ನೂತನ ಕೃಷಿ ಕಾಯ್ದೆಗಳನ್ನು ಕೂಡಲೇ ಕೈಬಿಡಲು ಎಸ್‍ಡಿಪಿಐ ಒತ್ತಾಯ

Update: 2021-01-14 17:46 GMT

ಬೆಂಗಳೂರು, ಜ.14: ಕೇಂದ್ರ ಸರಕಾರ ತನ್ನ ಮೊಂಡುತನ ಕೈಬಿಟ್ಟು ನೂತನ ಕೃಷಿ ಕಾನೂನುಗಳನ್ನು ತಕ್ಷಣ ಹಿಂಪಡೆಯಬೇಕೆಂದು ಎಸ್‍ಡಿಪಿಐ (ಸೋಶಿಯಲ್ ಡೆಮಾಕ್ರಿಟಿಕ್ ಪಾರ್ಟಿ ಆಫ್ ಇಂಡಿಯಾ) ಒತ್ತಾಯಿಸಿದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಎಸ್‍ಡಿಪಿಐ, ರೈತರ ಪ್ರತಿಭಟನೆ ಕುರಿತ ಅರ್ಜಿಯ ವಿಚಾರಣೆ ವೇಳೆ, ಸುಪ್ರೀಂಕೋರ್ಟ್ ಈ ಸಮಸ್ಯೆಯನ್ನು ಕೇಂದ್ರ ಸರಕಾರ ಸರಿಯಾಗಿ ನಿಭಾಯಿಸುತ್ತಿದೆ ಎಂದು ನಾವು ಭಾವಿಸುವುದಿಲ್ಲವೆಂದು ಹೇಳಿರುವುದು ಕೇಂದ್ರ ಸರಕಾರದ ಭಂಡ ಧೈರ್ಯ ಮತ್ತು ದುರಹಂಕಾರಕ್ಕೆ ನೀಡಿದ ಹೊಡೆತವಾಗಿದೆ ಎಂದು ಅಭಿಪ್ರಾಯಿಸಿದೆ.

ಸಂಸತ್‍ನಲ್ಲಿ ಸಮರ್ಪಕವಾಗಿ ಚರ್ಚೆ ನಡೆಸದೆ ಕೇಂದ್ರ ಸರಕಾರ ಇತ್ತೀಚೆಗೆ ಅಂಗೀಕರಿಸಿದ ಮೂರು ಕೃಷಿ ಕಾನೂನುಗಳು ರೈತರಿಗೆ ಹಾನಿಕಾರಕವಾಗಿದ್ದು, ಕಾರ್ಪೋರೇಟ್ ದೈತ್ಯರಿಗೆ ಕೃಷಿ ಉತ್ಪನ್ನ ಮಾರುಕಟ್ಟೆಗೆ ಪ್ರವೇಶಿಸಲು ಸಹಾಯ ಮಾಡುವ ಉದ್ದೇಶವನ್ನು ಹೊಂದಿದೆ ಎಂದು ಆತಂಕ ವ್ಯಕ್ತಪಡಿಸಿದೆ.

ಒಂದು ವೇಳೆ ಕಾಯ್ದೆ ಜಾರಿಯಾದರೆ ಕಾರ್ಪೋರೇಟ್ ದೈತ್ಯರು ನಿಗದಿಪಡಿಸಿದ ಬೆಲೆಯಲ್ಲಿ ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಇದು ಅನಿವಾರ್ಯಗೊಳಿಸುತ್ತದೆ. ಹೀಗಾಗಿ ಕೇಂದ್ರ ಸರಕಾರ ಕೂಡಲೇ ನೂತನ ಕಾಯ್ದೆಗಳನ್ನು ಕೈಬಿಡಬೇಕೆಂದು ಎಸ್‍ಡಿಪಿಐ ಒತ್ತಾಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News