ದೇವತೆಗಳ ಬಗ್ಗೆ ಅಪಮಾನ ಮಾಡಿದವರಿಗೆ ಸಚಿವ ಸ್ಥಾನ: ಮತ್ತೊಮ್ಮೆ ಸಿಎಂ ವಿರುದ್ಧ ಯತ್ನಾಳ್ ಆಕ್ರೋಶ

Update: 2021-01-16 12:31 GMT

ವಿಜಯಪುರ, ಜ. 16: ‘ಬಿಜೆಪಿ ಶಾಸಕನಾದ ನನಗೆ 100 ಕೋಟಿ ರೂ. ನೀಡಲಿಲ್ಲ, ಆದರೆ ಕಾಂಗ್ರೆಸ್ ಪಕ್ಷದ ಶಾಸಕ ಝಮೀರ್ ಅಹ್ಮದ್ ಖಾನ್‍ಗೆ 200 ಕೋಟಿ ರೂ.ಗಳನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೀಡಿದ್ದಾರೆ. ಅಲ್ಲದೆ, ನನಗೆ ಕಲ್ಪಿಸಿದ್ದ ಭದ್ರತೆಯನ್ನು ಹಿಂಪಡೆದಿದ್ದಾರೆ ಎಂದು ವಿಜಯಪುರ ನಗರ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಬಿಎಸ್‍ವೈ ವಿರುದ್ಧ ಮತ್ತೊಮ್ಮೆ ಆಕ್ರೋಶ ಹೊರಹಾಕಿದ್ದಾರೆ.

ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನು ಅಭಿವೃದ್ದಿ ಬಗ್ಗೆ ಮಾತನಾಡಿದ್ದಕ್ಕೆ ನನಗೆ ನೀಡಿದ್ದ ಭದ್ರತೆ ಹಿಂಪಡೆದಿದ್ದಾರೆ. ನಾವು ಕೇಳಿದರೆ ಹಣ ಇಲ್ಲ ಎನ್ನುತ್ತಾರೆ. ಆದರೆ, ಝಮೀರ್ ಅಹ್ಮದ್ ಖಾನ್ ಅವರು ಕೇಳಿದರೆ ಹಣ ಕೊಡುತ್ತಾರೆ. ನಾಲ್ಕೈದು ಮಂದಿ ಕಾಂಗ್ರೆಸ್ ಶಾಸಕರಿಗೆ ಹೆಚ್ಚಿನ ಅನುದಾನ ನೀಡಿದ್ದಾರೆ. ಈ ಕುರಿತು ವಿಧಾನಸಭೆಯಲ್ಲಿ ಪ್ರಶ್ನಿಸುತ್ತೇನೆ ಎಂದರು.

ರಾಮ, ಸೀತೆ, ಬ್ರಹ್ಮ, ಸರಸ್ವತಿ ಸೇರಿದಂತೆ ದೇವಾನು ದೇವತೆಗಳ ಬಗ್ಗೆ ಅಪಮಾನ ಮಾಡಿದವರಿಗೆ ಸಚಿವ ಸ್ಥಾನ ನೀಡಿದ್ದಾರೆ ಎಂದ ದೂರಿದ ಅವರು, ಸಚಿವ ಸ್ಥಾನ ಸಿಗದ ಅತೃಪ್ತ ಶಾಸಕರು ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ಮಾಡುವ ಬಗ್ಗೆ ನನಗೆ ಗೊತ್ತಿಲ್ಲ. ನಾನು ಯಾರನ್ನು ಭೇಟಿ ಮಾಡುವ ಉದ್ದೇಶವನ್ನು ಹೊಂದಿಲ್ಲ ಎಂದರು.

ಕೀಳು ರಾಜಕಾರಣ ಮಾಡುವುದಿಲ್ಲ: ಜಗದೀಶ್ ಶೆಟ್ಟರ್ ಅವರಂತೆ ನಾನೇನು ಕೀಳು ರಾಜಕಾರಣ ಮಾಡುವುದಿಲ್ಲ. ನಾನೇನು ಸಿಎಂ ಆದ ಬಳಿಕ ಸಚಿವನಾಗಿಲ್ಲ. ಅವರು ಸಚಿವರಾಗುವ ಅವಶ್ಯಕತೆ ಇರಲಿಲ್ಲ. ಯುವಕರಿಗೆ ಅವಕಾಶ ನೀಡಬಹುದಿತ್ತು ಎಂದು ಯತ್ನಾಳ್, ಶೆಟ್ಟರ್ ವಿರುದ್ಧ ವಾಗ್ದಾಳಿ ನಡೆಸಿದರು.

ನನ್ನ ಬಳಿ ಬಹಳ ಜನರ ಇತಿಹಾಸವಿದೆ. ಸಚಿವ ಕೆ.ಎಸ್.ಈಶ್ವರಪ್ಪ ನನ್ನ ಬಗ್ಗೆ ಮಾತನಾಡಬಾರದು. ನಾನೆಂದೂ ಸಚಿವರನ್ನಾಗಿ ಮಾಡಿ ಎಂದು ಈಶ್ವರಪ್ಪ ಅವರ ಬಳಿ ಹೋಗಿಲ್ಲ. ನಾನೆಂದೂ ಲಾಬಿ ಮಾಡುವುದಿಲ್ಲ, ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ಬಿಜೆಪಿ ಉಚ್ಛಾಟಿಸಿದ್ದರಿಂದ ನಾನು ಜೆಡಿಎಸ್ ಸೇರ್ಪಡೆಯಾಗಿದ್ದೆ ಎಂದು ಹೇಳಿದರು.

ಆದೇಶಕ್ಕೂ, ಶಿಫಾರಸಿಗೂ ವ್ಯತ್ಯಾಸವಿದೆ

‘ಚಾಮರಾಜಪೇಟೆ ಕ್ಷೇತ್ರಕ್ಕೆ ನಮ್ಮ ಪಕ್ಷದ ಶಾಸಕ ಝಮೀರ್ ಅಹ್ಮದ್ ಖಾನ್ ಅವರು ಕೇಳಿದಷ್ಟು ಮುಖ್ಯಮಂತ್ರಿ ಅನುದಾನ ನೀಡಿದ್ದರೆ ಬಸನಗೌಡ ಪಾಟೀಲ್ ಯತ್ನಾಳ್ ಮಾತಿಗೆ ಅರ್ಥವಿರುತ್ತಿತ್ತು. ಮಂತ್ರಿಗಿರಿ ಕೈತಪ್ಪಿದ್ದರಿಂದ ಹತಾಶರಾಗಿ ಆಡಿರುವ ಮಾತುಗಳಿಗೆ ಹೆಚ್ಚು ಮಹತ್ವ ನೀಡುವ ಅಗತ್ಯವಿಲ್ಲ. ಸರಕಾರದಿಂದ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಪಡೆಯುವುದು ಪ್ರತಿಯೊಬ್ಬ ಶಾಸಕನ ಹಕ್ಕಾಗಿರುವಾಗ ಬ್ಲ್ಯಾಕ್‍ಮೇಲ್ ಮಾಡುವ ಅಗತ್ಯವೇನಿದೆ. ಝಮೀರ್ ಅಹ್ಮದ್ ಅವರು ಹಣ ಬಿಡುಗಡೆ ಮಾಡಿ ಎಂದು ಮನವಿ ಮಾಡಿದ್ದಾರೆ. ಅದಕ್ಕೆ ಮುಖ್ಯಮಂತ್ರಿ ಆರ್ಥಿಕ ಇಲಾಖೆಗೆ ಶಿಫಾರಸು ಮಾಡಿದ್ದಾರೆ. ಆದೇಶಕ್ಕೂ, ಶಿಫಾರಸಿಗೂ ವ್ಯತ್ಯಾಸವಿದೆ'

-ಸಿದ್ದರಾಮಯ್ಯ, ಪ್ರತಿಪಕ್ಷ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News