ಕ್ವಾರಂಟೈನ್ ಅವಧಿಯಲ್ಲಿ ಕಾರ್ಮಿಕರಿಗೆ ವೇತನ ಸಹಿತ ರಜೆ: ಹೈಕೋರ್ಟ್ ಗೆ ರಾಜ್ಯ ಸರಕಾರ ಮಾಹಿತಿ

Update: 2021-01-21 18:35 GMT

ಬೆಂಗಳೂರು, ಜ.21: ಕೋವಿಡ್-19 ಸೋಂಕು ಸಂಬಂಧ ಕ್ವಾರಂಟೈನ್ ಅವಧಿಯಲ್ಲಿ ಕಾರ್ಮಿಕರಿಗೆ ವೇತನ ಸಹಿತ ರಜೆ ನೀಡುವಂತೆ ಆದೇಶಿಸಲಾಗಿದೆ ಎಂದು ರಾಜ್ಯ ಸರಕಾರ ಹೈಕೋರ್ಟ್‍ಗೆ ಮಾಹಿತಿ ನೀಡಿದೆ.

ಕಾರ್ಮಿಕರಿಗೆ ಕ್ವಾರಂಟೈನ್ ಅವಧಿಯಲ್ಲಿ ವೇತನ ನೀಡುವಂತೆ ನಿರ್ದೇಶಿಸಬೇಕು. ಜತೆಗೆ ವಿಶೇಷ ಎಸ್‍ಓಪಿ ರೂಪಿಸಬೇಕೆಂದು ಕೋರಿ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ) ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಈ ಸಂದರ್ಭದಲ್ಲಿ ಸರಕಾರದ ಪರ ವಾದ ಮಂಡಿದ ವಕೀಲರು, ಕಾರ್ಮಿಕರ ಕ್ವಾರಂಟೈನ್ ಅವಧಿಯನ್ನು ಕೆಲಸದ ಅವಧಿಯಾಗಿ ಪರಿಗಣಿಸುವಂತೆ ಉದ್ದಿಮೆಗಳು ಹಾಗೂ ಕಾರ್ಖಾನೆಗಳಿಗೆ ಸೂಚಿಸಿ ಜ. 18ರಂದು ಆದೇಶ ಹೊರಡಿಸಲಾಗಿದೆ ಎಂದು ಪೀಠಕ್ಕೆ ಮಾಹಿತಿ ನೀಡಿದರು. ತದನಂತರ, ಸರಕಾರದ ಹೇಳಿಕೆಯನ್ನು ದಾಖಲು ಮಾಡಿಕೊಂಡ ಪೀಠವು ವಿಚಾರಣೆಯನ್ನು ಮುಂದೂಡಿತು.

ಏನಿದು ಅರ್ಜಿ?: ಕಾರ್ಮಿಕರು ಕೋವಿಡ್ ಸೋಂಕಿತರ ಸಂಪರ್ಕಕ್ಕೆ ಬಂದಾಗ ಅಥವಾ ಪ್ರಾಥಮಿಕ ಸಂಪರ್ಕಕ್ಕೆ ಒಳಗಾದಾಗ ಅವರಿಗೆ ಕ್ವಾರಂಟೈನ್‍ಗೆ ತೆರಳಲು ಸೂಚಿಸಲಾಗುತ್ತದೆ. ಆದರೆ, ಈ ಅವಧಿಗೆ ವೇತನ ಪಾವತಿಸುವ ಕುರಿತು ಉದ್ದಿಮೆಗಳು ಹಾಗೂ ಕಾರ್ಖಾನೆಗಳು ಯಾವುದೇ ಸ್ಪಷ್ಟನೆ ನೀಡಿಲ್ಲ.

ಆದ್ದರಿಂದ ಕ್ವಾರಂಟೈನ್ ಹಾಗೂ ಚಿಕಿತ್ಸಾ ಅವಧಿಯನ್ನು ಕೆಲಸದ ಅವಧಿ ಎಂದು ಪರಿಗಣಿಸಿ ವೇತನ ಪಾವತಿಸುವಂತೆ ನಿರ್ದೇಶಿಸಬೇಕು ಎಂದು ಎಐಟಿಯುಸಿ ಹೈಕೋರ್ಟ್‍ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಮಾಡಿತ್ತು. ಇದೀಗ ಸರಕಾರದ ಆದೇಶದಂತೆ ಸಂಘಟಿತ ಹಾಗೂ ಅಸಂಘಟಿತ ವಲಯಗಳ ಕಾರ್ಮಿಕರಿಗೆ ಕೋವಿಡ್ ದೃಢಪಟ್ಟರೆ ಕ್ವಾರಂಟೈನ್ ಅವಧಿಯಲ್ಲಿ ಪೂರ್ಣ ವೇತನ ದೊರೆಯಲಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News