ಸುಪ್ರಿಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ ಶೃಂಗೇರಿ ಶಾರದಾ ಪೀಠಕ್ಕೆ ಭೇಟಿ

Update: 2021-01-14 18:40 GMT

ಶೃಂಗೇರಿ, ಜ.15: ಸುಪ್ರಿಂಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ ಶ್ರೀ ಶಾರದಾ ಪೀಠಕ್ಕೆ ಗುರುವಾರ ಭೇಟಿ ನೀಡಿದರು.

ಬೆಳಗ್ಗೆ ಮಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಕೊರಡಕಲ್ಲು ಹೆಲಿಪ್ಯಾಡಿಗೆ ಆಗಮಿಸಿದ ನ್ಯಾಯಮೂರ್ತಿಗಳು, ಪೊಲೀಸ್ ಧ್ವಜವಂದನೆ ಸ್ವೀಕರಿಸಿದರು. ನಂತರ ಶ್ರೀಮಠಕ್ಕೆ ಆಗಮಿಸಿದರು. ಶ್ರೀಮಠದ ಎದುರು ಶ್ರೀಮಠದ ಆಡಳಿತಾಧಿಕಾರಿ ಡಾ.ವಿ.ಆರ್.ಗೌರಿಶಂಕರ್ ಫಲ ಪುಷ್ಪ ನೀಡಿ ಸ್ವಾಗತ ಕೋರಿದರು.

ಶ್ರೀಮಠದ ವಸತಿ ಗೃಹದಲ್ಲಿ ವಾಸ್ತವ್ಯ ಹೂಡಿರುವ ಅವರು ಶ್ರೀ ಶಾರದಾಂಬಾ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಶ್ರೀಮಠದಲ್ಲಿರುವ ಶ್ರೀ ಶಕ್ತಿಗಣಪತಿಗೆ ಪೂಜೆ ಸಲ್ಲಿಸಿದರು. ನಂತರ ಹೊರ ಆವರಣದಲ್ಲಿರುವ ಶ್ರೀ ತೋರಣ ಗಣಪತಿ, ಶ್ರೀ ಶಂಕರಚಾರ್ಯ ದೇವಸ್ಥಾನ, ಶ್ರೀ ವಿದ್ಯಾಶಂಕರ ದೇಗುಲ, ಶ್ರೀ ಸುಬ್ರಮಣ್ಯ ಸ್ವಾಮಿ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದರು.

ಮಧ್ಯಾಹ್ನ ನರಸಿಂಹವನದಲ್ಲಿರುವ ಗುರುಭವನಕ್ಕೆ ಶ್ರೀಮಠದಿಂದ ಕಾಲ್ನಡಿಗೆಯಲ್ಲಿ ತೆರಳಿ ಉಭಯ ಜಗದ್ಗುರುಗಳಾದ ಶ್ರೀ ಭಾರತೀತೀರ್ಥ ಸ್ವಾಮೀಜಿ ಹಾಗೂ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಗಳ ಆಶೀರ್ವಾದ ಪಡೆದರು. ನ್ಯಾಯಮೂರ್ತಿಗಳೊಂದಿಗೆ ಅವರ ಪುತ್ರ ಶ್ರೀನಿವಾಸ್ ಇದ್ದರು.

ಬಿಗಿ ಪೊಲೀಸ್ ಬಂದೋಬಸ್ತ್: ನ್ಯಾಯಮೂರ್ತಿಗಳ ಆಗಮನದ ಹಿನ್ನಲೆಯಲ್ಲಿ ಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಹೆಚ್ಚುವರಿ ಪೊಲೀಸ್ ಪಡೆಯನ್ನು ಬಂದೋಬಸ್ತ್ ಗಾಗಿ ನಿಯೋಜಿಸಲಾಗಿದ್ದು, ನ್ಯಾಯಮೂರ್ತಿಗಳು ಸಂಚರಿಸುವ ಸಂದರ್ಭದಲ್ಲಿ ಝೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಲಾಗಿತ್ತು.

ಜಿಲ್ಲಾಧಿಕಾರಿ ಗೌತಮ್ ಬಗಾದಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಚ್.ಅಕ್ಷಯ್, ಉಪ ವಿಭಾಗಾಧಿಕಾರಿ ನಾಗರಾಜ್ ಮತ್ತಿತರ ಅಧಿಕಾರಿಗಳು ಇದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News