ಮಕ್ಕಳ ಮೇಲೆ ಒತ್ತಡ ಹೇರುವುದು ಸೂಕ್ತವೇ?

Update: 2021-01-20 05:43 GMT

ಮಾನ್ಯರೇ,

ಜೂನ್-ಜುಲೈ ತಿಂಗಳಿನಲ್ಲಿ ಎಸೆಸೆಲ್ಸಿ ಪರೀಕ್ಷೆ ನಡೆಯುತ್ತದೆಂದು ಶಿಕ್ಷಣ ಮಂತ್ರಿಗಳು ಘೋಷಣೆ ಮಾಡಿದ್ದಾರೆ. ಆದರೆ, ವಾಸ್ತವದಲ್ಲಿ ಪರೀಕ್ಷೆ ಎದುರಿಸಲು ರಾಜ್ಯದಲ್ಲಿರುವ ಸುಮಾರು ಎಂಟು ಲಕ್ಷ ಮಕ್ಕಳು ಮಾನಸಿಕವಾಗಿ ಸಿದ್ಧವಾಗಿದ್ದಾರಾ? ಪರೀಕ್ಷೆಗೆ ಪೂರಕವಾದ ಎಲ್ಲ ಚಟುವಟಿಕೆಗಳು ಆರಂಭವಾಗಿ, ಸಕಲ ಸಿದ್ಧತೆಗಳು ನಡೆಯುತ್ತಿವೆಯೇ ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿವೆ.

ಈ ಶೈಕ್ಷಣಿಕ ಸಾಲಿನಲ್ಲಿ ಹತ್ತನೇ ತರಗತಿ ಓದುತ್ತಿರುವ ಮಕ್ಕಳು, ಕೊರೋನ ಕಾರಣದಿಂದ ಕಳೆದ ವರ್ಷದ 9ನೇ ತರಗತಿಯಲ್ಲಿ ಪರೀಕ್ಷೆ ಬರೆಯದೆ ಪಾಸು-ಫೇಲು ಎಂದು ಮೌಲ್ಯಮಾಪನಕ್ಕೆ ಒಳಗಾಗದೆ ನೇರ ಹತ್ತನೇ ತರಗತಿಗೆ ಪ್ರವೇಶ ಪಡೆದಿದ್ದಾರೆ. ಸುಮಾರು ಹತ್ತು ತಿಂಗಳ ನಂತರ ಜನವರಿ 1ರಿಂದ ಈ ಮಕ್ಕಳು ಶಾಲಾ ಆವರಣಕ್ಕೆ ಪ್ರವೇಶಿಸಿದ್ದಾರೆ. ಇಲಾಖೆ ನಿಗದಿಪಡಿಸಿದ ವೇಳಾಪಟ್ಟಿಯಂತೆ ತರಗತಿಗಳು ಈಗ ನಡೆಯುತ್ತಿವೆ. ಬೆಳಗ್ಗೆ, ಮಧ್ಯಾಹ್ನದ ಬ್ಯಾಚ್‌ಗಳಲ್ಲಿ ಮಕ್ಕಳು ಕಲಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿರುವ ಶಾಲೆಗಳಲ್ಲಿ ಬ್ಯಾಚ್ ಕಲಿಕೆಯಿಂದ ತೊಂದರೆಯಾಗುತ್ತಿದೆ. ಇದರಿಂದ ಒಬ್ಬ ವಿದ್ಯಾರ್ಥಿ ವಾರದಲ್ಲಿ ಎರಡು ಮೂರು ದಿನ ಮಾತ್ರ ಶಾಲೆಗೆ ಬರುವಂತಾಗಿದೆ. ಪರಿಣಾಮ ಪಾಠ ಅರ್ಥೈಸಿಕೊಳ್ಳಲಾಗದೆ ಗೊಂದಲ, ಹಿಂಸೆ ಅನುಭವಿಸುವಂತಾಗಿದೆ.

 ಎಲ್ಲಾ ಜಿಲ್ಲೆಗಳು ಎಸೆಸೆಲ್ಸಿ ಫಲಿತಾಂಶವನ್ನು ಪ್ರತಿಷ್ಠೆಯಾಗಿ ತೆಗೆದುಕೊಳ್ಳುತ್ತವೆ. ಬಹುತೇಕ ಜಿಲ್ಲೆಗಳು ಪ್ರತಿವರ್ಷವೂ ಎಸೆಸೆಲ್ಸಿ ಓದುವ ಮಕ್ಕಳಿಗೆ ಪರೀಕ್ಷೆ ಬರೆಯಲು ಸಾಕಷ್ಟು ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದವು. ಆದರೆ, ಈ ವರ್ಷ ಸಮಯ ಅತ್ಯಂತ ಕಡಿಮೆ ಇರುವ ಕಾರಣ ತರಾತುರಿಯಲ್ಲಿ ಮಕ್ಕಳನ್ನು ಸಿದ್ಧಗೊಳಿಸುವುದು ಕಷ್ಟಕರವಾಗಿದೆ. ಇದೆಲ್ಲದರ ಪರಿಣಾಮ ಒತ್ತಡಕ್ಕೆ ಸಿಲುಕುವುದು ಶಿಕ್ಷಕರು ಮತ್ತು ಮಕ್ಕಳು ಮಾತ್ರ. ಹಾಗಾಗಿ ಸರಕಾರ ಎಸೆಸೆಲ್ಸಿ ಪರೀಕ್ಷೆ ನಡೆಸುವ ಮುನ್ನ ಮಕ್ಕಳು ಈ ಪರೀಕ್ಷೆ ಬರೆಯಲು ಮಾನಸಿಕವಾಗಿ ಸಿದ್ಧರಾಗಿದ್ದಾರೆಯೇ ಎಂದು ಸಾಕಷ್ಟು ಯೋಚಿಸಬೇಕಾಗಿದೆ.

-ಪ್ರಹ್ಲಾದ್ ವಾ. ಪತ್ತಾರ, ಯಡ್ರಾಮಿ, ಕಲಬುರಗಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News