13ರ ಬಾಲಕಿ ಮೇಲೆ ಅತ್ಯಾಚಾರ: ಮಧ್ಯಪ್ರದೇಶ ಸರ್ಕಾರಕ್ಕೆ ನೋಟಿಸ್

Update: 2021-01-19 04:47 GMT

ಹೊಸದಿಲ್ಲಿ : ಮಧ್ಯಪ್ರದೇಶದ ಉಮಾರಿಯಾ ನಗರದಲ್ಲಿ 13 ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವರವಾದ ವರದಿ ಸಲ್ಲಿಸುವಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಮಧ್ಯಪ್ರದೇಶ ಸರ್ಕಾರ ಹಾಗೂ ಅಲ್ಲಿನ ಪೊಲೀಸ್ ಮಹಾನಿರ್ದೇಶಕರಿಗೆ ನೋಟಿಸ್ ನೀಡಿದೆ.

ಈ ಭಯಾನಕ ಘಟನೆಯು ಈ ಪ್ರದೇಶದಲ್ಲಿ ಕಾನೂನು ಹಾಗೂ ಸುವ್ಯವಸ್ಥೆ ಸ್ಥಿತಿಯ ಬಗ್ಗೆ ಪ್ರಶ್ನಾರ್ಥಕ ಚಿಹ್ನೆಯನ್ನು ಇಟ್ಟಿದೆ ಎಂದು ಆಯೋಗ ಹೇಳಿಕೆ ನೀಡಿದೆ.

"ಮಧ್ಯಪ್ರದೇಶದ ಉಮಾರಿಯಾ ನಗರದಲ್ಲಿ 13 ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣವನ್ನು ಆಯೋಗ ಸ್ವಯಂ ಪ್ರೇರಿತವಾಗಿ ಕೈಗೆತ್ತಿಕೊಂಡಿದ್ದು, ರಾಜ್ಯದ ಮುಖ್ಯ ಕಾರ್ಯದರ್ಶಿ ಹಾಗೂ ಪೊಲೀಸ್ ಮಹಾನಿರ್ದೇಶಕರಿಗೆ ನೋಟಿಸ್ ನೀಡಿ, ಘಟನೆ ಬಗ್ಗೆ ವಿವರವಾದ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ" ಎಂದು ಸ್ಪಷ್ಟಪಡಿಸಿದೆ. ಘಟನೆ ಬಗ್ಗೆ ನಾಲ್ಕು ವಾರಗಳ ಒಳಗೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.

ಬಾಕಿ ಉಳಿದ ಆರೋಪಿಗಳ ಬಂಧನ, ಸಂತ್ರಸ್ತೆಗೆ ನೀಡಿರುವ ಕೌನ್ಸಿಲಿಂಗ್, ಸಂತ್ರಸ್ತೆಗೆ ನೀಡಿದ ಅಥವಾ ನೀಡಲು ಉದ್ದೇಶಿಸಿರುವ ಪರಿಹಾರ ಮತ್ತು ಪುನರ್ವಸತಿ ಕ್ರಮಗಳ ಬಗ್ಗೆ ವಿವರಗಳನ್ನು ವರದಿ ಒಳಗೊಂಡಿರಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಇದು ಸಂತ್ರಸ್ತೆಯ ಮಾನವಹಕ್ಕು ಉಲ್ಲಂಘನೆಯ ಪ್ರಕರಣವಾಗಿದ್ದು, ಕಾನೂನು ಜಾರಿ ಏಜೆನ್ಸಿಗಳು ನಾಗರಿಕರಿಗೆ ಸುರಕ್ಷಿತ ವಾತಾವರಣ ಕಲ್ಪಿಸಿಲ್ಲ ಹಾಗೂ ತಮ್ಮ ಕಾನೂನುಬದ್ಧ ಕರ್ತವ್ಯವವನ್ನು ನಿಭಾಯಿಸಲು ವಿಫಲರಾಗಿದ್ದಾರೆ ಎಂದು ಆಯೋಗ ಅಭಿಪ್ರಾಯಪಟ್ಟಿದೆ.

ಪತ್ರಿಕಾ ವರದಿಗಳ ಪ್ರಕಾರ, ಉಮರಿಯಾ ಮಾರುಕಟ್ಟೆ ಪ್ರದೇಶದಿಂದ ಬಾಲಕಿಯನ್ನು ಜನವರಿ ನಾಲ್ಕರಂದು ಆಕೆಗೆ ಪರಿಚಿತ ವ್ಯಕ್ತಿಗಳೇ ಅಪಹರಿಸಿದ್ದಾರೆ. ಬಳಿಕ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಒಂಬತ್ತು ಮಂದಿ ಎರಡು ದಿನಗಳ ಕಾಲ ಅತ್ಯಾಚಾರ ಎಸಗಿದ್ದಾರೆ.

ಜನವರಿ 11ರಂದು ಮತ್ತೆ ಬಾಲಕಿಯನ್ನು ಅಪಹರಿಸಿ ಹಿಂದಿನ ಘಟನೆಯ ಮೂವರು ಆರೋಪಿಗಳು ಮತ್ತು ಇಬ್ಬರು ಅಪರಿಚಿತ ಟ್ರಕ್ ಚಾಲಕರು ಐದು ಮಂದಿ ಅತ್ಯಾಚಾರ ಎಸಗಿದ್ದಾರೆ ಎನ್ನುವುದನ್ನು ಆಯೋಗ ಉಲ್ಲೇಖಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News