ಗ್ರಾಮೀಣ ಶಾಲೆಗಳ ಸೌಕರ್ಯಕ್ಕೆ ಸುಸ್ಥಿರ ಅಭಿವೃದ್ಧಿ ಆಂದೋಲನ: ಸುರೇಶ್ ಕುಮಾರ್

Update: 2021-01-21 16:58 GMT

ಬೆಂಗಳೂರು, ಜ.21: ಶಾಲಾ ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ, ಶೌಚಾಲಯ ನಿರ್ಮಾಣ, ಶಾಲಾ ಕಾಂಪೌಂಡ್, ಅಡುಗೆ ಮನೆ ನಿರ್ಮಾಣ, ಆಟದ ಮೈದಾನ ಸೇರಿದಂತೆ ರಾಜ್ಯದ ಗ್ರಾಮೀಣ ಪ್ರದೇಶದ ಶಾಲೆಗಳಿಗೆ ಹಲವು ಸೌಕರ್ಯಗಳನ್ನು ಒದಗಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನೆರವಿನಲ್ಲಿ ‘ಶಾಲೆಗಳ ಸುಸ್ಥಿರ ಅಭಿವೃದ್ಧಿಗೆ ಬೃಹತ್ ಆಂದೋಲನ ಕೈಗೆತ್ತಿಕೊಳ್ಳಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.

ಗುರವಾರ ನಗರದಲ್ಲಿನ ಸಮಗ್ರ ಶಿಕ್ಷಣ ಕರ್ನಾಟಕದ ಕಚೇರಿ ಸಭಾಂಗಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಅಧಿಕಾರಿಗಳ ಸಭೆಯ ನಂತರ ಮಾತನಾಡಿದ ಅವರು, ರಾಜ್ಯದ ಪ್ರತಿಯೊಂದು ಶಾಲೆಗಳಿಗೂ ಶುದ್ಧ ಕುಡಿಯುವ ನೀರು ಪೂರೈಕೆ ವ್ಯವಸ್ಥೆ ಮತ್ತು ಶೌಚಾಲಯಗಳನ್ನು ನಿರ್ಮಾಣ ಮಾಡಲಾಗುವುದು ಎಂದರು.

ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲದ ಶಾಲೆಗಳಲ್ಲಿ ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಶೌಚಾಲಯ ನಿರ್ಮಾಣ ಮಾಡಲಾಗುತ್ತಿದೆ. ಸುಮಾರು 1500ಕ್ಕೂ ಹೆಚ್ಚು ಶಾಲೆಗಳಲ್ಲಿ ಗುಣಮಟ್ಟದ ಶೌಚಾಲಯಗಳನ್ನು ನಿರ್ಮಿಸಲಾಗುತ್ತಿದೆ. ಶುದ್ಧ ನೀರು ಪೂರೈಕೆ ಮಾಡಲು ಗ್ರಾಮದ ನೀರು ಸಂಪರ್ಕ ಮಾರ್ಗದಿಂದ ಶಾಲೆಯ ಸಂಪ್‍ಗೆ ನೀರು ಪೂರೈಸಿ ಅಲ್ಲಿಂದ ಶಾಲೆಯ ಮೇಲಿನ ಟ್ಯಾಂಕ್‍ಗೆ ನೀರು ಪೂರೈಸಿ ಶಾಲೆಗಳ ಶೌಚಾಲಯ, ಅಡುಗೆ ಮನೆ ಮತ್ತು ಕೈತೊಳೆಯುವ ಸ್ಥಳಕ್ಕೆ ನೀರು ಪೂರೈಕೆ ಮಾಡುವಂತೆ ಪೈಪ್‍ಲೈನ್ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.

ಗ್ರಾಮೀಣ ಪ್ರದೇಶಗಳಲ್ಲಿ ನಿರ್ಮಾಣವಾಗಿರುವ ಶುದ್ಧ ಕುಡಿಯುವ ನೀರು ಘಟಕಗಳಿಂದ ಶಾಲೆಗಳಿಗೆ ಯಾವುದೇ ಶುಲ್ಕ ಪಡೆಯದೇ ಉಚಿತವಾಗಿ ನೀರು ಪೂರೈಕೆ ಮಾಡಲು ಈಗಾಗಲೇ ಗ್ರಾಮೀಣಾಭಿವೃದ್ಧಿ ಇಲಾಖೆ ಸೂಚನೆ ನೀಡಿದೆ. ಜಲಜೀವನ್ ಮಿಷನ್ ಅಡಿಯಲ್ಲಿ ನಮ್ಮ 17,700 ಶಾಲೆಗಳಲ್ಲಿ ಕುಡಿಯುವ ನೀರು ಪೂರೈಕೆ ಘಟಕಗಳನ್ನು ಇದೇ ಫೆಬ್ರವರಿ ಕೊನೆಯೊಳಗೆ ಪೂರ್ಣಗೊಳಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಶಾಲಾ ವ್ಯಾಪ್ತಿಯಲ್ಲಿ ಸಮುದಾಯ ಕಸದ ಬುಟ್ಟಿಗಳಿಂದ ತ್ಯಾಜ್ಯ ವಿಂಗಡಣೆ ಮಾಡಲಾಗುವುದು. ಇದನ್ನು ಗ್ರಾಮ ಪಂಚಾಯತ್ ಗಳು ನಿರ್ವಹಿಸಲಿದ್ದು, ಪೈಪ್ ಕಾಂಪೋಸ್ಟಿಂಗ್ ಬಳಸಿ ಶಾಲಾವರಣದಲ್ಲಿ ಹಸಿ ತ್ಯಾಜ್ಯ ನಿರ್ವಹಣೆ ಮಾಡಲಾಗುವುದು. ಇಂಗು ಗುಂಡಿ ನಿರ್ಮಾಣ, ಹಿತ್ತಲ ಕೈದೋಟಗಳ ನಿರ್ವಹಣೆ ವ್ಯವಸ್ಥೆ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಋತುಚಕ್ರ ನೈರ್ಮಲ್ಯ ನಿರ್ವಹಣೆ ಕುರಿತು ಶಾಲಾ ವಿದ್ಯಾರ್ಥಿನಿಯರಲ್ಲಿ ಅರಿವು ಮೂಡಿಸುವುದರೊಂದಿಗೆ ಶಾಲೆಗಳ ಸಮೀಪ ಮತ್ತು ಆಯ್ದ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪ್ರಯೋಗಾತ್ಮಕವಾಗಿ ನ್ಯಾಪ್ಕಿನ್ ಇನ್ಸಿನರೇಟರ್ ಯಂತ್ರಗಳನ್ನು ಗ್ರಾಮೀಣಾಭಿವೃದ್ಧಿ ಇಲಾಖೆಯ ಸಹಕಾರದ ಮೂಲಕ ಅಳವಡಿಸಲಾಗುವುದು ಎಂದು ಸುರೇಶ್ ಕುಮಾರ್ ತಿಳಿಸಿದರು.

ಮಹಾತ್ಮಾಗಾಂಧಿ ನರೇಗಾ ಯೋಜನೆಯಡಿ ಶಾಲೆಗಳ ಅಭಿವೃದ್ಧಿಗೆ ಶಾಲಾ ಶೌಚಾಲಯ ನಿರ್ಮಾಣ, ಶಾಲಾ ಅಡುಗೆ ಕೋಣೆ, ಶಾಲಾ ಕಾಂಪೌಂಡ್ ನಿರ್ಮಾಣ, ಶಾಲೆಗಳಲ್ಲಿ ಮಳೆಕೊಯ್ಲು ವ್ಯವಸ್ಥೆ, ಶಾಲಾ ಆಟದ ಮೈದಾನ ಮತ್ತು ಶಾಲಾ ಪೌಷ್ಠಿಕ ಕೈದೋಟಗಳನ್ನು ನಿರ್ಮಾಣ ಮಾಡಲಾಗುವುದು. ಶಾಲಾ ಪೌಷ್ಠಿಕ ಕೈದೋಟದ ಉತ್ಪನ್ನಗಳನ್ನು ಮಧ್ಯಾಹ್ನದ ಬಿಸಿಯೂಟಕ್ಕೆ ಬಳಸಿಕೊಳ್ಳಬಹುದಾಗಿದೆ ಎಂದು ಸುರೇಶ್ ಕುಮಾರ್ ವಿವರಿಸಿದರು. 

ಪ್ರತಿ ಶಾಲೆಗಳಲ್ಲಿ ಅಂದಾಜು 4.30 ಲಕ್ಷ ರೂ.ವೆಚ್ಚದಲ್ಲಿ 270 ಚದರ ಅಡಿಗಳಲ್ಲಿ ವಿದ್ಯಾರ್ಥಿನಿಯರಿಗೆ ಮೂರು ಶೌಚಾಲಯ, ವಿದ್ಯಾರ್ಥಿಗಳಿಗೆ ಒಂದು ಶೌಚಾಲಯ ಮತ್ತು ಎರಡು ಮೂತ್ರಾಲಯಗಳನ್ನು ನಿರ್ಮಿಸಲಾಗುವುದು. ಇದರಲ್ಲಿ ಒಂದು ಸೆಪ್ಟಿಕ್ ಟ್ಯಾಂಕ್, 1000 ಲೀಟರ್ ನ ಓವರ್ ಹೆಡ್ ಟ್ಯಾಂಕ್‍ ಒಳಗೊಳ್ಳಲಿದೆ ಎಂದು ಅವರು ಹೇಳಿದರು.

ಶಾಲಾ ಅಡುಗೆ ಕೋಣೆ ಕಾಂಪೌಂಡ್ ನಿರ್ಮಾಣ: 500 ಮಕ್ಕಳಿರುವ ಶಾಲೆಗಳಿಗೆ ಅಂದಾಜು 6.20 ಲಕ್ಷ ರೂ. ವೆಚ್ಚದಲ್ಲಿ 390 ಚದರ ಅಡಿ ವಿಸ್ತೀರ್ಣದಲ್ಲಿ ಶಾಲಾ ಅಡುಗೆ ಕೋಣೆ ನಿರ್ಮಿಸಲಾಗುವುದು. ಇದರ ಪೂರ್ಣ ಮೊತ್ತ ಭರಿಸಲು ನರೇಗಾದಲ್ಲಿ ಅವಕಾಶವಿಲ್ಲವಾದ್ದರಿಂದ 15ನೇ ಹಣಕಾಸು ಯೋಜನೆ ಮೂಲಕ ಆರ್.ಡಿ.ಪಿ.ಆರ್ ಇಲಾಖೆ ಅನುದಾನ ಒಗ್ಗೂಡಿಸಲಿದೆ ಎಂದು ಅವರು ವಿವರಿಸಿದರು.

2020-21ನೇ ಸಾಲಿನಲ್ಲಿ 29 ಜಿಲ್ಲೆಗಳ 1222 ಶಾಲೆಗಳಿಗೆ 270 ಕೋಟಿ ರೂ.ವೆಚ್ಚದಲ್ಲಿ ಕಾಂಪೌಂಡ್ ಗೋಡೆ ನಿರ್ಮಾಣ ಕೈಗೆತ್ತಿಕೊಳ್ಳಲಾಗಿದೆ. ನರೇಗಾ ಯೋಜನೆಯಡಿ ಶಾಲೆಗಳಿಗೆ ಖೋಖೋ, ಕಬಡ್ಡಿ, ವಾಲಿಬಾಲ್, ಬ್ಯಾಸ್ಕೆಟ್ ಬಾಲ್, ರನ್ನಿಂಗ್ ಟ್ರ್ಯಾಕ್ ಸೇರಿದಂತೆ ಶಾಲಾ ಆಟದ ಮೈದಾನಗಳನ್ನು ನಿರ್ಮಿಸಲಾಗುವುದು ಎಂದು ಅವರು ಹೇಳಿದರು.

ಶಾಲೆಗಳಲ್ಲಿ 1.40 ಲಕ್ಷ ರೂ. ವೆಚ್ಚದಲ್ಲಿ 25,000 ಲೀಟರ್ ಮಳೆ ನೀರು ಸಂಗ್ರಹಿಸಲು ಮಳೆಕೊಯ್ಲು ಘಟಕ ನಿರ್ಮಾಣ ಮಾಡಲಾಗುವುದು. ಮಳೆ ಪ್ರಮಾಣ ಮತ್ತು ಕಟ್ಟಡದ ವಿಸ್ತೀರ್ಣದ ಮೇರೆಗೆ ವಿನ್ಯಾಸ ಬದಲಾಯಿಸಿಕೊಳ್ಳಲು ಅವಕಾಶವಿದೆ ಎಂದು ಅವರು ಹೇಳಿದರು.

ವಿಡಿಯೋ ಕಾನ್ಫರೆನ್ಸ್: ಈ ಎಲ್ಲ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಅನುವಾಗುವಂತೆ ಸೂಕ್ತ ಮಾರ್ಗದರ್ಶನ ನೀಡಲು ಎಲ್ಲ ಜಿಲ್ಲಾ ಪಂಚಾಯ್ತಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಡಿಡಿಪಿಐಗಳಿಗೆ ಶಿಕ್ಷಣ ಇಲಾಖೆ ಮತ್ತು ಆರ್.ಡಿ.ಪಿ.ಆರ್ ಇಲಾಖೆಯ ಹಿರಿಯ ಅಧಿಕಾರಿಗಳು ಶೀಘ್ರದಲ್ಲೇ ವಿಡಿಯೋ ಕಾನ್ಪೆರೆನ್ಸ್ ನಡೆಸಿ ಆರ್.ಡಿ.ಪಿ.ಆರ್ ಸಚಿವ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ಮಾರ್ಗದರ್ಶನ ನೀಡಲಿದ್ದಾರೆ ಎಂದು ಸುರೇಶ್ ಕುಮಾರ್ ತಿಳಿಸಿದರು.

ಸಭೆಯಲ್ಲಿ ರಾಜ್ಯ ಸರಕಾರದ ಶೈಕ್ಷಣಿಕ ಸಲಹೆಗಾರ ಪ್ರೊ.ಎಂ.ಆರ್.ದೊರೆಸ್ವಾಮಿ, ಆರ್.ಡಿ.ಪಿ.ಆರ್ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಆಯುಕ್ತ ಆರ್. ವಿಶಾಲ್, ನರೇಗಾ ಆಯುಕ್ತ ಅನಿರುದ್ಧ ಶ್ರವಣ್, ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್, ಸಾಶಿಇ ಆಯುಕ್ತ ವಿ.ಅನ್ಬುಕುಮಾರ್, ಸಮಗ್ರ ಶಿಕ್ಷಣ ರಾಜ್ಯ ಯೋಜನಾ ನಿರ್ದೇಶಕಿ ದೀಪಾ ಚೋಳನ್, ಪಿಯು ನಿರ್ದೇಶಕಿ ಸ್ನೇಹಲ್ ಸೇರಿದಂತೆ ಆರ್.ಡಿ.ಪಿ.ಆರ್ ಮತ್ತು ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News