ವಿಶ್ವದಲ್ಲಿ 20 ಲಕ್ಷ ದಾಟಿದ ಕೋವಿಡ್ ಸೋಂಕಿತರ ಸಾವು

Update: 2021-01-16 04:07 GMT

ಹೊಸದಿಲ್ಲಿ, ಜ.16: ವಿಶ್ವದಲ್ಲಿ ಕೋವಿಡ್-19 ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಶುಕ್ರವಾರ 20 ಲಕ್ಷ ದಾಟಿದೆ. ಅಮೆರಿಕದಲ್ಲಿ ವಿಶ್ವದಲ್ಲೇ ಗರಿಷ್ಠ ಅಂದರೆ 3,88,705 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಬ್ರೆಝಿಲ್, ಭಾರತ, ಮೆಕ್ಸಿಕೊ ಹಾಗೂ ಬ್ರಿಟನ್ ನಂತರದ ಸ್ಥಾನಗಳಲ್ಲಿವೆ.

ಈಗಾಗಲೇ ಫೈಝರ್ ಇನ್‌ಕಾರ್ಪೊರೇಶನ್ ಮತ್ತು ಬಯೋಎನ್‌ಟೆಕ್ ಎಸ್ ಇ ಲಸಿಕೆ ಮತ್ತು ಮೊಡೆರ್ನಾ ಇನ್‌ಕಾರ್ಪೊರೇಶನ್ ಲಸಿಕೆಗಳು ಅಮೆರಿಕದಲ್ಲಿ ನಿಧಾನವಾಗಿ ಲಭ್ಯವಾಗುತ್ತಿದ್ದರೂ, ವಿಶ್ವದ ಹಲವು ಕಡೆಗಳಿಗೆ ಇನ್ನೂ ತಲುಪಿಲ್ಲ. ಆದ್ದರಿಂದ ಬೇಸಿಗೆಗೆ ಮುನ್ನ ಇದರ ಹರಡುವಿಕೆಯನ್ನು ನಿಯಂತ್ರಿಸುವ ಸಾಧ್ಯತೆಗಳು ಕ್ಷೀಣ ಎನ್ನಲಾಗುತ್ತಿದೆ.

"ನಾವು ಸಾಂಕ್ರಾಮಿಕದ ದೊಡ್ಡ ಕಾಳ್ಗಿಚ್ಚನ್ನು ಕಾಣುತ್ತಿದ್ದೇವೆ. ಆದರೆ ಕಾಳ್ಗಿಚ್ಚು ಆರಿಸಲು ನಿಮ್ಮಲ್ಲಿ ಒಂದು ಬಕೆಟ್ ನೀರು ಇದ್ದರೆ ಸಾಲದು" ಎಂದು ಯಾಲೆ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನ ಸಾಂಕ್ರಾಮಿಕ ರೋಗ ತಜ್ಞ ಮತ್ತು ಗ್ಲೋಬಲ್ ಹೆಲ್ತ್ ಜೆಸ್ಟೀಸ್ ಪಾರ್ಟರ್‌ಶಿಪ್‌ನ ಸಹ ನಿರ್ದೇಶಕ ಗ್ರೆಗ್ ಗೊನ್ಸಾಲ್ವಿಸ್ ಹೇಳಿದ್ದಾರೆ.

ಕಳೆದ ವರ್ಷ ಮಲೇರಿಯಾ ಹಾಗೂ ಕ್ಷಯ ರೋಗಗಳಿಂದ ಮೃತಪಟ್ಟ ಒಟ್ಟು ಸಂಖ್ಯೆಗಿಂತ ಅಧಿಕ ಮಂದಿ ಈಗಾಗಲೇ ಕೋವಿಡ್-19 ಸೋಂಕಿಗೆ ಬಲಿಯಾಗಿದ್ದಾರೆ. ವಾರ್ಷಿಕ ಸಾವಿನ ಸಂಖ್ಯೆ 2005ರಲ್ಲಿ ಏಡ್ಸ್ ಸಾವು ಉತ್ತುಂಗದಲ್ಲಿದ್ದಾಗ ಸಂಭವಿಸಿದ ಸಾವಿನ ಸಂಖ್ಯೆಗೆ ಸನಿಹವಾಗಿದೆ. ಮುಂದಿನ ಬೇಸಿಗೆಯಲ್ಲಿ ಫ್ರಾನ್ಸ್‌ನಿಂದ ಈ ಸಾಂಕ್ರಾಮಿಕ ನಿರ್ಗಮಿಸುವ ಸಾಧ್ಯತೆ ಇದೆ ಎಂದು ಅಲ್ಲಿನ ಪ್ರಧಾನಿ ಜೇನ್ ಕ್ಯಾಸ್ಟೆಕ್ಸ್ ಅಭಿಪ್ರಾಯಪಟ್ಟಿದ್ದಾರೆ.

ಈ ಬೇಸಿಗೆಯ ಒಳಗಾಗಿ ಬಹುತೇಕ ಮಂದಿಗೆ ಅಮೆರಿಕದಲ್ಲಿ ಲಸಿಕೆ ಲಭ್ಯವಾಗಲಿದೆ ಎಂದು ಅಮೆರಿಕದ ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ. 2021ರ ಕೊನೆಗೆ ವಿಶ್ವದಲ್ಲಿ 30 ಲಕ್ಷ ಮಂದಿ ಈ ಸಾಂಕ್ರಾಮಿಕದಿಂದ ಸಾವಿಗೀಡಾಗಲಿದ್ದಾರೆ ಎಂದು ವಾಷಿಂಗ್ಟನ್ ವಿವಿ ಅಂದಾಜಿಸಿದೆ. ಅಂದರೆ ಈ ವರ್ಷ ಕೋವಿಡ್-19ನಿಂದ ಮೃತಪಡುವವರ ಸಂಖ್ಯೆ 10 ಲಕ್ಷದ ಒಳಗಿರುತ್ತದೆ. ಈ ವರ್ಷದ ಕೊನೆಗೆ 28.9 ಲಕ್ಷ ಮಂದಿ ಸೋಂಕಿಗೆ ಬಲಿಯಾಗಲಿದ್ದಾರೆ ಎಂದು ಅಂದಾಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News