ಭೂಭಾಗದ ಮೇಲಿರುವ ಪ್ರೀತಿ, ಜನರ ಮೇಲೂ ಇರಲಿ

Update: 2021-01-20 04:57 GMT

ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಬೆಂಬಲದಿಂದ ಅಧಿಕಾರ ಹಿಡಿದ ಬಳಿಕ ಶಿವಸೇನೆ ‘ಹಿಂದುತ್ವ’ದ ಕುರಿತಂತೆ ತುಸು ಮೃದುವಾಗಿದೆ. ಈ ಕೊರತೆಯನ್ನು ತುಂಬಲು ಅದು ಪ್ರಾದೇಶಿಕ ವಾದಕ್ಕೆ ಆದ್ಯತೆಯನ್ನು ನೀಡಿದೆ. ಮರಾಠಿಗರ ಭಾಷೆ, ಅಸ್ಮಿತೆಯ ರಾಜಕೀಯದ ಮೂಲಕ ಜನರನ್ನು ಓಲೈಸುತ್ತಿದೆ. ಉದ್ಧವ್ ಠಾಕ್ರೆ ಕರ್ನಾಟಕದ ಗಡಿ ವಿವಾದಗಳನ್ನು ಪದೇ ಪದೇ ಕೆಣಕುತ್ತಿರುವುದು ಇದೇ ಕಾರಣಕ್ಕೆ. ‘ಕರ್ನಾಟಕದ ವ್ಯಾಪ್ತಿಯಲ್ಲಿರುವ ಮರಾಠಿ ಭಾಷಿಕ ಹಾಗೂ ಸಾಂಸ್ಕೃತಿಕ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರ್ಪಡೆ ಮಾಡಿಕೊಳ್ಳುವ ಮೂಲಕ ಗಡಿ ವಿವಾದದಲ್ಲಿ ಬಲಿದಾನ ಮಾಡಿದ ಶಿವಸೈನಿಕರಿಗೆ ನಿಜವಾದ ಶ್ರದ್ಧಾಂಜಲಿ ಸಲ್ಲಿಸಲಿದ್ದೇವೆ’’ ಎನ್ನುವ ಉದ್ಧವ್ ಠಾಕ್ರೆ ಅವರ ಹೇಳಿಕೆ ಇದಕ್ಕೆ ಇನ್ನೊಂದು ಸೇರ್ಪಡೆ. ಮಹಾರಾಷ್ಟ್ರದಲ್ಲಿ ಕುಳಿತು ಇಂತಹ ಹೇಳಿಕೆಗಳನ್ನು ನೀಡುವುದರಿಂದ, ಬೆಳಗಾವಿಯಲ್ಲಿರುವ ಮರಾಠಿಗರಿಗೆ ಎಳ್ಳಷ್ಟು ಸಹಾಯವಾಗುವುದಿಲ್ಲ. ಬದಲಿಗೆ ಈ ಹೇಳಿಕೆಗಳು ಗಡಿಭಾಗದಲ್ಲಿರುವ ಮರಾಠಿಗರ ಸಮಸ್ಯೆಯನ್ನು ಇನ್ನಷ್ಟು ಉಲ್ಬಣಗೊಳಿಸುತ್ತದೆ. ಸಾಧಾರಣವಾಗಿ ಗಡಿಭಾಗದಲ್ಲಿರುವ ಕನ್ನಡಿಗರಾಗಲಿ, ಮರಾಠಿಗರಾಗಲಿ ಯಾರಿಗೂ ಸಲ್ಲದವರಂತೆ ತ್ರಿಶಂಕು ಬದುಕನ್ನು ಬದುಕುತ್ತಿರುವವರು. ಮೂಲಭೂತ ಸೌಕರ್ಯಗಳನ್ನು ಕೇಳುವಾಗ, ಮಹಾರಾಷ್ಟ್ರ ಸರಕಾರ ಕರ್ನಾಟಕದ ಕಡೆಗೆ ಕೈ ತೋರಿಸುತ್ತದೆ. ಕರ್ನಾಟಕ ಸರಕಾರ ಮಹಾರಾಷ್ಟ್ರದ ಕಡೆಗೆ ಕೈ ತೋರಿಸುತ್ತದೆ. ಪ್ರತಿ ಮಳೆಗಾಲದಲ್ಲಿ ಬೆಳಗಾವಿಯ ಗಡಿಭಾಗಗಳು ನೆರೆ ನೀರಿನಿಂದ ಕೊಚ್ಚಿ ಹೋಗುತ್ತವೆ. ಮಹಾರಾಷ್ಟ್ರ ತನ್ನ ಅಣೆಕಟ್ಟಿನಿಂದ ಬಿಡುವ ನೀರಿನಿಂದಾಗಿಯೇ ಇಲ್ಲಿ ಭಾರೀ ನಾಶ ನಷ್ಟ ಸಂಭವಿಸಿವೆ. ಈ ಕುರಿತಂತೆ ಯಾವುದೇ ಅನುಕಂಪದ ಮಾತುಗಳನ್ನು ಮಹಾರಾಷ್ಟ್ರ ಈವರೆಗೆ ಆಡಿಲ್ಲ. ಇದೇ ಸಂದರ್ಭದಲ್ಲಿ ಬೆಳಗಾವಿಯ ನೆರೆ ಸಂತ್ರಸ್ತರಿಗೆ ಕರ್ನಾಟಕ ಸರಕಾರ ಕೂಡ ಸೂಕ್ತ ಪರಿಹಾರ ನೀಡುವಲ್ಲಿ ವಿಫಲವಾಗಿದೆ. ಆದರೆ ಧ್ವಜ ಹಾರಿಸುವ ಪ್ರಶ್ನೆ ಬಂದಾಗ ಮಾತ್ರ ಉಭಯ ಸರಕಾರಗಳು ಈ ಗಡಿಭಾಗದ ಜನರ ಕುರಿತಂತೆ ಅಪಾರ ಪ್ರೀತಿ, ಕಾಳಜಿಯನ್ನು ವ್ಯಕ್ತಪಡಿಸುತ್ತವೆ. ಮರಾಠಿಗರ ವಿರುದ್ಧ ಕನ್ನಡಿಗರು, ಕನ್ನಡದ ವಿರುದ್ಧ ಮರಾಠಿಗರು ಸೆಟೆದು ನಿಲ್ಲುತ್ತಾರೆ. ಇದೀಗ ಉದ್ಧವ್ ಠಾಕ್ರೆಯವರು ತನ್ನ ಹೇಳಿಕೆಯಿಂದಾಗಿ ಮತ್ತೆ ಅನಗತ್ಯವಾಗಿ ಕನ್ನಡಿಗರ ಭಾವನೆಗಳನ್ನು ಕೆಣಕುವ ಕೆಲಸ ಮಾಡಿದ್ದಾರೆ. ಇದರ ಸಂತ್ರಸ್ತರು ಮತ್ತೆ, ಬೆಳಗಾವಿಯ ಮರಾಠಿಗರು ಮತ್ತು ಕನ್ನಡಿಗರು ಎನ್ನುವುದು ಖೇದಕರ.

ಉದ್ಧವ್ ಠಾಕ್ರೆ ಹೇಳಿಕೆ ನೀಡಿದ ಬೆನ್ನಿಗೇ ಕರ್ನಾಟಕದಲ್ಲಿ ಕಾಂಗ್ರೆಸ್ ಮುಖಂಡರು ಅದನ್ನು ತೀವ್ರವಾಗಿ ಖಂಡಿಸಿದ್ದಾರೆ. ಯಡಿಯೂರಪ್ಪ ಸರಕಾರದ ವಿರುದ್ಧವೂ ಹೇಳಿಕೆ ನೀಡಿದ್ದಾರೆ. ಇದೇ ಸಂದರ್ಭದಲ್ಲಿ, ಮಹಾರಾಷ್ಟ್ರದಲ್ಲಿ ಠಾಕ್ರೆಯೊಂದಿಗೆ ಕಾಂಗ್ರೆಸ್ ಪಕ್ಷ ಕೂಡ ಕೈ ಜೋಡಿಸಿದೆ ಎನ್ನುವ ಅಂಶವನ್ನು ಮರೆತಿದ್ದಾರೆ. ಇತ್ತ ಬಿಜೆಪಿಯವರು, ಮಹಾರಾಷ್ಟ್ರದ ಕಾಂಗ್ರೆಸ್ ಕಡೆಗೆ ಕೈ ತೋರಿಸಿ, ವಿರೋಧ ಪಕ್ಷದವರ ಬಾಯಿ ಮುಚ್ಚಿಸಲು ಯತ್ನಿಸುತ್ತಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಚೀನಾದ ವಿರುದ್ಧ ಮೋದಿಯವರು ಹೇಳಿಕೆ ನೀಡಿದಂತೆ, ‘‘ಕರ್ನಾಟಕದ ಒಂದಿಂಚೂ ಭೂಮಿ ಕೊಡುವ ಪ್ರಶ್ನೆಯೇ ಇಲ್ಲ’’ ಎಂದಿದ್ದಾರೆ. ಯಡಿಯೂರಪ್ಪ ಅವರು ಭೂಮಿಯ ಬಗ್ಗೆ ಮಾತ್ರ ಮಾತನಾಡಿದ್ದಾರೆ. ಭೂಭಾಗದಲ್ಲಿರುವ ಜನರ ಕುರಿತಂತೆ ವೌನವಾಗಿದ್ದಾರೆ. ಭೂಮಿ ಎನ್ನುವುದು ಮನುಷ್ಯರನ್ನು ಒಳಗೊಂಡಿದೆ ಎನ್ನುವ ಅಂಶವನ್ನು ಉಭಯ ಸರಕಾರಗಳು ಮರೆತಿವೆೆ. ಗಡಿಯ ಒಂದಿಂಚೂ ಭೂಮಿಯನ್ನು ಬಿಟ್ಟುಕೊಡುವುದಿಲ್ಲ ಎಂದಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಇತ್ತೀಚೆಗೆ ಶಿವಮೊಗ್ಗದ ಸಭೆಯಲ್ಲಿ ತಮ್ಮ ವರಿಷ್ಠರಾಗಿರುವ ಅಮಿತ್ ಶಾ ಅವರಿಗಾಗಿ ‘ಕನ್ನಡವನ್ನೇ’ ಬಿಟ್ಟುಕೊಟ್ಟಿರುವುದು ಇನ್ನೂ ಹಸಿಯಾಗಿದೆ. ಇಡೀ ವೇದಿಕೆಯನ್ನು ವರಿಷ್ಠರ ಸಂತೃಪ್ತಿಗಾಗಿ ಹಿಂದಿಮಯವಾಗಿಸಿರುವುದು, ಕನ್ನಡವನ್ನು ಅಲ್ಲಿ ಪರಕೀಯವಾಗಿಸಿರುವುದು, ಉದ್ಧವ್ ಠಾಕ್ರೆಯ ಹೇಳಿಕೆಗಿಂತ ಖಂಡನೆಗೆ ಹೆಚ್ಚು ಅರ್ಹವಾಗಿದೆ. ಗಡಿಯ ಕನ್ನಡದ ಕುರಿತಂತೆ ಚಿಂತೆ ಮಾಡುವುದನ್ನು ಬಿಟ್ಟು ಮೊದಲು, ತನ್ನದೇ ಊರಿನಲ್ಲಿ ಕನ್ನಡ ಅನಾಥವಾಗಿರುವ ಕುರಿತಂತೆ ಮುಖ್ಯಮಂತ್ರಿ ಸ್ಪಷ್ಟೀಕರಣ ನೀಡಬೇಕಾಗಿದೆ. ಗಡಿಯಲ್ಲಿ ಮರಾಠಿ ಭಾಷೆ ಮಾತನಾಡುವವರು ಹೆಚ್ಚಿರುವುದು ಸಹಜವೇ ಆಗಿದೆ. ಯಾಕೆಂದರೆ ಮಹಾರಾಷ್ಟ್ರದ ಪ್ರಭಾವ ಅವರ ಮೇಲಿರುತ್ತದೆ. ಭಾಷೆ ಎನ್ನುವುದು ಎಲ್ಲ ಗಡಿಗಳನ್ನು ಮೀರಿ ಜನರ ಬದುಕಿನಲ್ಲಿ ಬೆರೆತಿರುತ್ತದೆ. ಆದರೆ, ಕರ್ನಾಟಕದ ಒಳಗೆ ನಡೆಯುತ್ತಿರುವ ಕೃತಕ ಹಿಂದಿ ಹೇರಿಕೆ ಮಾತ್ರ ಅತ್ಯಂತ ಅಪಾಯಕಾರಿಯಾಗಿದೆ. ಇಂದು ಸಾರ್ವಜನಿಕ ಕಚೇರಿಗಳಲ್ಲಿ ಹಿಂದಿ ಎಷ್ಟರಮಟ್ಟಿಗೆ ಪ್ರಾಬಲ್ಯವನ್ನು ಪಡೆಯುತ್ತಿದೆಯೆಂದರೆ, ಕನ್ನಡ ಮಾತನಾಡುವವನು ಅನಿವಾರ್ಯವಾಗಿ ಹಿಂದಿ ಕಲಿಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಉತ್ತರ ಭಾರತದಿಂದ ಕರ್ನಾಟಕಕ್ಕೆ ನೌಕರಿಗೆಂದು ಆಗಮಿಸಿರುವ ಸಿಬ್ಬಂದಿ, ಕನ್ನಡಿಗರ ಮೇಲೆ ಹಿಂದಿಯನ್ನು ಬಲವಂತವಾಗಿ ಹೇರುತ್ತಿದ್ದಾರೆ. ಕೇಂದ್ರ ಸರಕಾರವೇ ವ್ಯವಸ್ಥಿತವಾಗಿ ರಾಜ್ಯ ಸರಕಾರದ ಮೂಲಕ ಹಿಂದಿ ಹೇರಿಕೆಯನ್ನು ಮಾಡುತ್ತಿರುವಾಗಲೂ ಮುಖ್ಯಮಂತ್ರಿ ವೌನವಾಗಿದ್ದಾರೆ. ಹೀಗಿರುವಾಗ, ಮುಖ್ಯಮಂತ್ರಿಯವರು ಉದ್ಧವ್ ಠಾಕ್ರೆಯವರ ಹೇಳಿಕೆಯನ್ನು ಮಾತ್ರ ಗಂಭೀರವಾಗಿ ಸ್ವೀಕರಿಸುವ ಅಗತ್ಯವಿದೆಯೇ?

ರಾಜ್ಯದ ಎಲ್ಲ ಜಾತಿ, ಧರ್ಮಗಳ ಮಾತೃ ಭಾಷೆ ಕನ್ನಡವಲ್ಲ. ಇಲ್ಲಿ ಕೊಂಕಣಿ, ಬ್ಯಾರಿ, ಹವ್ಯಕ, ತುಳು...ಹೀಗೆ ಬೇರೆ ಬೇರೆ ಮಾತೃ ಭಾಷೆಯ ಜನರಿದ್ದಾರೆ. ಆದರೂ ಅವರು ರಾಜ್ಯಭಾಷೆಯಾಗಿ ಕನ್ನಡವನ್ನು ಹೃತ್ಪೂರ್ವಕವಾಗಿ ಸ್ವೀಕರಿಸಿದ್ದಾರೆ. ಕನ್ನಡ ಅಸ್ಮಿತೆಯೊಂದಿಗೆ ಒಂದಾಗಿದ್ದಾರೆ. ಆದರೆ ಇಂದು ಇಂಗ್ಲಿಷ್, ಹಿಂದಿಯ ಪರಿಣಾಮವಾಗಿ ಅವರ ನಡುವಿನಿಂದ ಕನ್ನಡ ನಿಧಾನಕ್ಕೆ ಮರೆಯಾಗುತ್ತಿದೆ. ಹೀಗೆ ಕನ್ನಡ ಅಭಿವೃದ್ಧಿಯೇ ಹಳ್ಳ ಹಿಡಿಯುತ್ತಿರುವ ಸಂದರ್ಭದಲ್ಲಿ, ರಾಜ್ಯ ಸರಕಾರ ಮರಾಠಿ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಿತು ಮಾತ್ರವಲ್ಲ, ಕನ್ನಡಿಗರ ತೆರಿಗೆಯ ಹಣವನ್ನು ಅನುದಾನವಾಗಿ ನೀಡಿತು. ಇದರಿಂದಾಗಿ ಗಡಿಭಾಗದಲ್ಲಿ ಈಗಾಗಲೇ ಅಲ್ಪಸಂಖ್ಯಾತರಾಗಿರುವ ಕನ್ನಡಿಗರು ಇನ್ನಷ್ಟು ದುರ್ಬಲವಾಗುವಂತಾಗಿದೆ. ಮರಾಠಿ ಮಾತನಾಡುವವರಿಗೆ ಸರಕಾರವೇ ವಿಶೇಷ ಪ್ರೋತ್ಸಾಹಗಳನ್ನು ನೀಡುತ್ತಿರುವಾಗ, ಮರಾಠಿಗರು ಕನ್ನಡದ ಕುರಿತಂತೆ ಯಾಕೆ ಆಸಕ್ತಿಯನ್ನು ತೋರಿಸಿಯಾರು? ಗಡಿ ಭಾಗದಲ್ಲಿ ಎಲ್ಲಿಯವರೆಗೆ ಕನ್ನಡ ಭಾಷೆಯಿರುತ್ತದೆಯೋ ಅಲ್ಲಿಯವರೆಗೆ ಆ ಭೂಮಿ ಕನ್ನಡಿಗರದ್ದಾಗಿರುತ್ತದೆ. ಆದರೆ ಅಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಸಂಪೂರ್ಣ ಅಳಿದರೆ, ಭೂಮಿ ನಮ್ಮದಾಗಿದ್ದರೂ ಜನ ನಮ್ಮವರಾಗಿರುವುದಿಲ್ಲ. ಅವರು ಮಹಾರಾಷ್ಟ್ರದ ಜೊತೆಗೆ ನಿಂತರೆ, ರಾಜ್ಯ ಸರಕಾರ ಅದೆಷ್ಟು ದೊಡ್ಡದಾಗಿ ಬೊಬ್ಬೆ ಹೊಡೆದರೂ ಬೆಳಗಾವಿಯ ಭಾಗವನ್ನ್ನು ನಮ್ಮದಾಗಿಸಲು ಸಾಧ್ಯವಿಲ್ಲ. ನಿಜಕ್ಕೂ ಬೆಳಗಾವಿಯನ್ನು ಕರ್ನಾಟಕದಲ್ಲೇ ಉಳಿಸುವುದಕ್ಕೆ ಸರಕಾರಕ್ಕೆ ಆಸಕ್ತಿಯಿದೆಯಾದರೆ ಗಡಿಭಾಗದ ಕನ್ನಡಿಗರನ್ನು ಉಳಿಸಿ, ಬೆಳೆಸುವ ಕುರಿತಂತೆ ಆಸಕ್ತಿ ವಹಿಸಬೇಕು. ಇದು ಮಹಾರಾಷ್ಟ್ರಕ್ಕೂ ಅನ್ವಯಿಸುತ್ತದೆ. ಉಭಯ ಸರಕಾರಗಳು ಅಲ್ಲಿಯ ಜನರ ಬದುಕು ಬವಣೆಗಳ ಕುರಿತಂತೆ ಮೊದಲು ಚರ್ಚಿಸಲಿ. ಅವರಿಗೆ ಅನುಕೂಲಗಳನ್ನು ಮಾಡಿಕೊಡಲಿ. ಅವರ ಬದುಕನ್ನು ಮೇಲೆತ್ತುವ ಮೂಲಕ ತಮ್ಮವರನ್ನಾಗಿಸಲಿ ಹೊರತು, ತಮ್ಮ ರಾಜಕೀಯ ಉದ್ದೇಶಗಳಿಗಾಗಿ ಗಡಿಭಾಗದಲ್ಲಿ ಬದುಕುತ್ತಿರುವ ಜನರ ಬದುಕನ್ನು ಬಲಿಯಾಗಿಸುವುದು ಯಾವ ಕಾರಣಕ್ಕೂ ಸರಿಯಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News