ಹುಣಸೋಡು ಸ್ಫೋಟ ಪ್ರಕರಣ: ಮೂವರು ಪೊಲೀಸ್ ವಶಕ್ಕೆ?

Update: 2021-01-22 06:16 GMT

ಶಿವಮೊಗ್ಗ, ಜ.22: ಶಿವಮೊಗ್ಗದ ಹುಣಸೋಡು ಗಣಿ ಪ್ರದೇಶದಲ್ಲಿ ಜಿಲೆಟಿನ್ ಸ್ಫೋಟ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮೀನು ಮಾಲಕ ಸಹಿತ ಮೂವರನ್ನು ಪೊಲೀಸರು ವಶಕ್ಕೆ ಪಡೆದಿರುವುದಾಗಿ ತಿಳಿದುಬಂದಿದೆ.

ಸ್ಫೋಟ ಸಂಭವಿಸಿದ ಕಲ್ಲು ಗಣಿಗಾರಿಕೆಗೆ ಜಮೀನು ನೀಡಿದ ಅವಿನಾಶ್ ಕುಲಕರ್ಣಿ, ಗುತ್ತಿಗೆದಾರ ಸುಧಾಕರ್ ಹಾಗೂ ಜಿಲೆಟಿನ್ ಪೂರೈಕೆ ಮಾಡುತ್ತಿದ್ದ ಆರೋಪದಲ್ಲಿ ನರಸಿಂಹ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಬಾಂಬ್ ನಿಷ್ಕ್ರಿಯ ದಳ ಆಗಮನ

ಘಟನಾ ಸ್ಥಳಕ್ಕೆ ಇಂದು ಪೂರ್ವಾಹ್ನ 11ರ ಸುಮಾರಿಗೆ ಬಾಂಬ್ ನಿಷ್ಕ್ರಿಯ ದಳ, ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳು, ಶ್ವಾನದಳ ಆಗಮಿಸಿದ್ದು, ಪರಿಶೀಲನೆ ಆರಂಭಿಸಿದ್ದಾರೆ.

ಸ್ಥಳದಲ್ಲಿ ಇನ್ನೂ ಸಜೀವ ಜಿಲೆಟಿನ್ ಇರುವ ಶಂಕೆಯಿದ್ದು, ಪರಿಶೀಲನೆ ನಡೆಸಲಾಗುತ್ತಿದೆ. ಪರಿಶೀಲನೆ ಬಳಿಕ ಮೃತರ ಸಂಖ್ಯೆ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಲಿದೆ. ಈ ಮಧ್ಯೆ, ಸ್ಫೋಟದಿಂದ ಸಿಡಿದು ಹೊರಬಿದ್ದಿದ್ದ ಎರಡು ಮೃತದೇಹಗಳನ್ನು ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ.

ಘಟನಾ ಸ್ಥಳ ಸೇರಿ ಗಣಿಗಾರಿಕೆ ಪ್ರದೇಶಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News