"ಕೊವ್ಯಾಕ್ಸಿನ್ ಗಂಭೀರ ಅಡ್ಡ ಪರಿಣಾಮ ಬೀರಿದರೆ ಪರಿಹಾರ"

Update: 2021-01-16 04:08 GMT
ಫೈಲ್ ಫೋಟೋ

ಹೊಸದಿಲ್ಲಿ, ಜ.16: ಭಾರತ್ ಬಯೋಟೆಕ್ ಉತ್ಪಾದಿಸಿದ ಕೊವ್ಯಾಕ್ಸಿನ್ ಲಸಿಕೆ ಪಡೆದ ಫಲಾನುಭವಿಗಳ ಮೇಲೆ ಯಾವುದೇ ಗಂಭೀರ ಅಡ್ಡ ಪರಿಣಾಮ ಉಂಟಾದರೂ ಪರಿಹಾರ ನೀಡಲು ಸಿದ್ಧ ಎಂದು ಉತ್ಪಾದಕ ಕಂಪೆನಿ ಘೋಷಿಸಿದೆ.

ಲಸಿಕೆ ಕೇಂದ್ರಗಳಲ್ಲಿ ಲಸಿಕೆ ಪಡೆಯುವ ವೇಳೆ ನೀಡುವ ಒಪ್ಪಿಗೆ ಪತ್ರದಲ್ಲಿ ಪರಿಹಾರ ಪ್ರಮುಖ ಅಂಶವಾಗಿದೆ. ಆರು ನಗರಗಳ ಕೇಂದ್ರ ಸರಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ಕೇಂದ್ರಗಳನ್ನು ತೆರೆಯಲಾಗಿದೆ.

ಲಸಿಕೆ ಫಲಾನುಭವಿಗಳಿಗೆ ಯಾವುದೇ ಗಂಭೀರ ಅಡ್ಡ ಪರಿಣಾಮ ಎದುರಾದಲ್ಲಿ ಸರಕಾರ ನಿಗದಿಪಡಿಸಿದ ಆಸ್ಪತ್ರೆಗಳಲ್ಲಿ ಅಥವಾ ಅನುಮತಿ ನೀಡಲಾದ ಕೇಂದ್ರಗಳಲ್ಲಿ ಆರೈಕೆ ಮಾಡಲಾಗುತ್ತದೆ ಎಂದು ಒಪ್ಪಿಗೆ ಪತ್ರದ ನಮೂನೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಈ ಹೊಣೆಗಾರಿಕೆ ವಿಚಾರವು ಲಸಿಕೆ ಉತ್ಪಾದಕ ಕಂಪೆನಿ ಮತ್ತು ಸರಕಾರ ನಡುವಿನ ಪ್ರಶ್ನಾರ್ಹ ಅಂಶವಾಗಿತ್ತು. ಯಾವುದೇ ಅವಘಡಗಳು ಸಂಭವಿಸಿದಲ್ಲಿ ನಷ್ಟ ಪರಿಹಾರ ನೀಡುವಂತೆ ಕಂಪೆನಿ ಆಗ್ರಹಿಸಿತ್ತು. ಯಾವುದೇ ಪ್ರತಿಕೂಲ ಪರಿಣಾಮಕ್ಕೆ ಲಸಿಕೆ ಕಂಪೆನಿಗಳೇ ಹೊಣೆ ಎಂದು ಲಸಿಕೆ ಖರೀದಿ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಮೂರು ಪುಟಗಳ ಒಪ್ಪಿಗೆ ಪತ್ರ ಈ ಎಲ್ಲ ಕಳಕಳಿಯನ್ನು ಶಮನಗೊಳಿಸುತ್ತದೆಯೇ ಎನ್ನುವುದು ಶನಿವಾರದ ಫಲಿತಾಂಶ ಬಳಿಕ ತಿಳಿಯಲಿದೆ ಎಂದು ಮಹಾರಾಷ್ಟ್ರ ಅಧಿಕಾರಿಗಳು ಹೇಳಿದ್ದಾರೆ. ಇನ್ನೂ ಮೂರನೇ ಹಂತದ ಪರೀಕ್ಷೆಗೆ ಒಳಗಾಗದ ಹಾಗೂ ದೊಡ್ಡ ಪ್ರಮಾಣದಲ್ಲಿ ಲಸಿಕೆಯ ಪರಿಣಾಮದ ಅಂಕಿಅಂಶಗಳು ಲಭ್ಯವಿಲ್ಲದಿದ್ದರೂ, ಲಸಿಕೆಗೆ ಅನುಮೋದನೆ ನೀಡಿರುವ 11 ರಾಜ್ಯಗಳ ಪೈಕಿ ಮಹಾರಾಷ್ಟ್ರ ಕೂಡಾ ಒಂದಾಗಿದೆ.

ಕೋವಿಶೀಲ್ಡ್ ಪಡೆಯುವ ಫಲಾನುಭವಿಗಳಿಗಿಂತ ಭಿನ್ನವಾಗಿ ಕೊವ್ಯಾಕ್ಸಿನ್ ಫಲಾನುಭವಿಗಳು ಒಪ್ಪಿಗೆ ಪತ್ರಕ್ಕೆ ಸಹಿ ಮಾಡಬೇಕಾಗುತ್ತದೆ. ಈ ಲಸಿಕೆಯನ್ನು ತುರ್ತು ಸಂದರ್ಭಗಳಲ್ಲಿ ನಿರ್ಬಂಧಿತವಾಗಿ ಬಳಸಲು ಮಾತ್ರ ಅನುಮತಿ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News