ಒಂಟಿ ಸಲಗ ದಾಳಿ: ರೈತ ಪ್ರಾಣಾಪಾಯದಿಂದ ಪಾರು

Update: 2021-01-14 12:31 GMT

ಮಡಿಕೇರಿ, ಜ.14: ಒಂಟಿ ಸಲಗದ ದಾಳಿಗೆ ಸಿಲುಕಿದ ರೈತರೊಬ್ಬರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಘಟನೆ ಸೋಮವಾರಪೇಟೆ ತಾಲೂಕಿನ ತ್ಯಾಗತ್ತೂರಿನಲ್ಲಿ ನಡೆದಿದೆ. 

ಸ್ಥಳೀಯ ಕೃಷಿಕ ನಿಂಗಪ್ಪ ಮಣಿ(57) ಎಂಬವರೇ ಕಾಡಾನೆ ದಾಳಿಗೆ ಸಿಲುಕಿದ ವ್ಯಕ್ತಿಯಾಗಿದ್ದು, ಗಾಯಗೊಂಡಿರುವ ಇವರಿಗೆ ಮಡಿಕೇರಿಯ ಅಶ್ವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. 

ಮುಂಡ್ರಮನೆ ಬಾಣೆ ವ್ಯಾಪ್ತಿಯಲ್ಲಿ ಅಳವಡಿಸಿರುವ ರೈಲ್ವೆ ಕಂಬಿಗಳ ತಡೆ ಬೇಲಿ ಸಮೀಪ ಇಂದು ಬೆಳಗ್ಗೆ ನಡೆದುಕೊಂಡು ಹೋಗುತ್ತಿದ್ದ ನಿಂಗಪ್ಪ ಮಣಿ ಅವರ ಮೇಲೆ ಒಂಟಿ ಸಲಗ ಏಕಾಏಕಿ ದಾಳಿ ಮಾಡಿದೆ. ಇದನ್ನು ಗಮನಿಸಿದ ಸ್ಥಳೀಯರಾದ ಹರೀಶ್ ಹಾಗೂ ಸುಧಾ ಅವರು ಜೋರಾಗಿ ಕಿರುಚಿಕೊಂಡಿದ್ದರಿಂದ ಕಾಡಾನೆ ಅಲ್ಲಿಂದ ಕಾಲ್ಕಿತ್ತಿದೆ. ಅದೃಷ್ಟವಶಾತ್ ನಿಂಗಪ್ಪ ಮಣಿ ಅವರು ಪ್ರಾಣಾಪಾದಿಂದ ಪಾರಾದರಾದರೂ ಎಡಕೈಗೆ ಗಾಯವಾಗಿರುವುದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ರೈಲ್ವೆ ಕಂಬಿಗಳ ತಡೆ ಬೇಲಿಯ ಪಕ್ಕದಲ್ಲೇ ಇರುವ ಟ್ರಾನ್ಸ್‍ಫಾರ್ಮರ್ ಕೂಡ ಕಾಡಾನೆಗಳ ದಾಳಿಯಿಂದ ಹಾನಿಗೀಡಾಗಿದ್ದು, ವಿದ್ಯುತ್ ತಂತಿಗಳು ಅಪಾಯವನ್ನು ಆಹ್ವಾನಿಸುತ್ತಿವೆ. ತಂತಿ ತುಂಡಾಗಿ ಬೇಲಿಯ ಮೇಲೆ ಬಿದ್ದರೆ ವಿದ್ಯುತ್ ಹರಿದು ದೊಡ್ಡ ಅನಾಹುತವೇ ನಡೆದು ಹೋಗಬಹುದೆಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಬೇಲಿ ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಆರೋಪಿಸಿದ್ದಾರೆ.

ಸ್ಥಳಕ್ಕೆ ಮೀನುಕೊಲ್ಲಿ ಅರಣ್ಯ ವಿಭಾಗದ ವನಪಾಲಕ ಕೂಡಕಂಡಿ ಸುಬ್ರಾಯ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಗಾಯಾಳುವನ್ನು ಆಸ್ಪತೆಗೆ ದಾಖಲಿಸಲು ಸಹಕರಿಸಿದರು.

ಸ್ಥಳದಲ್ಲಿದ್ದ ಗ್ರಾ.ಪಂ ಸದಸ್ಯ ಮನುಮಹೇಶ್ ಒಂಟಿ ಸಲಗ ದಾಳಿ ಕುರಿತು ಪ್ರಕರಣ ದಾಖಲಿಸಿದರು. ಕಾಡಾನೆಗಳ ಉಪಟಳವನ್ನು ಶಾಶ್ವತವಾಗಿ ನಿಯಂತ್ರಿಸದಿದ್ದಲ್ಲಿ ಮತ್ತು ಬೇಲಿಯ ಪಕ್ಕದಲ್ಲೇ ಇರುವ ಟ್ರಾನ್ಸ್ ಫಾರ್ಮರ್ ನ್ನು ಸ್ಥಳಾಂತರಿಸದಿದ್ದಲ್ಲಿ ಗ್ರಾಮಸ್ಥರು ಒಗ್ಗೂಡಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಟ್ರಾನ್ಸ್‍ಫಾರ್ಮರ್ ಸ್ಥಳಾಂತರಕ್ಕೆ ಚೆಸ್ಕಾಂ ಇಲಾಖೆಗೆ ಮನವಿ ಸಲ್ಲಿಸಿ ಒಂದು ವರ್ಷವೇ ಆಗಿದೆ. ಆದರೆ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಅರಣ್ಯ ಅಧಿಕಾರಿಗಳು ಆರೋಪಿಸಿದ್ದಾರೆ.


ಈ ಸಂದರ್ಭ ಗ್ರಾಮಸ್ಥರಾದ ಪಿ.ಎನ್.ಶರಣ್, ಗಿರೀಶ್, ಜಯಂತ್ ಮತ್ತಿತರರು ಹಾಜರಿದ್ದರು. ಫೋಟೋ :: ಎಲಿಫೆಂಟ್
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News