ಜನೌಷಧದಿಂದ ಜನರಿಗೆ 3,000 ಕೋಟಿ ರೂ. ಉಳಿತಾಯ: ಕೇಂದ್ರ ಸಚಿವ ಸದಾನಂದಗೌಡ

Update: 2021-01-14 12:14 GMT

ಬೆಂಗಳೂರು, ಜ.14: ನಮ್ಮ ಜನೌಷಧಿ ಕೇಂದ್ರಗಳ ಮೂಲಕ ಶೇಕಡಾ 10 ರಿಂದ ಶೇಕಡಾ 90ರಷ್ಟು ಕಡಿಮೆ ದರದಲ್ಲಿ ಗುಣಮಟ್ಟದ ಔಷಧಗಳನ್ನು ಒದಗಿಸುತ್ತಿದ್ದೇವೆ. ಪ್ರಸಕ್ತ ಸಾಲಿನಲ್ಲಿ ಇದುವರೆಗೆ 484 ಕೋಟಿ ರೂ. ಮೌಲ್ಯದ ಜನೌಷಧ ಮಾರಾಟವಾಗಿದ್ದು ಜನರಿಗೆ ಏನಿಲ್ಲವೆಂದರೂ 3,000 ಕೋಟಿ ರೂಪಾಯಿ ಉಳಿತಾಯವಾಗಿದೆ ಎಂದು ಕೇಂದ್ರ ರಸಗೊಬ್ಬರ ಮತ್ತು ರಾಸಾಯನಿಕ ಸಚಿವ ಡಿ.ವಿ.ಸದಾನಂದಗೌಡ ಟ್ವೀಟ್ ಮಾಡಿದ್ದಾರೆ.

ಕರ್ನಾಟಕದಲ್ಲಿ ಸದ್ಯ 788 ಜನೌಷಧಿ ಕೇಂದ್ರಗಳು ಕಾರ್ಯನಿರ್ಹಿಸುತ್ತಿವೆ. ಪ್ರಸಕ್ತ ಸಾಲಿನಲ್ಲಿ ಇದುವರೆಗೆ 108 ಕೋಟಿ ರೂ.ಮೌಲ್ಯದ ಜನೌಷಧ ಮಾರಾಟವಾಗಿದ್ದು ರಾಜ್ಯದ ಜನರಿಗೆ ಅಂದಾಜು 650 ಕೋಟಿ ರೂಪಾಯಿ ಉಳಿತಾಯವಾಗಿದೆ. ಮಾರ್ಚ್ ಒಳಗೆ 125 ಕೋಟಿ ರೂ.ಮೌಲ್ಯದ ಜನೌಷಧಿ ಮಾರಾಟದ ಗುರಿ ಹೊಂದಲಾಗಿದೆ ಎಂದು ಅವರು ಹೇಳಿದ್ದಾರೆ.

ಹೆಚ್ಚುವರಿ 3.6 ಕೋಟಿ ಸುವಿಧಾ ಪ್ಯಾಡ್ ಸರಬರಾಜಿಗೆ ಕ್ರಮ ಕೈಗೊಳ್ಳಲಾಗಿದೆ. ಹಾಗೆಯೇ ಇನ್ನೂ 10 ಕೋಟಿ ಸುವಿಧಾ ಪ್ಯಾಡ್ ಖರೀದಿಸುವ ಟೆಂಡರ್ ಪ್ರಕ್ರಿಯೆ ಜಾರಿಯಲ್ಲಿದೆ. ಮಹಿಳೆಯರ ಅನುಕೂಲಕ್ಕಾಗಿ ಜನೌಷಧಿ ಕೇಂದ್ರಗಳಲ್ಲಿ ಕೇವಲ ಒಂದೇ ಒಂದು ರೂಪಾಯಿ ದರದಲ್ಲಿ “ಸುವಿಧಾ” ಹೆಸರಿನ ಸ್ಯಾನಿಟರಿ ಪ್ಯಾಡ್ ಲಭ್ಯವಿದೆ. ಇದುವರೆಗೆ 10 ಕೋಟಿ ಸುವಿಧಾ ಪ್ಯಾಡುಗಳನ್ನು ಮಾರಾಟ ಮಾಡಲಾಗಿದೆ. ಸುವಿಧಾ ಪ್ಯಾಡಿನ ದರ ಮಾರುಕಟ್ಟೆ ದರಕ್ಕೆ ಹೋಲಿಸಿದರೆ ನಾಲ್ಕೈದು ಪಟ್ಟು ಕಡಿಮೆ ಇದೆ ಎಂದು ಸದಾನಂದಗೌಡ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News