ಶಾಲಾ ಶುಲ್ಕ ನಿಗದಿ ಕುರಿತ ಸಭೆ: ಪೋಷಕರು-ಆಡಳಿತ ಮಂಡಳಿಗಳ ನಡುವೆ ಮಾತಿನ ಚಕಮಕಿ

Update: 2021-01-15 15:36 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜ.15: ಶಾಲಾ ಶುಲ್ಕ ನಿಗದಿಗೆ ಸಂಬಂಧಿಸಿದಂತೆ ಇಂದು ಸಾರ್ವಜನಿಕ ಶಿಕ್ಷಣ ಇಲಾಖಾ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪೋಷಕರು ಹಾಗೂ ಆಡಳಿತ ಮಂಡಳಿಗಳ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಅನ್ಬುಕುಮಾರ್ ಅಧ್ಯಕ್ಷತೆಯಲ್ಲಿ ರುಪ್ಸಾ(ಮಾನ್ಯತೆ ಪಡೆದ ಅನುದಾನ ರಹಿತ ಶಾಲೆಗಳ ಸಂಘ), ಕ್ಯಾಮ್ಸ್ ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ಪೋಷಕರ ಸಂಘಟನೆಗಳ ಸದಸ್ಯರು ತಮ್ಮ ಅಭಿಪ್ರಾಯಗಳನ್ನು ಆಯುಕ್ತರಿಗೆ ಲಿಖಿತ ರೂಪದಲ್ಲಿ ಸಲ್ಲಿಸಿದ್ದಾರೆ.

ಈ ವೇಳೆ ಪೋಷಕರ ಸಂಘಟನೆಯ ಸದಸ್ಯರು, ಶಾಲಾ ಶುಲ್ಕವನ್ನು ವಿದ್ಯಾರ್ಥಿ ಸಂಖ್ಯೆಗಳ ಅನುಸಾರವಾಗಿ ಪಡೆದುಕೊಳ್ಳಬೇಕು. ಅದನ್ನು ಬಿಟ್ಟು ಹಿಂದಿನ ವರ್ಷಗಳಂತೆ ಶುಲ್ಕ ತೆಗೆದುಕೊಳ್ಳಲು ರಾಜ್ಯ ಸರಕಾರ ಅನುಮತಿ ನೀಡಬಾರದೆಂದು ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.

ಈ ವೇಳೆ ಶಾಲಾ ಶುಲ್ಕಕ್ಕೆ ಸಂಬಂಧಿಸಿದಂತೆ ಕೆಲವು ಶಿಕ್ಷಣ ಸಂಸ್ಥೆಗಳ ಪದಾಧಿಕಾರಿಗಳು ಪೋಷಕರ ನಡುವೆ ವಾಗ್ವಾದ ನಡೆದಿದ್ದು, ವಿದ್ಯಾರ್ಥಿಗಳ ಸಂಖ್ಯೆ ಆಧಾರದ ಮೇಲೆ ಶುಲ್ಕವನ್ನು ಪಡೆಯಲು ಆಗುವುದಿಲ್ಲ. ನಾವು ಶಿಕ್ಷಕರಿಗೆ, ಶಿಕ್ಷಕೇತರರಿಗೆ ಸಂಬಳ ಸೇರಿದಂತೆ ಹಲವು ಖರ್ಚು ವೆಚ್ಚಗಳನ್ನು ಭರಿಸಬೇಕಾಗುತ್ತದೆ. ಹೀಗಾಗಿ ರಾಜ್ಯ ಸರಕಾರ ಸೂಕ್ತವಾಗಿ ಪರಿಶೀಲಿಸಿ ಶಾಲಾ ಶುಲ್ಕವನ್ನು ನಿಗದಿ ಮಾಡಬೇಕೆಂದು ಒತ್ತಾಯಿಸಿದ್ದಾರೆ.

ಪೋಷಕರ ವಾದ

-250 ವಿದ್ಯಾರ್ಥಿಗಳ ಒಳಗಿರುವ ಶಾಲೆಗಳಿಗೆ ಸಂಪೂರ್ಣ ಶಾಲಾ ಶುಲ್ಕ ಕಟ್ಟುವುದು.

-250ರಿಂದ 500 ವಿದ್ಯಾರ್ಥಿಗಳಿರುವ ಶಾಲೆಗಳಿಗೆ ಶೇ.75ರಷ್ಟು ಶುಲ್ಕ.

-500ರಿಂದ 1 ಸಾವಿರ ವಿದ್ಯಾರ್ಥಿಗಳಿರುವ ಶಾಲೆಗಳಿಗೆ ಶೇ.50ರಷ್ಟು ಶುಲ್ಕ

-1 ಸಾವಿರಕ್ಕಿಂತ ಹೆಚ್ಚಿರುವ ವಿದ್ಯಾರ್ಥಿಗಳ ಶಾಲೆಗಳಿಗೆ ಶೇ.25ರಷ್ಟು ಶುಲ್ಕವನ್ನು ಕಟ್ಟುವುದಕ್ಕೆ ರಾಜ್ಯ ಸರಕಾರ ಅನುಮತಿ ನೀಡಬೇಕು.

ಶಾಲಾ ಆಡಳಿತ ಮಂಡಳಿಗಳ ವಾದ

-ವಿದ್ಯಾರ್ಥಿಗಳ ಸಂಖ್ಯೆಗಳಿಗೆ ಅನುಗುಣವಾಗಿ ಶಾಲಾ ಶುಲ್ಕವನ್ನು ನಿಗದಿಪಡಿಸಲು ಬರುವುದಿಲ್ಲ.

-ಶಿಕ್ಷಕರು, ಶಿಕ್ಷಕೇತರರ ಸಂಬಳ ಸೇರಿದಂತೆ ಮೂಲಭೂತ ಅವಶ್ಯಕತೆಗಳಿಗೆ ಆರ್ಥಿಕ ವ್ಯಯ ಆಗಲಿದೆ. ಹೀಗಾಗಿ ಶೇ.25ರಷ್ಟು, 50ರಷ್ಟು ಶಾಲಾ ಶುಲ್ಕ ಕಟ್ಟಿದರೆ ನಮಗೆ ಆರ್ಥಿಕ ಹೊರೆಯಾಗಲಿದೆ.

ಕಳೆದ ಹತ್ತು ತಿಂಗಳಿಂದ ಶಾಲೆಗಳು ಸಂಪೂರ್ಣವಾಗಿ ಬಂದ್ ಆಗಿದ್ದು, ಹೆಚ್ಚಿನ ಶಾಲೆಗಳ ಆನ್‍ಲೈನ್ ಕ್ಲಾಸ್‍ಗಳು ನಡೆದಿಲ್ಲ. ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಕೋವಿಡ್ ಲಾಕ್‍ಡೌನ್‍ನಿಂದ ಹೆಚ್ಚಿನ ಪೋಷಕರು ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಲಾ ಶುಲ್ಕದ ಪ್ರಮಾಣವನ್ನು ಸಾಕಷ್ಟು ಕಡಿತ ಮಾಡಲೇಬೇಕು.

-ಯೋಗಾನಂದ್, ಅಧ್ಯಕ್ಷ, ಪೋಷಕರ ಸಂಘ

ಕೋವಿಡ್ ಲಾಕ್‍ಡೌನ್‍ನಿಂದಾಗಿ ಎಲ್ಲರಿಗೂ ಆರ್ಥಿಕ ಸಂಕಷ್ಟ ಎದುರಾಗಿದೆ. ಖಾಸಗಿ ಶಾಲಾ ಆಡಳಿತ ಮಂಡಳಿಗಳು, ಶಿಕ್ಷಕರು ಸಾಕಷ್ಟು ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ರಾಜ್ಯ ಸರಕಾರ ಇವೆಲ್ಲವನ್ನು ಗಮನಿಸಿ ವೈಜ್ಞಾನಿಕ ರೀತಿಯಲ್ಲಿ ಶಾಲಾ ಶುಲ್ಕವನ್ನು ನಿಗದಿಪಡಿಸಬೇಕು.

-ಶಶಿಕುಮಾರ್, ಕಾರ್ಯದರ್ಶಿ, ಶಾಲಾ ಶಿಕ್ಷಕರ ಸಂಘ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News