2,24,301 ಮಂದಿಗೆ ಕೋವಿಡ್ ಲಸಿಕೆ: ಅಡ್ಡಪರಿಣಾಮದ ಪ್ರಕರಣ 447; ಆರೋಗ್ಯ ಇಲಾಖೆ

Update: 2021-01-17 18:40 GMT

ಹೊಸದಿಲ್ಲಿ, ಜ.17: ಇದುವರೆಗೆ ದೇಶದಲ್ಲಿ ಒಟ್ಟು 2,24,301 ಜನರಿಗೆ ಕೋವಿಡ್ ಲಸಿಕೆ ನೀಡಲಾಗಿದ್ದು ಇದರಲ್ಲಿ ಕೇವಲ 447 ಅಡ್ಡಪರಿಣಾಮದ ಪ್ರಕರಣ ದಾಖಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ರವಿವಾರ ಹೇಳಿದೆ.

ಮಾಧ್ಯಮದವರೊಂದಿಗೆ ಮಾತನಾಡಿದ ಕೇಂದ್ರ ಆರೋಗ್ಯ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಮನೋಹರ್ ಅಗ್ನಾನಿ, 447 ಅಡ್ಡಪರಿಣಾಮ ಪ್ರಕರಣಗಳಲ್ಲಿ 3 ಮಂದಿಯನ್ನು ಮಾತ್ರ ಆಸ್ಪತ್ರೆಗೆ ದಾಖಲಿಸಲಾಗಿದೆ . ಉಳಿದವು ಸಣ್ಣಮಟ್ಟಿನ ಜ್ವರ, ತಲೆನೋವು, ವಾಕರಿಕೆಯಂತಹ ಪ್ರಕರಣಗಳಾಗಿದ್ದು ತುಸು ಹೊತ್ತಿನಲ್ಲೇ ಚೇತರಿಸಿಕೊಂಡಿದ್ದಾರೆ. ರವಿವಾರ ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಕರ್ನಾಟಕ, ಕೇರಳ, ಮಣಿಪುರ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಮಾತ್ರ ಲಸಿಕೆ ನೀಡಲಾಗಿದ್ದು ಇವತ್ತು 17,072 ಮಂದಿಗೆ ಲಸಿಕೆ ನೀಡಲಾಗಿದೆ ಎಂದು ಹೇಳಿದ್ದಾರೆ.

  ಶನಿವಾರ 2,07,229 ಮಂದಿ ಲಸಿಕೆ ಪಡೆದಿದ್ದರು. ರವಿವಾರ ಎಲ್ಲಾ ರಾಜ್ಯ ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಸಭೆ ನಡೆಸಿ ಲಸಿಕೆ ನೀಡುವ ಅಭಿಯಾನದ ಪರಿಶೀಲನೆ, ಎರಡು ದಿನದಲ್ಲಿ ಎದುರಾದ ಸಮಸ್ಯೆ, ಇಕ್ಕಟ್ಟಿನ ಬಗ್ಗೆ ಚರ್ಚೆ ಹಾಗೂ ಇವನ್ನು ಸರಿಪಡಿಸುವ ಬಗ್ಗೆ ಯೋಜನೆ ರೂಪಿಸಲಾಗಿದೆ ಎಂದವರು ಹೇಳಿದ್ದಾರೆ. ವಿಶ್ವದ ಅತ್ಯಂತ ಬೃಹತ್ ಕೋವಿಡ್ ಲಸಿಕಾ ಅಭಿಯಾನಕ್ಕೆ ಶನಿವಾರ ಪ್ರಧಾನಿ ಮೋದಿ ಚಾಲನೆ ನೀಡಿದ್ದರು. ಭಾರತದಲ್ಲಿ ಅಭಿವೃದ್ಧಿ ಪಡಿಸಿರುವ ಎರಡು ಲಸಿಕೆಗಳು ಕೊರೋನ ವಿರುದ್ಧದ ಹೋರಾಟದಲ್ಲಿ ನಿರ್ಣಾಯಕ ಪಾತ್ರ ವಹಿಸಲಿವೆ ಎಂದವರು ವಿಶ್ವಾಸ ವ್ಯಕ್ತಪಡಿಸಿದ್ದರು. ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದ ಕೊವ್ಯಾಕ್ಸಿನ್ ಲಸಿಕೆ ಹಾಗೂ ಸೀರಮ್ ಸಂಸ್ಥೆ ಅಭಿವೃದ್ಧಿಗೊಳಿಸಿದ ಕೋವಿಶೀಲ್ಡ್ ಲಸಿಕೆಯ ಬಳಕೆಗೆ ಕೇಂದ್ರ ಸರಕಾರ ಅನುಮೋದನೆ ನೀಡಿದೆ. ಮೊದಲ ಹಂತದಲ್ಲಿ ಆರೋಗ್ಯ ಕ್ಷೇತ್ರದ ಕಾರ್ಯಕರ್ತರಿಗೆ ಹಾಗೂ ಕೊರೋನ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವವರಿಗೆ ಲಸಿಕೆ ನೀಡುವುದಾಗಿ ಸರಕಾರ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News