್ಕು ದೊಡ್ಡ ನಗರಗಳು ಇದೀಗ ಕೋವಿಡ್‌ಪೂರ್ವ ವಾಹನದಟ್ಟಣೆ ಮಟ್ಟವನ್ನು ತಲುಪಿವೆ. ಮುಂಬೈ, ಬೆಂಗಳೂರು, ದಿಲ್ಲಿ ಮತ್ತು ಪುಣೆ ವಿಶ್ವದ ಅತ್ಯಧಿಕ ಸಂಚಾರ ದಟ್ಟಣೆಯ 20 ನಗರಗಳ ಪೈಕಿ ಸ್ಥಾನ ಪಡೆದಿದ್ದು, ಮೊದಲ ಮೂರು ನಗರಗಳು ಅಗ್ರ 10ರಲ್ಲಿ ಸೇರಿವೆ.

ಸಂಚಾರ ದಟ್ಟಣೆಯಲ್ಲಿ ಮುಂಬೈ ಮಹಾನಗರ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿದ್ದು, ಬೆಂಗಳೂರು ಆರನೇ, ದಿಲ್ಲಿ ಎಂಟನೇ ಮತ್ತು ಪುಣೆ ಹದಿನಾರನೇ ಸ್ಥಾನದಲ್ಲಿವೆ. ವಿಶ್ವದ 56 ದೇಶಗಳ 416 ನಗರಗಳ ಸಂಚಾರ ದಟ್ಟಣೆಯನ್ನು ಅಧ್ಯಯನ ಮಾಡಿ ಬಿಡುಗಡೆ ಮಾಡಿದ ವರದಿಯ ಪ್ರಕಾರ ವಿಶ್ವದಲ್ಲೇ ಗರಿಷ್ಠ ವಾಹನ ದಟ್ಟಣೆ ಇರುವ ನಗರ ಮಾಸ್ಕೊ.

ಟಾಮ್‌ಟಾಮ್ ಸಂಚಾರ ಸೂಚ್ಯಂಕದ ಅಗ್ರ 10 ನಗರಗಳ ಪೈಕಿ ಭಾರತದ ಮೂರು ನಗರಗಳು ಸೇರಿರುವುದು ಆರ್ಥಿಕ ಚಟುವಟಿಕೆಗಳ ಕ್ಷಿಪ್ರ ಪುನಶ್ಚೇತನದ ಸಂಕೇತ ಎನ್ನಲಾಗಿದೆ. ಇದರ ಜತೆಗೆ ನಗರವಾಸಿಗಳು ಸಾರ್ವಜನಿಕ ವಾಹನಗಳ ಬದಲಾಗಿ ವೈಯಕ್ತಿಕ ವಾಹನಗಳಿಗೆ ಒತ್ತು ನೀಡಿರುವುದು ಇದಕ್ಕೆ ಕಾರಣ. 2019ರಲ್ಲಿ ಬೆಂಗಳೂರು ಇಡೀ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿತ್ತು. ಮುಂಬೈ, ಪುಣೆ ಮತ್ತು ದಿಲ್ಲಿ ಕ್ರಮವಾಗಿ 4, 5 ಮತ್ತು 8ನೇ ಸ್ಥಾನದಲ್ಲಿದ್ದವು.

ಜಾಗತಿಕ ಸಂಚಾರ ಸೂಚ್ಯಂಕದ 10ನೇ ಆವೃತ್ತಿಯನ್ನು ಬುಧವಾರ ಬಿಡುಗಡೆ ಮಾಡಲಾಗಿದ್ದು, ಮುಂಬೈನಲ್ಲಿ ವಾಹನ ದಟ್ಟಣೆ ಪ್ರಮಾಣ ಶೇಕಡ 53 ಆಗಿದ್ದು, ಇದು 2019ಕ್ಕೆ ಹೋಲಿಸಿದರೆ ಶೇಕಡ 12ರಷ್ಟು ಕಡಿಮೆ. ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಶೇಕಡ 20ರಷ್ಟು ಇಳಿದಿದ್ದರೆ, ದಿಲ್ಲಿಯಲ್ಲಿ ಶೇ.9ರಷ್ಟು ಕಡಿಮೆಯಾಗಿದೆ. ಪುಣೆ 2019ಕ್ಕೆ ಹೋಲಿಸಿದರೆ ಶೇಕಡ 17ರಷ್ಟು ಕಡಿಮೆ ದಟ್ಟಣೆಯನ್ನು ದಾಖಲಿಸಿದೆ. ಸಂಚಾರ ದಟ್ಟಣೆ ಇಳಿಕೆಗೆ ಮುಖ್ಯವಾಗಿ ಲಾಕ್‌ಡೌನ್ ಕಾರಣ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News