ಗಡಿ ಕ್ಯಾತೆ ತೆಗೆದ ಮಹಾರಾಷ್ಟ್ರ ಸಿಎಂ ವಿರುದ್ಧ ರಾಜ್ಯ ನಾಯಕರ ವಾಗ್ದಾಳಿ

Update: 2021-01-18 11:54 GMT

ಬೆಂಗಳೂರು, ಜ.18: ಕರ್ನಾಟಕದ ವ್ಯಾಪ್ತಿಯಲ್ಲಿರುವ ಮರಾಠಿ ಭಾಷಿಕ ಹಾಗೂ ಸಾಂಸ್ಕೃತಿಕ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರ್ಪಡೆ ಮಾಡಿಕೊಳ್ಳುವ ಮೂಲಕ ಗಡಿ ವಿವಾದದಲ್ಲಿ ಬಲಿದಾನ ಹೊಂದಿದ ಸೈನಿಕರಿಗೆ ನಿಜವಾದ ಶ್ರದ್ಧಾಂಜಲಿ ಸಲ್ಲಿಸಲಿದ್ದೇವೆ. ನಾವು ಈ ವಿಚಾರದಲ್ಲಿ ಒಗ್ಗಟ್ಟಾಗಿದ್ದೇವೆ ಮತ್ತು ಕಟಿಬದ್ಧರಾಗಿದ್ದೇವೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮಾಡಿರುವ ಟ್ವೀಟ್ ಇದೀಗ ವಿವಾದದ ಸ್ವರೂಪ ಪಡೆದುಕೊಂಡಿದೆ.

ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ರಾಜಕೀಯ ನಾಯಕರು, ಕನ್ನಡಪರ ಸಂಘಟನೆಗಳ ಮುಖ್ಯಸ್ಥರು ಉದ್ಧವ್ ಠಾಕ್ರೆ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದು, ಗಡಿ ವಿವಾದ ಕುರಿತು ಮಹಾಜನ್ ವರದಿಯೇ ಅಂತಿಮ ಎಂಬ ಕರ್ನಾಟಕದ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಸಾರಿದ್ದಾರೆ.

ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಮರಾಠಿ ಭಾಷೆ ಮತ್ತು ಸಂಸ್ಕೃತಿ ಪ್ರಧಾನ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳುವ ಮಾತನಾಡಿರುವುದು ಅವರ ಉದ್ಧಟತನದ ಪ್ರದರ್ಶನವಾಗಿದೆ. ಇದು ಭಾರತೀಯ ಒಕ್ಕೂಟ ತತ್ವದ ವಿರುದ್ಧವಾದ ನಿಲುವು. ಮಹಾಜನ್ ವರದಿಯೇ ಅಂತಿಮ ಎಂಬುದು ಎಲ್ಲರೂ ಬಲ್ಲ ಸತ್ಯ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ.

ಹೀಗಿರುವಾಗ ಪ್ರಾದೇಶಿಕತೆ ಪ್ರದರ್ಶನ ಮತ್ತು ಭಾಷಾಂಧತೆಯ ಮಾತುಗಳು ದೇಶದ ಏಕತೆಗೆ ಮಾರಕವಾಗಿವೆ. ಇದನ್ನು ನಾನು ಖಂಡಿಸುತ್ತೇನೆ. ಕರ್ನಾಟಕದಲ್ಲಿ ಮರಾಠಿಗರು ಕನ್ನಡಿಗರೊಂದಿಗೆ ಬೆರೆತಿದ್ದಾರೆ, ಅದೇ ರೀತಿ ಮಹಾರಾಷ್ಟ್ರದ ಗಡಿ ಜಿಲ್ಲೆಗಳಲ್ಲಿರುವ ಕನ್ನಡಿಗರು ಮರಾಠಿಗರೊಂದಿಗೆ ಬೆರೆತಿದ್ದಾರೆ ಎಂದು ಅವರು ಹೇಳಿದ್ದಾರೆ.

ಈ ಸೌಹಾರ್ದಯುತ ವಾತಾವರಣವನ್ನು ಕೆಡಿಸುವ ಪ್ರಯತ್ನ ಮಹಾರಾಷ್ಟ್ರದ ಮುಖ್ಯಮಂತ್ರಿಗಳಿಂದ ಆಗುತ್ತಿರುವುದು ನೋವಿನ ಸಂಗತಿ. ಒಬ್ಬ ಭಾರತೀಯನಾಗಿ ಉದ್ಧವ್ ಠಾಕ್ರೆ ಅವರು ಒಕ್ಕೂಟ ತತ್ವವನ್ನು ಗೌರವಿಸುವ ಬದ್ಧತೆಯನ್ನು ತೋರಲಿ ಎಂದು ಮುಖ್ಯಮಂತ್ರಿ ಸಲಹೆ ನೀಡಿದ್ದಾರೆ.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿ, ನಮ್ಮ ಬೆಳಗಾವಿ ಬಗ್ಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೀಡಿರುವ ಅಧಿಕಪ್ರಸಂಗತನದ ಹೇಳಿಕೆ ಖಂಡನೀಯ. ಬೆಳಗಾವಿ ಕರ್ನಾಟಕ ರಾಜ್ಯದ ಅವಿಭಾಜ್ಯ ಅಂಗ. ಇತ್ಯರ್ಥವಾಗಿರುವ ವಿಷಯವನ್ನು ಕೆಣಕಲು ಬರಬೇಡಿ. ಬೆಳಗಾವಿ ಗಡಿ ಬಗ್ಗೆ ಮಹಾಜನ ವರದಿಯೇ ಅಂತಿಮ ಎಂದು ತಿಳಿಸಿದ್ದಾರೆ.

ಉದ್ಧವ್ ಠಾಕ್ರೆ ಅವರೇ, ಇತ್ಯರ್ಥವಾಗಿರುವ ವಿಷಯವನ್ನು ಕೆಣಕಿ ರಾಜಕೀಯ ಮಾಡಲು ಹೋಗಬೇಡಿ. ಈಗ ನೀವು ಕೇವಲ ಶಿವಸೈನಿಕ ಅಲ್ಲ, ಜವಾಬ್ದಾರಿಯುತ ಸ್ಥಾನದಲ್ಲಿರುವ ಮುಖ್ಯಮಂತ್ರಿ ಎನ್ನುವುದನ್ನು ಮರೆಯಬೇಡಿ. ಕರ್ನಾಟಕದ ನೆಲ-ಜಲ-ಭಾಷೆಯ ರಕ್ಷಣೆ ನಮ್ಮೆಲ್ಲರ ಕರ್ತವ್ಯ. ಈ ಬಗ್ಗೆ ರಾಜಿಯೂ ಇಲ್ಲ, ರಾಜಕೀಯವೂ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಉದ್ಧಟತನದ ಹೇಳಿಕೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧಿಕೃತವಾಗಿ ತಕ್ಕ ಪ್ರತ್ಯುತ್ತರ ನೀಡಬೇಕು. ಮಹಾರಾಷ್ಟ್ರ ಮುಖ್ಯಮಂತ್ರಿ ಅವರೇ, ಕನ್ನಡಿಗರು ಶಾಂತಿಪ್ರಿಯರು, ಸಹನಶೀಲರು, ಸಹಬಾಳ್ವೆಯಲ್ಲಿ ನಂಬಿಕೆ ಇಟ್ಟವರು. ನಮ್ಮ ಸಜ್ಜನಿಕೆಯನ್ನು ದೌರ್ಬಲ್ಯ ಎಂದು ತಿಳಿಯಬೇಡಿ ಎಂದು ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.

ಠಾಕ್ರೆ ಸರಕಾರಕ್ಕೆ ನೀಡಿರುವ ಬೆಂಬಲ ವಾಪಸ್ ಪಡೆಯಿರಿ

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮಾತುಗಳು ಉದ್ಧಟತನದಿಂದ ಕೂಡಿವೆ. ದೇಶದ ಏಕತೆ-ಸಮಗ್ರತೆಗೆ ಧಕ್ಕೆ ಉಂಟು ಮಾಡುವಂಥ ಇಂಥ ವ್ಯಕ್ತಿಯ ನೇತೃತ್ವದ ಸರಕಾರಕ್ಕೆ ನೀಡಿರುವ ಬೆಂಬಲವನ್ನು ಕಾಂಗ್ರೆಸ್ ಪಕ್ಷ ಕೂಡಲೇ ವಾಪಸ್ ಪಡೆಯಬೇಕು. ಭಾರತ ಸಂಘಟಿತವಾಗಿ ಹೊರಗಿನ ಶಕ್ತಿಗಳನ್ನು ಎದುರಿಸುತ್ತ ವೇಗವಾಗಿ ಪ್ರಗತಿ ಹೊಂದುತ್ತಿದೆ. ಇಂಥ ಸಂದರ್ಭದಲ್ಲಿ ಸಂಕುಚಿತ ವಿಷಯಗಳನ್ನೂ, ಅದರಲ್ಲೂ ಎಂದೋ ಮುಗಿದ ಅಧ್ಯಾಯವನ್ನು ಇಟ್ಟುಕೊಂಡು ನೆಮ್ಮದಿ ಕೆಡಿಸುವಂಥ ಕೆಲಸ ಮಾಡಬಾರದು. ಒಂದು ರಾಜ್ಯದ ಮುಖ್ಯಮಂತ್ರಿ ಪದವಿಯಲ್ಲಿ ಕೂತ ವ್ಯಕ್ತಿಗೆ ಇದು ಶೋಭೆಯಲ್ಲ.

-ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಡಿಸಿಎಂ

ಉದ್ಧವ್ ವಿರಾಮದ ವೇಳೆಯಲ್ಲಿ ಇತಿಹಾಸ ಓದಲಿ

ಗಡಿ ವಿವಾದಕ್ಕೆ ಸಂಬಂಧಪಟ್ಟಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿಕೆ ಅತಿರೇಖದ ಪರಮಾವಧಿ. ಉದ್ಧವ್ ವಿರಾಮದ ವೇಳೆಯಲ್ಲಿ ಇತಿಹಾಸವನ್ನೊಮ್ಮೆ ಕುಳಿತು ಓದಲಿ. ಅಂದು ಮಹಾಜನ್ ಆಯೋಗದ ರಚನೆಗೆ ಪಟ್ಟು ಹಿಡಿದಿದ್ದೇ ಮಹಾರಾಷ್ಟ್ರ. ತಾನೇ ಬಲವಂತ ಮಾಡಿ ರಚನೆಯಾದ ಆಯೋಗದ ವರದಿಯನ್ನು ಒಪ್ಪುವುದಿಲ್ಲ ಎಂದರೆ ಇಲ್ಯಾರು ಕೇಳಲು ಸಿದ್ದರಿಲ್ಲ.

-ದಿನೇಶ್ ಗುಂಡೂರಾವ್, ಎಐಸಿಸಿ ಕಾರ್ಯದರ್ಶಿ

ಅನಗತ್ಯ ಗೊಂದಲ ಸೃಷ್ಟಿಸುವ ಕೆಲಸ

ಬೆಳಗಾವಿ ವಿಷಯದಲ್ಲಿ ಮಹಾರಾಷ್ಟ್ರ ಸರಕಾರ ಅನಗತ್ಯ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದೆ. ಬೆಳಗಾವಿ ಯಾವತ್ತಿದ್ದರೂ ಕರ್ನಾಟಕ ರಾಜ್ಯದ ಅವಿಭಾಜ್ಯ ಅಂಗ. ಮಹಾರಾಷ್ಟ್ರ ಸರಕಾರ ತನ್ನ ವೈಫಲ್ಯ ಮರೆಮಾಚಿಕೊಳ್ಳಲು ಗಡಿ ವಿಷಯ ಪ್ರಸ್ತಾಪಿಸಿ ಜನರ ಭಾವನೆ ಕೆರಳಿಸುವ ಯತ್ನ ಮಾಡುವುದನ್ನು ನಿಲ್ಲಿಸಬೇಕು. ರಾಜ್ಯದ ಒಂದಿಂಚೂ ಜಾಗ ಬಿಡುವ ಪ್ರಶ್ನೆಯೆ ಇಲ್ಲ. ಕನ್ನಡ ನಾಡಿನ ನೆಲ, ಜಲ ಮತ್ತು ಭಾಷೆಯ ರಕ್ಷಣೆಗೆ ನಾವು ಕಟಿಬದ್ಧರಾಗಿದ್ದೇವೆ. ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿ ನಡೆದುಕೊಂಡರೆ ಪ್ರತ್ಯುತ್ತರ ನೀಡಲು ನಾವೂ ಸಿದ್ಧ.

-ರಮೇಶ್ ಜಾರಕಿಹೊಳಿ, ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ

ಕನ್ನಡಿಗರು ಆಶ್ರಯದಾತರು: ಟಿ.ಎ.ನಾರಾಯಣಗೌಡ

ವಾಸ್ತವಾಂಶ ಏನು ಎಂಬುದನ್ನು ಉದ್ಧವ್ ಠಾಕ್ರೆ ಮರಾಠಿ ಇತಿಹಾಸಕಾರರಿಂದ ತಿಳಿದುಕೊಳ್ಳಲಿ. ಇಡೀ ಮಹಾರಾಷ್ಟ್ರದ ಮುಕ್ಕಾಲು ಭಾಗ ಹಿಂದೆ ಕರ್ನಾಟಕವೆ ಆಗಿತ್ತು. ಮಹಾರಾಷ್ಟ್ರದ ಮೂಲೆಮೂಲೆಗಳಲ್ಲಿ ಸಿಕ್ಕಿರುವ ಶಾಸನಗಳು ಕನ್ನಡದಲ್ಲಿ ಬರೆಯಲ್ಪಟ್ಟಿವೆ. ಯಾರ ಪ್ರದೇಶವನ್ನು ಯಾರು ಆಕ್ರಮಿಸಿಕೊಂಡಿದ್ದಾರೆಂದು ಅರಿತು ಮಾತನಾಡಲಿ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ತಿರುಗೇಟು ನೀಡಿದ್ದಾರೆ.

ಶಿವಸೇನೆಯವರು ಸದಾ ಕನ್ನಡಿಗರಿಗೆ ಚಿರ ಋಣಿಗಳಾಗಿರಬೇಕು. ಅವರ ಆರಾಧ್ಯ ದೊರೆ ಛತ್ರಪತಿ ಶಿವಾಜಿಯವರ ಎರಡನೆ ಮಗನಿಗೆ ಆಶ್ರಯ ನೀಡಿ ಔರಂಗಜೇಬನ ಸೈನ್ಯದಿಂದ ಕಾಪಾಡಿದ್ದು ಕನ್ನಡದ ವೀರರಾಣಿ ಕೆಳದಿ ಚೆನ್ನಮ್ಮ. ಕನ್ನಡಿಗರು ಆಶ್ರಯದಾತರು, ಆಕ್ರಮಣಕಾರಿಗಳಲ್ಲ ಎಂಬುದನ್ನು ಠಾಕ್ರೆ ಅರಿತುಕೊಳ್ಳಲಿ ಎಂದು ಅವರು ತಿಳಿಸಿದ್ದಾರೆ.

ಕೀಳು ರಾಜಕೀಯಕ್ಕಾಗಿ ಭಾಷೆ, ಸಮುದಾಯಗಳ ನಡುವೆ ಬೆಂಕಿ ಹಚ್ಚುವುದು ದುಷ್ಟತನ. ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಕೇರಳ ರಾಜ್ಯಗಳು ಪ್ರಗತಿಪರ ರಾಜ್ಯಗಳಾಗಿದ್ದು, ಅತಿಹೆಚ್ಚು ತೆರಿಗೆ ಸಂಗ್ರಹಿಸಿಕೊಡುತ್ತವೆ. ಆದರೂ ಈ ರಾಜ್ಯಗಳ ಮೇಲೆ ಹಿಂದಿ ಸಾಮ್ರಾಜ್ಯಶಾಹಿ ದಬ್ಬಾಳಿಕೆ ನಡೆಸುತ್ತಿದೆ. ಇಂಥ ಸಂದರ್ಭದಲ್ಲಿ ನಾವೆಲ್ಲರೂ ಒಂದಾಗಿ ಹೋರಾಟ ನಡೆಸಬೇಕಿತ್ತು. ಉದ್ಧವ್ ಠಾಕ್ರೆಗೆ ಈ ಸಾಮಾನ್ಯ ಜ್ಞಾನ ಇಲ್ಲದಿರುವುದು ವಿಷಾದನೀಯ ಎಂದು ನಾರಾಯಣಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಸ್ತರಣಾವಾದ ಸೌಹಾರ್ದಕ್ಕೆ ಧಕ್ಕೆ:

‘ಕರ್ನಾಟಕ ಆಕ್ರಮಿತ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸುತ್ತೇವೆ’ ಎಂದಿರುವ ಉದ್ಧವ್ ಠಾಕ್ರೆ ಅವರ ಹೇಳಿಕೆ ಚೀನಾದ ವಿಸ್ತರಣಾವಾದವನ್ನು ಧ್ವನಿಸುತ್ತಿದೆ. ಒಕ್ಕೂಟ ವ್ಯವಸ್ಥೆ ಒಪ್ಪಿ, ಭಾಷಾ ಆಧಾರದ ಮೇಲೆ ರಾಜ್ಯಗಳನ್ನು ವಿಂಗಡಿಸಿಕೊಂಡು, ಅದಕ್ಕೆ ಬದ್ಧವಾಗಿ ನಡೆಯುತ್ತಿರುವಾಗ ಇಂಥ ವಿಸ್ತರಣಾವಾದ ಸೌಹಾರ್ದಕ್ಕೆ ಧಕ್ಕೆ ತರಲಿದೆ. ಬೆಳಗಾವಿ ಸಾಂಸ್ಕೃತಿಕವಾಗಿ, ಆಡಳಿತಾತ್ಮಕವಾಗಿ ಕರ್ನಾಟಕದ ಹೆಗ್ಗುರುತು. ಬೆಳಗಾವಿಯ ಬಗ್ಗೆ ಪದೇ ಪದೆ ಕಿತಾಪತಿ ಮಾಡುವ ಎಂಇಎಸ್ ಮತ್ತು ಮಹಾರಾಷ್ಟ್ರಕ್ಕೆ ತಕ್ಕ ಉತ್ತರ ಕೊಡಬೇಕೆಂದೇ ನಾನು ಸಿಎಂ ಆಗಿದ್ದಾಗ ಅಲ್ಲಿ ಸುವರ್ಣ ವಿಧಾನಸೌಧ ನಿರ್ಮಿಸಲಾಗಿತ್ತು. ಅದು, ಬೆಳಗಾವಿ ನಮ್ಮ ಅವಿಭಾಜ್ಯ ಅಂಗ ಎಂಬುದರ ದ್ಯೋತಕ ಎಂಬುದನ್ನು ಠಾಕ್ರೆ ಅರಿಯಲಿ'

-ಎಚ್.ಡಿ.ಕುಮಾರಸ್ವಾಮಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ

ಶಾಂತಿ ಕದಡುವ ಪ್ರಯತ್ನ ಸರಿಯಲ್ಲ:

‘ಬೆಳಗಾವಿಯ ಮೇಲೆ ಕಣ್ಣು ಹಾಕಿರುವ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಶಾಂತಿ ಕದಡುವ ಯತ್ನ ಮಾಡುತ್ತಿದ್ದಾರೆ. ನಾವು ಯಾವುದೇ ಕಾರಣಕ್ಕೂ ಕರ್ನಾಟಕದ ಒಂದಿಂಚು ಭೂಮಿಯನ್ನೂ ಕೊಡುವುದಿಲ್ಲ. ಬದಲಾಗಿ ಕನ್ನಡಿಗರು ಹೆಚ್ಚಿರುವ ಸಾಂಗ್ಲಿ, ಸೊಲ್ಲಾಪುರವನ್ನೇ ಕರ್ನಾಟಕಕ್ಕೆ ಸೇರಿಸಿಕೊಳ್ಳುತ್ತೇವೆ. ಮಹಾರಾಷ್ಟ್ರ ಸಿಎಂ ಜವಾಬ್ದಾರಿ ಮರೆತು ಸಂವಿಧಾನಕ್ಕೆ ವಿರುದ್ಧವಾಗಿ ಮಾತನಾಡುತ್ತಿದ್ದಾರೆ. ನಾವು ಲೋಕಸಭೆ ಒಪ್ಪಿಕೊಂಡಿರುವ ಮಹಾಜನ ವರದಿಗೆ ಬದ್ಧರಾಗಿದ್ದೇವೆ. ಆದರೆ, ಅವರು ರಾಜಕೀಯ ಲಾಭಕ್ಕಾಗಿ ಶಾಂತಯುತವಾಗಿರುವ ಬೆಳಗಾವಿಯನ್ನು ಕದಡಲು ನೋಡುತ್ತಿದ್ದಾರೆ. ಇಂತಹ ಪ್ರಯತ್ನಕ್ಕೆ ನಾವು ಜಗ್ಗುವುದಿಲ್ಲ. ಗಡಿ, ನೆಲ, ಜಲ, ಭಾಷೆ ವಿಚಾರದಲ್ಲಿ ನಾವು ಎಂದೆಂದಿಗೂ ಒಂದಾಗಿ ಇರುತ್ತೇವೆ. ಈ ವಿಷಯಗಳಲ್ಲಿ ನಮ್ಮ ನಿಲುವು ಅತ್ಯಂತ ಸ್ಪಷ್ಟವಾಗಿದೆ. ಉದ್ಧವ್ ಠಾಕ್ರೆ ಅನಾವಶ್ಯಕ ಹೇಳಿಕೆಗಳನ್ನು ನೀಡುವ ಮೂಲಕ ವಿವಾದ ಸೃಷ್ಟಿಸಬಾರದು. ಶಾಂತಿ ಕದಡುವ ಪ್ರಯತ್ನಕ್ಕೆ ಕೈಹಾಕಬಾರದು'

-ಬಸವರಾಜ ಬೊಮ್ಮಾಯಿ, ಗೃಹ ಸಚಿವ

‘ಬೆಳಗಾವಿ ಕನ್ನಡದ ನೆಲವಾಗಿದ್ದು, ರಾಜ್ಯದ ನೆಲ, ಜಲ ವಿಷಯಗಳಲ್ಲಿ ಯಾವುದೇ ರೀತಿಯ ರಾಜಿ ಮಾಡಿಕೊಳ್ಳುವುದಿಲ್ಲ. ಬೆಳಗಾವಿಯಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನ ಸಂದರ್ಭದಲ್ಲಿ ಮರಾಠಿ ಭಾಷಿಕರೂ ನಾಡದೇವಿಗೆ ಕೈಮುಗಿದು ಹಬ್ಬದ ರೀತಿಯಲ್ಲಿ ಆಚರಿಸಿದ್ದಾರೆ. ಶಿವಾಜಿ ಮಹಾರಾಜರ ಕಾಲದಿಂದಲೂ ಕನ್ನಡಿಗರು ಮತ್ತು ಮರಾಠಿಗರು ಸಹೋದರತೆಯಿಂದ ಜೀವನ ನಡೆಸುತ್ತಿದ್ದು, ಉತ್ತಮ ಬಾಂಧವ್ಯ ಹೊಂದಿದ್ದಾರೆ. ಜನತೆಗೆ, ಸಮಾಜದಲ್ಲಿ ಎಲ್ಲ ಜನಪ್ರತಿನಿಧಿಗಳಿಂದ ಒಳ್ಳೆಯ ಸಂದೇಶ ರವಾನೆಯಾಗಲಿ'

-ಗೋವಿಂದ ಕಾರಜೋಳ, ಉಪಮುಖ್ಯಮಂತ್ರಿ

ಬಿಜೆಪಿಯಿಂದ ಕರ್ನಾಟಕ ಹಾಳು

‘ಮೊದಲು ಸೊಲ್ಲಾಪುರ ಕರ್ನಾಟಕ ರಾಜ್ಯಕ್ಕೆ ಸೇರಬೇಕು. ಮುಂಬೈನ ಅರ್ಧಭಾಗ ಕರ್ನಾಟಕ ರಾಜ್ಯಕ್ಕೆ ಸೇರಬೇಕು. ಇದರ ಬಗ್ಗೆ ಮೊದಲು ತೀರ್ಮಾನ ಮಾಡಲಿ. ಬೆಳಗಾವಿ ಜಿಲ್ಲೆ ರಾಜಕಾರಣಿಗಳು ಮರಾಠ ಏಜೆಂಟ್‍ಗಳು. ನಿನ್ನೆ ಸಮಾವೇಶದಲ್ಲಿ ಅಮಿತ್ ಶಾ ಮರಾಠ ಪೇಟ ಕಟ್ಟಿದ್ದರು. ಒಬ್ಬರಾದರೂ ಈ ಬಗ್ಗೆ ಮಾತಾಡಿಲ್ಲ. ಬಿಜೆಪಿಯವರಿಂದ ಕರ್ನಾಟಕ ರಾಜ್ಯ ಹಾಳಾಗುತ್ತಿದೆ. ಕನ್ನಡಿಗರ ಪರವಾಗಿ ಸಿಎಂ ಕೇವಲ ನಾಟಕವಾಡುತ್ತಿದ್ದಾರೆ. ನಾವು ಯಾವುದೇ ಕಾರಣಕ್ಕೂ ಬೆಳಗಾವಿ ಬಿಟ್ಟುಕೊಡುವುದಿಲ್ಲ. ರಾಜ್ಯದಲ್ಲಿ ಮರಾಠ ಅಭಿವೃದ್ಧಿ ನಿಗಮ ಮಾಡಿದರೂ, ಮಹಾರಾಷ್ಟ್ರದವರು ಬೆಳಗಾವಿ ಬೇಕು ಎನ್ನುತ್ತಿದ್ದಾರೆ'

-ವಾಟಾಳ್ ನಾಗರಾಜ್, ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News