ಅತೃಪ್ತ ಶಾಸಕರು ಪಕ್ಷದ ಕೇಂದ್ರ ನಾಯಕರಿಗೆ ದೂರು ನೀಡಲಿ: ಯಡಿಯೂರಪ್ಪ

Update: 2021-01-14 08:05 GMT

ದಾವಣಗೆರೆ, ಜ.14: ‘ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಯಾವೆಲ್ಲ ಶಾಸಕರಿಗೆ ಅಸಮಾಧಾನ ಇದೆಯೋ ಅವರೆಲ್ಲ ಪಕ್ಷದ ಕೇಂದ್ರ ನಾಯಕರಿಗೆ ದೂರು ನೀಡಲಿ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

ಹರಿಹರದಲ್ಲಿ ಗುರುವಾರ ಆರಂಭಗೊಂಡ ‘ಹರ ಜಾತ್ರೆ’ಯಲ್ಲಿ ಪಾಲ್ಗೊಳ್ಳಲು ಇಂದು ನಗರಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ, ಮಾಧ್ಯಮದವರ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯಿಸಿದರು.

"ನನ್ನ ಇತಿಮಿತಿಯಲ್ಲಿ ಸಚಿವ ಸಂಪುಟ ವಿಸ್ತರಣೆ ಮಾಡಿದ್ದೇನೆ. ಪಕ್ಷದ ವರಿಷ್ಠರ ಅಪೇಕ್ಷೆಯಂತೆ ಒಂದು ಸ್ಥಾನವನ್ನು ಖಾಲಿ ಇಟ್ಟುಕೊಂಡಿದ್ದೇನೆ. ಪಕ್ಷದ 10–12 ಶಾಸಕರು ಮಂತ್ರಿ ಮಾಡಿಲ್ಲ ಎಂದು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಅವರು ಇಲ್ಲಿ ಆರೋಪ ಮಾಡುವ ಬದಲು ಪಕ್ಷದ ವರಿಷ್ಠರ ಬಳಿಗೆ ಹೋಗಿ ಮಾತನಾಡಲಿ. ಅದಕ್ಕೆ ನನ್ನದೇನು ಅಭ್ಯಂತರವಿಲ್ಲ. ಅದರ ಬದಲು ಇಲ್ಲಸಲ್ಲದ ಹೇಳಿಕೆಗಳನ್ನು ನೀಡಿ ಗೊಂದಲ ಸೃಷ್ಟಿಸುವ ಪ್ರಯತ್ನ ಮಾಡುವುದು ಪಕ್ಷದ ಶಿಸ್ತಿಗೆ ಧಕ್ಕೆ ತಂದಂತಾಗುತ್ತದೆ. ಅಂತಹದ್ದಕ್ಕೆ ಯಾರೂ ಅವಕಾಶ ಮಾಡಿಕೊಡಬೇಡಿ'' ಎಂದು ಪಕ್ಷದ ಅತೃಪ್ತ ಶಾಸಕರಿಗೆ ಯಡಿಯೂರಪ್ಪ ಕಿವಿಮಾತು ಹೇಳಿದರು.

ಪಕ್ಷದ ವರಿಷ್ಠರಿಗೆ ಯಾವುದು ಸರಿ, ತಪ್ಪು ಎಂಬುದು ತಿಳಿದಿದೆ. ನಮ್ಮ ಶಾಸಕರು ವಿನಾಕಾರಣ ಹೇಳಿಕೆ ನೀಡುವ ಬದಲು ವರಿಷ್ಠರಿಗೆ ದೂರು ನೀಡಲಿ. ಪಕ್ಷದ ವರ್ಚಸ್ಸು ಕುಂದಿಸುವ ಕೆಲಸವನ್ನು ಯಾರೂ ಮಾಡುವುದು ಬೇಡ ಎಂದು ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News