ಎಲ್ಲ ಸವಾಲುಗಳಿಗೂ ಶಿಕ್ಷಣವೆ ಸಂಜೀವಿನಿ: ಡಿಸಿಎಂ ಅಶ್ವತ್ಥ ನಾರಾಯಣ

Update: 2021-01-19 17:53 GMT

ಬೆಂಗಳೂರು, ಜ.19: ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯ ನಂತರ ರಾಜ್ಯದ ಶಿಕ್ಷಣ ಕ್ಷೇತ್ರಕ್ಕೆ ಮಹತ್ವದ ತಿರುವು ಬರಲಿದ್ದು, ವಿದ್ಯಾರ್ಥಿ ಕೇಂದ್ರಿತ ಬೋಧನಾ ವ್ಯವಸ್ಥೆ ಎಲ್ಲೆಡೆ ಅನುಷ್ಠಾನಕ್ಕೆ ಬರಲಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

ಮಂಗಳವಾರ ನಗರದಲ್ಲಿ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಏರ್ಪಡಿಸಿದ್ದ 13ನೆ ಸಂಸ್ಥಾಪಕರ ದಿನ ಹಾಗೂ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ 76ನೆ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿಕ್ಷಣವೆಂಬುದು ನಮ್ಮ ಸಮಾಜಕ್ಕೆ ಅತ್ಯಗತ್ಯ ಜೀವಸೆಲೆ ಎಂಬುದನ್ನು ಸರಕಾರ ಮನಗಂಡಿದೆ. ಆ ನಿಟ್ಟಿನಲ್ಲಿಯೇ ನೂತನ ಶಿಕ್ಷಣ ನೀತಿ ಸಿದ್ಧವಾಗಿದ್ದು, ಶ್ರೀಮಠದ ಪ್ರೇರಣೆ ಹಾಗೂ ಸ್ವಾಮೀಜಿ ಅವರ ಆಶೀರ್ವಾದಿಂದ ಪರಿಣಾಮಕಾರಿಯಾಗಿ ಜಾರಿ ಮಾಡಲಾಗುವುದು ಎಂದರು.

ಸಮಾಜದಲ್ಲಿ ಸಮಸ್ಯೆಗಳು ತಾಂಡವವಾಡುತ್ತಿವೆ. ಎತ್ತ ನೋಡಿದರೂ ಸವಾಲುಗಳೆ ಕಾಣುತ್ತಿವೆ. ನನ್ನ ಪ್ರಕಾರ ಈ ಎಲ್ಲ ಸಮಸ್ಯೆ-ಸವಾಲುಗಳಿಗೆ ನಿಜವಾದ ಸಂಜೀವಿನಿ ಎಂದರೆ ಶಿಕ್ಷಣ ಮಾತ್ರ. ಯಾವುದೇ ವ್ಯಕ್ತಿ ಅಥವಾ ವ್ಯವಸ್ಥೆ ಎದುರಿಸುತ್ತಿರುವ ಆರ್ಥಿಕ, ಸಾಮಾಜಿಕ, ರಾಜಕೀಯ ಇನ್ನಿತರೆ ಸವಾಲುಗಳಿಗೆ ಗುಣಮಟ್ಟದ ಶಿಕ್ಷಣದಿಂದ ಪರಿಹಾರ ಸಾಧ್ಯವಿದೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.

ಈ ಉದ್ದೇಶದಿಂದಲೆ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಗುಣಮಟ್ಟಕ್ಕೆ ಹೆಚ್ಚು ಮಹತ್ವ ಕೊಡಲಾಗಿದೆ. ಗುಣಮಟ್ಟದ ಬೋಧನೆ, ಕಲಿಕೆ ಮತ್ತು ಸಂಶೋಧನೆಗೆ ಒತ್ತು ನೀಡಲಾಗಿದೆ. ಈ ನೀತಿಯ ಜಾರಿಯ ನಂತರ ಕರ್ನಾಟಕ ಶೈಕ್ಷಣಿಕ ಕ್ಷೇತ್ರಕ್ಕೆ ಮಹೋನ್ನತ ತಿರುವು ನೀಡಲಿದೆ ಎಂದು ಅಶ್ವತ್ಥನಾರಾಯಣ ತಿಳಿಸಿದರು. ಇದೇ ಸಂದರ್ಭದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಮೂವರು ಸಿಬ್ಬಂದಿಗೆ ಸೇವಾರತ್ನ ಪ್ರಶಸ್ತಿ ನೀಡಿ ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದ ಸ್ವಾಮಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸಚಿವ ಸಿ.ಪಿ.ಯೋಗೇಶ್ವರ್, ಬಿಜಿಎಸ್, ಎಸ್‍ಜೆಬಿ ಸಂಸ್ಥೆಗಳು ಆಸ್ಪತ್ರೆಗಳ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ್‍ನಾಥ್ ಸ್ವಾಮಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News