ಚಲಿಸುತ್ತಿದ್ದ ರೈಲಿನಿಂದ ಕೆಳಕ್ಕೆ ತಳ್ಳಿ ಪತ್ನಿಯನ್ನು ಸಾಯಿಸಿದ ಪತಿ

Update: 2021-01-14 09:33 GMT

ಮುಂಬೈ: ಮುಂಬೈ ಮಹಾನಗರದಲ್ಲಿ ಚಲಿಸುತ್ತಿದ್ದ ಲೋಕಲ್ ರೈಲಿನ ಬಾಗಿಲಲ್ಲಿ ನಿಂತಿದ್ದ 26ರ ವಯಸ್ಸಿನ ಮಹಿಳೆಯನ್ನು ಆಕೆಯ ಗಂಡನೇ ರೈಲಿನಿಂದ ಕೆಳಕ್ಕೆ ತಳ್ಳಿ ಸಾಯಿಸಿರುವ ಘಟನೆ ನಡೆದಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಸೋಮವಾರ ಮಧ್ಯಾಹ್ನ ಚೆಂಬೂರ್ ಹಾಗೂ ಗೋವಂಡಿ ರೈಲ್ವೆ ನಿಲ್ದಾಣಗಳ ಮಧ್ಯೆ ಈ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿ ಮಹಿಳೆಯ ಪತಿಯನ್ನು ಬಂಧಿಸಿ ಸಂಬಂಧಿತ ಸೆಕ್ಷನ್ ಅಡಿ ಎಫ್ ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದ್ದಾರೆ.
31ರ ಹರೆಯದ ಆರೋಪಿ ಮೃತಪಟ್ಟಿರುವ ಮಹಿಳೆ ಇಬ್ಬರೂ ಕೂಲಿ ಕಾರ್ಮಿಕರಾಗಿದ್ದು, ಮಾನ್‍ಖುರ್ದ್‍ನಲ್ಲಿ ವಾಸವಾಗಿದ್ದರು. ಇಬ್ಬರು ಎರಡು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದರು.
ಮೃತ ಮಹಿಳೆಗೆ ಇದು ಎರಡನೇ ಮದುವೆಯಾಗಿತ್ತು. ಈಕೆಗೆ 7 ವರ್ಷದ ಪುತ್ರಿ ಇದ್ದಾಳೆ. ಈ ಇಬ್ಬರು 7 ವರ್ಷದ ಬಾಲಕಿಯೊಂದಿಗೆ ಸ್ಥಳೀಯ ರೈಲಿನಲ್ಲಿ ಸೋಮವಾರ ಪ್ರಯಾಣಿಸಿದ್ದರು. ರೈಲು ಬೋಗಿಯ ಬಾಗಿಲ ಬಳಿ ಇಬ್ಬರು ನಿಂತಿದ್ದರು. ಮಹಿಳೆ ಚಲಿಸುವ ರೈಲಿನಿಂದ ಹೊರಬಿದ್ದಾಗ ಪತಿ ಆಕೆಯನ್ನು ಬಾಗಿಲಲ್ಲಿ ಹಿಡಿದಿಟ್ಟುಕೊಂಡಿದ್ದ. ಬಳಿಕ ತನ್ನ ಹಿಡಿತ ಸಡಿಲಿಸಿದ ಕಾರಣ ಮಹಿಳೆ ರೈಲಿನ ಹಳಿಯ ಮೇಲೆ ಬಿದ್ದಿದ್ದಾಗಿ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. 
ರೈಲು ಪ್ರಯಾಣಿಕರು ರೈಲ್ವೆ ಪೊಲೀಸರಿಗೆ ಘಟನೆಯ ಬಗ್ಗೆ ವಿವರಿಸಿದರು. ಪೊಲೀಸರು ತಕ್ಷಣವೇ ಮಹಿಳೆಯ ಪತಿಯನ್ನು ಬಂಧಿಸಿದ್ದು, ಘಟನಾಸ್ಥಳಕ್ಕೆ ಕರೆದೊಯ್ದರು. ಆತನ ಪತ್ನಿ ಗಂಭೀರ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಳು. ಆಸ್ಪತ್ರೆಗೆ ಸಾಗಿಸುವ ಮಧ್ಯೆ ಸಾವನ್ನಪ್ಪಿದ್ದಾಳೆ. ಬಾಲಕಿಯನ್ನು ಮಹಿಳೆಯ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News