ಕೊರೋನ ವಿರುದ್ಧ ದೇಶವ್ಯಾಪಿ ಲಸಿಕೆ ಅಭಿಯಾನಕ್ಕೆ ಪ್ರಧಾನಿ ಮೋದಿ ಚಾಲನೆ

Update: 2021-01-16 16:23 GMT

ಹೊಸದಿಲ್ಲಿ,ಜ.16: ದೇಶದ ಬೃಹತ್ ಲಸಿಕೆ ನೀಡಿಕೆ ಅಭಿಯಾನಕ್ಕೆ ಶನಿವಾರ ಇಲ್ಲಿ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ಕೊರೋನ ಯೋಧರು ಮತ್ತು ವಿಜ್ಞಾನಿಗಳಿಗೆ ಗೌರವಗಳನ್ನು ಸಲ್ಲಿಸಿದರಲ್ಲದೆ,ಲಸಿಕೆಗಳ ಕುರಿತು ಅಪಪ್ರಚಾರ ಅಥವಾ ವದಂತಿಗಳಿಗೆ ಬಲಿಯಾಗದಂತೆ ದೇಶದ ಪ್ರಜೆಗಳಿಗೆ ಎಚ್ಚರಿಕೆಯನ್ನು ನೀಡಿದರು. ಇದೇ ವೇಳೆ ಕೋವಿಡ್-19ರ ವಿರುದ್ಧ ಲಸಿಕೆ ಪಡೆದ ದೇಶದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಸ್ವಚ್ಛತಾ ಕಾರ್ಮಿಕ ಮನೀಷ್ ಕುಮಾರ್ ಅವರು ಪಾತ್ರರಾಗಿದ್ದಾರೆ.

ದೇಶಾದ್ಯಂತ ಸ್ಥಾಪಿಸಲಾಗಿರುವ 3,000ಕ್ಕೂ ಅಧಿಕ ಲಸಿಕೆ ನೀಡಿಕೆ ಕೇಂದ್ರಗಳಲ್ಲಿ ಒಂದಾಗಿರುವ ಇಲ್ಲಿಯ ಏಮ್ಸ್‌ನಲ್ಲಿ ಕುಮಾರ ಲಸಿಕೆಯನ್ನು ಪಡೆದರು. ಮೊದಲ ದಿನ ಮೂರು ಲಕ್ಷಕ್ಕೂ ಅಧಿಕ ಜನರಿಗೆ ಲಸಿಕೆ ನೀಡಲು ತಾನು ಉದ್ದೇಶಿಸಿದ್ದೇನೆ ಎಂದು ಸರಕಾರವು ಹೇಳಿತ್ತಾದರೂ,ದಿನದ ಅಂತ್ಯದಲ್ಲಿ 1,91 ಲಕ್ಷ ಜನರು ಮಾತ್ರ ಲಸಿಕೆಗಳನ್ನು ಪಡೆದುಕೊಂಡಿದ್ದರು.

ಫಲಾನುಭವಿಗಳ ಕೊರತೆಗೆ ಲಸಿಕೆಗಳ ಕುರಿತು ಜನರಲ್ಲಿರುವ ಹಿಂಜರಿಕೆ ಕಾರಣವಾಗಿದೆ ಎಂದು ಸರಕಾರದ ಮೂಲಗಳು ತಿಳಿಸಿದವು.

ಮೊದಲ ದಿನದ ಲಸಿಕೆ ನೀಡಿಕೆ ಯಶಸ್ವಿಯಾಗಿದೆ. ಲಸಿಕೆ ನೀಡಿದ ಬಳಿಕ ಯಾರೂ ಅಸ್ವಸ್ಥಗೊಂಡಿರಲಿಲ್ಲ. ಕೋವಿನ್ ಸಾಫ್ಟ್‌ವೇರ್‌ನಲ್ಲಿ ಮಾತ್ರ ಕೆಲವು ತೊಡಕುಗಳಿದ್ದವು ಎಂದು ಅಧಿಕಾರಿಗಳು ತಿಳಿಸಿದರು.

 ‘ಹೆಚ್ಚಿನ ಸಿಬ್ಬಂದಿಗಳು ಲಸಿಕೆ ಪಡೆಯಲು ಭೀತಿಗೊಂಡಿದ್ದರು. ಹೀಗಾಗಿ ನನಗೇ ಮೊದಲು ಲಸಿಕೆ ನೀಡುವಂತೆ ಮೇಲಧಿಕಾರಿಗಳಿಗೆ ಹೇಳಿದ್ದೆ. ಭಯಪಡುವ ಅಗತ್ಯವಿಲ್ಲ ಎನ್ನುವುದನ್ನು ನನ್ನ ಸಹೋದ್ಯೋಗಿಗಳಿಗೆ ಸಾಬೀತುಗೊಳಿಸಲು ನಾನು ಬಯಸಿದ್ದೆ. ಲಸಿಕೆಯನ್ನು ಪಡೆದುಕೊಳ್ಳದಂತೆ ನನ್ನ ಪತ್ನಿಯೂ ನನಗೆ ತಿಳಿಸಿದ್ದಳು. ಅದು ಕೇವಲ ಚುಚ್ಚುಮದ್ದು ಆಗಿದೆ ಎಂದು ನಾನು ಆಕೆಗೆ ಹೇಳಿದ್ದೆ. ಲಸಿಕೆಯ ಡೋಸ್‌ನ್ನು ಪಡೆದುಕೊಂಡ ಬಳಿಕ ನಾನು ಕ್ಷೇಮವಾಗಿದ್ದೇನೆ ಎಂದು ಪತ್ನಿಗೆ ತಿಳಿಸುವಂತೆ ನನ್ನ ತಾಯಿಗೆ ಸೂಚಿಸಿದ್ದೇನೆ ’ಎಂದು ಕುಮಾರ್ ಸುದ್ದಿಗಾರರಿಗೆ ತಿಳಿಸಿದರು.

‘ದವಾಯಿ ಭಿ,ಕಡಾಯಿ ಭಿ (ಔಷಧಿಗೂ ಸಿದ್ಧ,ಶಿಸ್ತಿಗೂ ಸಿದ್ಧ) ’ ಎಂಬ ಹೊಸ ಧ್ಯೇಯವಾಕ್ಯವನ್ನು ಭಾರತಕ್ಕೆ ನೀಡಿದ ಮೋದಿ,ಲಸಿಕೆ ಪಡೆದ ಬಳಿಕವೂ ಕಟ್ಟೆಚ್ಚರ ವಹಿಸುವಂತೆ ಮತ್ತು ಮಾಸ್ಕ್ ಹಾಗೂ ಸುರಕ್ಷಿತ ಅಂತರ ಸೇರಿದಂತೆ ಕೊರೋನವೈರಸ್ ವಿರುದ್ಧ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವಂತೆ ಜನರಿಗೆ ಕಿವಿಮಾತು ಹೇಳಿದರು.

ಕೊರೋನ ಲಸಿಕೆಯ ಎರಡು ಡೋಸ್‌ಗಳು ಅತ್ಯಂತ ಮುಖ್ಯವಾಗಿವೆ. ಒಂದು ಡೋಸ್ ತೆಗೆದುಕೊಂಡು ಇನ್ನೊಂದು ಡೋಸ್‌ನ್ನು ತೆಗೆದುಕೊಳ್ಳುವುದನ್ನು ಮರೆಯುವ ತಪ್ಪನ್ನು ಮಾಡಬೇಡಿ. ತಜ್ಞರು ಹೇಳಿರುವಂತೆ ಎರಡೂ ಡೋಸ್‌ಗಳ ನೀಡಿಕೆ ನಡುವೆ ಸುಮಾರು ಒಂದು ತಿಂಗಳ ಅಂತರವಿರುತ್ತದೆ ಎಂದು ಅವರು ಹೇಳಿದರು.

ಇನ್ನೂ ಕ್ಲಿನಿಕಲ್ ಟ್ರಯಲ್ ಹಂತದಲ್ಲಿದ್ದರೂ ತುರ್ತು ಬಳಕೆಗೆ ಸರಕಾರದಿಂದ ಒಪ್ಪಿಗೆಯನ್ನು ಪಡೆದುಕೊಂಡಿರುವ ಭಾರತ ಬಯೊಟೆಕ್‌ನ ಕೋವ್ಯಾಕ್ಸಿನ್ ಲಸಿಕೆಯ ಕುರಿತು ಸೃಷ್ಟಿಯಾಗಿರುವ ವಿವಾದದ ನಡುವೆಯೇ ಮೋದಿ,ಲಸಿಕೆಗಳ ಕುರಿತು ಯಾವುದೇ ಅಪಪ್ರಚಾರಗಳಿಗೆ ಜನರು ಬಲಿಯಾಗಬಾರದು ಎಂದು ಒತ್ತಿ ಹೇಳಿದರು.

 ಎರಡು ‘ಮೇಡ್ ಇನ್ ಇಂಡಿಯಾ ’ ಲಸಿಕೆಗಳ ಸುರಕ್ಷತೆ ಮತ್ತು ಪರಿಣಾಮಕಾರಿತ್ವದ ಬಗ್ಗೆ ನಮ್ಮ ವಿಜ್ಞಾನಿಗಳು ಮತ್ತು ತಜ್ಞರಿಗೆ ಭರವಸೆ ಮೂಡಿದ ಬಳಿಕವೇ ಲಸಿಕೆಯ ತುರ್ತು ಬಳಕೆಗೆ ಅವರು ಅನುಮತಿ ನೀಡಿದ್ದಾರೆ. ಹೀಗಾಗಿ ಅಪಪ್ರಚಾರ,ವದಂತಿಗಳು ಮತ್ತು ತಪ್ಪು ಮಾಹಿತಿಗಳಿಂದ ದೂರವಿರಿ ಎಂದು ಮೋದಿ ಜನತೆಯನ್ನು ಕೋರಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News