ರಾಜಕಾರಣಿಗಳಿಗೆ ಲಸಿಕೆ ಕಡ್ಡಾಯವಾಗಲಿ

Update: 2021-01-21 09:51 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಭಾರತಾದ್ಯಂತ ಕೋವ್ಯಾಕ್ಸಿನ್ ಲಸಿಕೆ ಚಳವಳಿ ಸರಕಾರದ ನೇತೃತ್ವದಲ್ಲಿ ನಡೆಯುತ್ತಿದೆ. ಲಸಿಕೆ ಹಂಚುವ ಜೊತೆ ಜೊತೆಗೆ ‘ಸ್ವದೇಶಿ’ ಕೋವ್ಯಾಕ್ಸಿನ್ ಎನ್ನುವ ಹೆಮ್ಮೆಯನ್ನು ಜನಮಾನಸದೆಡೆ ತಲುಪಿಸುವ ಪ್ರಯತ್ನವನ್ನು ರಾಜಕಾರಣಿಗಳು ಮಾಡುತ್ತಿದ್ದಾರೆ. ವಿಶ್ವವನ್ನೇ ಕಂಗೆಡಿಸಿದ ಕೊರೋನ ವಿರುದ್ಧ ಭಾರತವೂ ಲಸಿಕೆಯನ್ನು ತಯಾರಿಸಿದೆ ಎನ್ನುವುದು ಭಾರತಕ್ಕೆ ಒಂದು ಪ್ರತಿಷ್ಠೆಯ ವಿಷಯ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಕೋವ್ಯಾಕ್ಸಿನ್ ಕುರಿತಂತೆ ತಜ್ಞರು ಹೇಳಿಕೆ ನೀಡಿರುವುದಕ್ಕಿಂತ ರಾಜಕಾರಣಿಗಳು ಹೇಳಿಕೆ ನೀಡಿರುವುದೇ ಹೆಚ್ಚು. ಕೋಟ್ಯಂತರ ರೂಪಾಯಿಗಳನ್ನು ಸರಕಾರ ಈ ಕೋವ್ಯಾಕ್ಸಿನ್‌ಗಾಗಿ ಸುರಿಯುತ್ತಿದೆ. ಇಂತಹ ಸಂದರ್ಭದಲ್ಲಿ ಕೋವ್ಯಾಕ್ಸಿನ್ ತನ್ನ ವಿಶ್ವಾಸಾರ್ಹತೆಯನ್ನು ಸಾಬೀತು ಪಡಿಸುವುದು ಅತ್ಯಗತ್ಯವಾಗಿದೆ.

ಮೂರನೇ ಹಂತದ ಪರೀಕ್ಷೆ ನಡೆಸುವ ಮೊದಲೇ ಭಾರತ್ ಬಯೋಟೆಕ್ ಕೋವ್ಯಾಕ್ಸಿನ್‌ಗೆ ಸರಕಾರ ಅನುಮತಿ ನೀಡಿತ್ತು ಎನ್ನುವ ಆರೋಪದೊಂದಿಗೆ ಲಸಿಕೆ ಸಾರ್ವಜನಿಕವಾಗಿ ವಿತರಣೆಗೊಂಡಿದೆ. ಲಸಿಕೆಯ ಕುರಿತಂತೆ ವಿವಿಧ ವೈದ್ಯರು, ತಜ್ಞರು ಎತ್ತಿರುವ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸಲು ಸರಕಾರಕ್ಕೆ ಇನ್ನೂ ಸಾಧ್ಯವಾಗಿಲ್ಲ. ಈಗಾಗಲೇ ಕೋವ್ಯಾಕ್ಸಿನ್ ಹಲವರ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರಿದೆ ಎನ್ನುವುದು ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಆದರೆ ಇದನ್ನು ಅಲ್ಲಗಳೆದಿರುವ ಸರಕಾರ, ಕೇವಲ ಶೇ.0.18 ಜನರ ಮೇಲೆ ಮಾತ್ರ ಪ್ರತಿಕೂಲ ಪರಿಣಾಮ ಬೀರಿದೆ ಎಂದು ಸ್ಪಷ್ಟೀಕರಣ ನೀಡಿದೆ. ಇದುವರೆಗೆ ಕೋವಿಡ್ -19ರ ವಿರುದ್ಧ ಲಸಿಕೆ ತೆಗೆದುಕೊಂಡವರ ದೇಹದಲ್ಲಿ ಏರುಪೇರು ಕಂಡಿರುವುದು ಶೇ.0.18ಜನರಲ್ಲಿ ಮಾತ್ರ. ಅವರಲ್ಲಿ ಶೇ.0.002 ಜನರನ್ನು ಮಾತ್ರ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ. ಇದೇ ಸಂದರ್ಭದಲ್ಲಿ ಲಸಿಕೆ ತೆಗೆದುಕೊಳ್ಳಲು ವೈದ್ಯರು, ದಾದಿಯರು ಹಾಗೂ ಆರೋಗ್ಯ ಕಾರ್ಯಕರ್ತರು ನಿರಾಕರಿಸುತ್ತಿರುವುದಕ್ಕೆ ಸರಕಾರ ವಿಷಾದ ವ್ಯಕ್ತಪಡಿಸಿದೆ.

 ಒಂದನ್ನು ಗಮನಿಸಬೇಕು. ಕೊರೋನದ ನೇರ ಬಲಿಪಶುಗಳು ಮೇಲ್ಮಧ್ಯಮ ಮತ್ತು ಮೇಲ್ವರ್ಗದ ಜನರು. ಕ್ಷಯ, ಮಲೇರಿಯಾ ಇತ್ಯಾದಿ ರೋಗಗಳು ನೇರವಾಗಿ ಬಡವರನ್ನು, ಸ್ಲಂ ಜನರನ್ನು ಗುರಿಯಾಗಿಸಿದ್ದರೆ, ಕೊರೋನ ಮೇಲ್ವರ್ಗದ ಜನರನ್ನು ಗುರಿಯಾಗಿಸಿಕೊಂಡಿತ್ತು. ಕೊರೋನ ವೈರಸ್ ಭಾರತಕ್ಕೆ ಬಂದಿರುವುದು ವಿಮಾನ ನಿಲ್ದಾಣಗಳ ಮೂಲಕ. ಅಂದರೆ ವಿದೇಶಗಳಲ್ಲಿ ವಾಸಿಸುತ್ತಿರುವ ಭಾರತೀಯರ ಮೂಲಕ. ಅಥವಾ ವಿದೇಶಗಳಲ್ಲಿ ವ್ಯವಹಾರಗಳನ್ನು, ಸಂಬಂಧಗಳನ್ನು ಇಟ್ಟುಕೊಂಡವರ ಮೂಲಕ. ಆದುದರಿಂದಲೇ, ಕೊರೋನ ವೈರಸ್ ಬಡವರನ್ನು ಕಾಡಲಿಲ್ಲ. ಆದರೆ ಲಾಕ್‌ಡೌನ್ ಬಡವರ ಮೇಲೆ ಕೊರೋನಕ್ಕಿಂತಲೂ ಭೀಕರವಾಗಿ ಎರಗಿತು. ಕೊರೋನದಿಂದ ಸರ್ವನಾಶವಾದ ಮೇಲ್ವರ್ಗಕ್ಕಿಂತ, ಲಾಕ್‌ಡೌನ್‌ನಿಂದ ಸರ್ವನಾಶವಾದ ಕೆಳವರ್ಗದ ಜನರ ಸಂಖ್ಯೆ ಬಹುದೊಡ್ಡದು. ಈ ದೇಶದ ತಳವರ್ಗ ಯಾವತ್ತೂ ಲಸಿಕೆ ಬೇಕು ಎಂದು ಕೇಂದ್ರವನ್ನು ಕೇಳಿರಲಿಲ್ಲ. ಅದು ಕೇಳಿದ್ದು ನಮ್ಮನ್ನು ಹಸಿವೆಯಿಂದ ಕಾಪಾಡಿ ಎಂಬುದಾಗಿ. ‘‘ಕೊರೋನಕ್ಕೆ ನಾವು ಹೆದರುವುದಿಲ್ಲ, ಹಸಿವೆಗೆ ಹೆದರುತ್ತಿದ್ದೇವೆ’’ ಎಂದು ಬಹಿರಂಗವಾಗಿಯೇ ವಲಸೆ ಕಾರ್ಮಿಕರು ಹೇಳಿಕೆ ನೀಡಿದ್ದರು.

ವಿಪರ್ಯಾಸವೆಂದರೆ, ಕೊರೋನ ಲಸಿಕೆ ತಯಾರಾಗಿದೆ ಎಂದು ಸರಕಾರ ಘೋಷಿಸಿದ ಬೆನ್ನಿಗೇ ‘ಪೌರ ಕಾರ್ಮಿಕರಿಗೆ ಆದ್ಯತೆ’ ಎಂದೂ ಹೇಳಿತು. ನಿಜಕ್ಕೂ ಕೊರೋನ ಮಾರಣಾಂತಿಕ ರೋಗವೇ ಆಗಿದ್ದರೆ ಅದರ ಮೊದಲ ಬಲಿಪಶುಗಳು ಪೌರಕಾರ್ಮಿಕರೇ ಆಗಬೇಕಾಗಿತ್ತು. ದೇಶವಿಡೀ ಲಾಕ್‌ಡೌನ್ ಮಾಡಿ ಮನೆಯಲ್ಲಿ ಕುಳಿತಿರುವಾಗ ಈ ಪೌರಕಾರ್ಮಿಕರು ಯಾವ ಭಯವೂ ಇಲ್ಲದೆ ಬೀದಿ ಗುಡಿಸುತ್ತಿದ್ದರು. ಕಸ ಎತ್ತುತ್ತಿದ್ದರು. ಅವರು ಕೊರೋನಕ್ಕೆ ಹೆದರಲೂ ಇಲ್ಲ, ಕೊರೋನ ಇವರ ತಂಟೆಗೆ ಬರಲೂ ಇಲ್ಲ. ಯಾವ ಕಾರ್ಮಿಕ ಸಂಘಟನೆಗಳೂ ‘ನಮಗೆ ಆದ್ಯತೆಯ ಮೇಲೆ ಲಸಿಕೆ ನೀಡಿ’ ಎಂದು ಬೇಡಿಕೆಯನ್ನು ಇಟ್ಟಿರಲಿಲ್ಲ. ಹೀಗಿರುವಾಗ ಸರಕಾರವೇ ‘ಪೌರ ಕಾರ್ಮಿಕರಿಗೆ ಆದ್ಯತೆ’ ಎಂದು ಪ್ರೀತಿ ತೋರಿಸಿರುವುದರ ಉದ್ದೇಶ ಸ್ಪಷ್ಟ. ಸರಕಾರ ಲಸಿಕೆಯ ಪರಿಣಾಮವನ್ನು ಪರೀಕ್ಷಿಸಲು ಪೌರ ಕಾರ್ಮಿಕರನ್ನು ಆರಿಸಿಕೊಂಡಿದೆ. ಅವರಿಗೇನಾದರೂ ದುಷ್ಪರಿಣಾಮವಾದರೆ ಲಸಿಕೆಯನ್ನು ಸ್ಥಗಿತಗೊಳಿಸಬಹುದು ಎನ್ನುವ ದೂರಾಲೋಚನೆ ಮತ್ತು ದುರಾಲೋಚನೆ ಸರಕಾರದ್ದು.

ಲಸಿಕೆ ಅಭಿಯಾನದ ಸಂದರ್ಭದಲ್ಲಿ, ಸ್ವಯಂಸೇವಕರಾಗಿ ದುಡಿದ ನೂರಾರು ಮಹಿಳಾ ಸಿಬ್ಬಂದಿಯನ್ನೂ ಒತ್ತಾಯ ಪೂರ್ವಕವಾಗಿ ಲಸಿಕೆಗೆ ಬಳಸಿಕೊಳ್ಳುವ ಆರೋಪಗಳು ಕೇಳಿ ಬರುತ್ತಿವೆ. ಚಿತ್ರದುರ್ಗದಲ್ಲಿ ಲಸಿಕೆ ತೆಗೆದುಕೊಳ್ಳಲು ನರ್ಸ್ ನಿರಾಕರಿಸಿದಾಗ ‘‘ತೆಗೆದುಕೊಳ್ಳಮ್ಮ. ನೀವೇ ಹಿಂಜರಿದರೆ ಉಳಿದವರ ಗತಿಯೇನು?’’ ಎಂದು ಸಚಿವ ಶ್ರೀರಾಮುಲು ಬಲವಂತವಾಗಿ ಲಸಿಕೆ ತೆಗೆದುಕೊಳ್ಳುವಂತೆ ಮಾಡಿದರು. ಹಾಗಾದರೆ ಸಚಿವ ಶ್ರೀರಾಮುಲು ಅವರೇ ಲಸಿಕೆಯನ್ನು ತೆಗೆದುಕೊಂಡು ಉಳಿದವರಿಗೆ ಪ್ರೇರಣೆ ನೀಡಬಹುದಿತ್ತಲ್ಲ. ಕೊರೋನದಿಂದ ನೂರಾರು ರಾಜಕಾರಣಿಗಳು ಬಾಧಿತರಾಗಿದ್ದಾರೆ. ರಾಜಕಾರಣಿಗಳು ಸಾರ್ವಜನಿಕರ ನಡುವೆ ಮುಕ್ತವಾಗಿ ಓಡಾಡುತ್ತಿರುವವರು. ಕೊರೋನ ಲಸಿಕೆಯನ್ನು ಆದ್ಯತೆಯಿಂದ ಮೊದಲು ನೀಡಬೇಕಾಗಿರುವುದು ರಾಜಕಾರಣಿಗಳಿಗೆ. ಉಳಿದೆಲ್ಲ ದೇಶಗಳಲ್ಲಿ ಅಲ್ಲಿನ ನಾಯಕರೇ ಪ್ರಥಮವಾಗಿ ಲಸಿಕೆಯನ್ನು ಸ್ವೀಕರಿಸಿದ್ದಾರೆ. ಆದರೆ ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ಈವರೆಗೆ ಲಸಿಕೆಯನ್ನು ಸ್ವೀಕರಿಸಿಲ್ಲ. ಅವರೆಂದಲ್ಲ ಯಾವುದೇ ಪ್ರಮುಖ ನಾಯಕರು ಈವರೆಗೆ ಲಸಿಕೆಯನ್ನು ಸ್ವೀಕರಿಸಿ ಜನರಿಗೆ ಪ್ರೇರಣೆ, ಸ್ಫೂರ್ತಿಯನ್ನು ನೀಡಿಲ್ಲ. ಜನರಿಗೆ ಶಿಫಾರಸು ಮಾಡಿರುವ ಲಸಿಕೆಯ ಮೇಲೆ ನಮ್ಮ ನಾಯಕರಿಗೆ ನಂಬಿಕೆಯಿಲ್ಲ ಎನ್ನುವುದು ಇದು ತಿಳಿಸುವುದಿಲ್ಲವೇ? ಅಷ್ಟೇ ಯಾಕೆ, ದೊಡ್ಡ ಮಟ್ಟದಲ್ಲಿ ವೈದ್ಯರು ಈ ಲಸಿಕೆಯನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ. ಸರಕಾರ ಇದಕ್ಕಾಗಿ ಖೇದ ವ್ಯಕ್ತಪಡಿಸಿದೆ. ವೈದ್ಯರೇ ಸ್ವೀಕರಿಸಲು ಸಿದ್ಧವಿಲ್ಲದ ಲಸಿಕೆಯನ್ನು ಜನರ ಮೇಲೆ ಬಲವಂತವಾಗಿ, ಒತ್ತಾಯಪೂರ್ವವಾಗಿ ಹೇರುವುದು ಎಷ್ಟು ಸರಿ? ಎನ್ನುವ ಪ್ರಶ್ನೆ ಈಗ ಎದ್ದಿದೆ.

 ಲಸಿಕೆ ಅಭಿಯಾನದ ಎರಡು ದಿನಗಳಲ್ಲಿ ರಾಜಧಾನಿ ಹೊಸದಿಲ್ಲಿಯಲ್ಲಿರುವ ಕೇಂದ್ರ ಸರಕಾರದ 6 ಆಸ್ಪತ್ರೆಗಳಲ್ಲಿ ಶೇ. 50ಕ್ಕೂ ಅಧಿಕ ಆರೋಗ್ಯ ಕಾರ್ಯಕರ್ತರು ಭಾರತ್ ಬಯೋಟೆಕ್ ಕೋವ್ಯಾಕ್ಸಿನ್ ಲಸಿಕೆಯನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ. 1,250 ಮಂದಿಗೆ ಲಸಿಕೆಯನ್ನು ನೀಡಲು ಗುರಿಯಿರಿಸಲಾಗಿತ್ತಾದರೂ ಜ.16 ಮತ್ತು 18ರಂದು ಒಟ್ಟು 551 ಆರೋಗ್ಯ ಕಾರ್ಯಕರ್ತರು ಅಂದರೆ ಶೇ. 44.8ರಷ್ಟು ಮಂದಿ ಮಾತ್ರ ಲಸಿಕೆಯನ್ನು ಪಡೆದುಕೊಂಡಿದ್ದಾರೆ. ಹೊಸದಿಲ್ಲಿಯಲ್ಲಿನ 81 ಆಸ್ಪತ್ರೆಗಳ ಪೈಕಿ 75 ಆಸ್ಪತ್ರೆಗಳನ್ನು ದಿಲ್ಲಿ ಸರಕಾರ ಹಾಗೂ ಖಾಸಗಿ ಸಂಸ್ಥೆಗಳು ನಡೆಸುತ್ತಿವೆ. ಈ ಆಸ್ಪತ್ರೆಗಳಲ್ಲಿ ಕೋವಿಶೀಲ್ಡ್ ಲಸಿಕೆಯನ್ನು ವಿತರಿಸಲಾಗಿದೆ. ಕೋವಿಶೀಲ್ಡ್ ಲಸಿಕೆಯನ್ನು ಆಕ್ಸ್‌ಫರ್ಡ್-ಆ್ಯಸ್ಟ್ರಝೆನೆಕ ಸಂಶೋಧಿಸಿದೆ. ಲಸಿಕೆಯ ವಿಷಯದಲ್ಲೂ ಭಾರತ ಇಬ್ಭಾಗವಾಗಿದೆ. ಬಡವರಿಗೊಂದು ಲಸಿಕೆ, ಶ್ರೀಮಂತರಿಗೊಂದು ಲಸಿಕೆ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಎಲ್ಲಿಯವರೆಗೆ ರಾಜಕಾರಣಿಗಳು ಮತ್ತು ವೈದ್ಯರು ಮುಕ್ತವಾಗಿ, ನಿರ್ಭಯವಾಗಿ ಲಸಿಕೆಯನ್ನು ತೆಗೆದುಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಜನಸಾಮಾನ್ಯರಿಗೆ ಒತ್ತಾಯಪೂರ್ವಕವಾಗಿ ಲಸಿಕೆಯನ್ನು ನೀಡಬಾರದು. ಜನರು ಸ್ವಯಂ ಆಸಕ್ತಿಯಿಂದ ಬಂದರೆ ಮಾತ್ರ ಅವರಿಗೆ ಲಸಿಕೆಯನ್ನು ನೀಡಬೇಕು. ರಾಜಕೀಯ ಪ್ರತಿಷ್ಠೆಗಾಗಿ ಜನಸಾಮಾನ್ಯರ ಬದುಕಿನ ಮೇಲೆ ಸರಕಾರ ಯಾವ ಕಾರಣಕ್ಕೂ ಆಟ ಆಡಬಾರದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News