ಖಾತೆ ಬದಲಾವಣೆಯಿಂದ ಬೇಸರವಾಗಿದ್ದು ನಿಜ: ಸಚಿವ ಮಾಧುಸ್ವಾಮಿ

Update: 2021-01-22 18:32 GMT

ಮೈಸೂರು,ಜ.22: ನನಗೆ ಮತ್ತೆ ಯಾವ ಖಾತೆ ಬದಲಾಯಿತು, ಯಾವ ಖಾತೆ ಕೊಟ್ಟರು ಗೊತ್ತಿಲ್ಲ, ಸಣ್ಣ ನೀರಾವರಿ ಖಾತೆ ಬದಲಾಯಿಸಿದ ಬಗ್ಗೆ ನನಗೆ ಬೇಸರವಾಗಿದ್ದು ನಿಜ ಎಂದು ಸಚಿವ ಮಾಧುಸ್ವಾಮಿ ಹೇಳಿದರು.

ನಗರದ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಮಠಕ್ಕೆ ಶುಕ್ರವಾರ ಭೇಟಿ ನೀಡಿ ಸುತ್ತೂರು ಶ್ರೀಗಳ ಆಶೀರ್ವಾದ ಪಡೆದು ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.

ನಾನು ಬೆಳಗ್ಗೆಯಿಂದಲೂ ಪ್ರವಾಸದಲ್ಲಿದ್ದೇನೆ, ನನ್ನ ಖಾತೆ ಬದಲಾವಣೆಯಾಗಿದ್ದ ಬಗ್ಗೆ ನನಗೆ ಗೊತ್ತಿಲ್ಲ. ನನ್ನ ಗಮನಕ್ಕಗೂ ಬಂದಿಲ್ಲ, ನನ್ನ ಬಳಿ ಇದ್ದ ಸಣ್ಣ ನೀರಾವರಿ ಖಾತೆ ಬದಲಾಯಿಸಿದ್ದಕ್ಕೆ ನನಗೆ ಬೇಸರವಾಗಿದ್ದು ನಿಜ. ಹಾಗಂತ ನನಗೆ ಅಸಮಧಾನವಿದೆ ಎಂದರ್ಥವಲ್ಲ, ನನಗೆ ನೀಡಿರುವ ವೈಧ್ಯಕೀಯ ಖಾತೆಯೂ ಪ್ರಭಾವಿ ಖಾತೆಯೇ, ಇದನ್ನು ನಿಭಾಯಿಸಲು ಕೂಡ ನಾನು ಶಕ್ತನಾಗಿದ್ದೇನೆ ಎಂದು ಹೇಳಿದರು.

ಕೆಲವು ಪ್ರಭಾವಿ ಖಾತೆಗಳು ಮುಖ್ಯಮಂತ್ರಿಗಳ ಬಳಿಯೇ ಇದ್ದರೆ ಕಾರ್ಯದೊತ್ತಡ ಹೆಚ್ಚಾಗುತ್ತದೆ. ಆದರೆ ಕಲವು ಖಾತೆಗಳನ್ನು ಮುಖ್ಯಮಂತ್ರಿಗಳು ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ. ಇದು ಅವರ ಪರಮಾಧಿಕಾರ. ಹಿಂದೆಯೂ ಮುಖ್ಯಮಂತ್ರಿಗಳು ಪ್ರಭಾವಿ ಖಾತೆಗಳನ್ನು ತಮ್ಮ ಬಳಿ  ಇಟ್ಟುಕೊಂಡಿದ್ದರು ಎಂದು ಹೇಳಿದರು.

ನಾನು ಗ್ರಾಮೀಣ ಪ್ರದೇಶದಿಂದ ಬಂದವನು, ಹಾಗಾಗಿ ರೈತರ ಅನುಕೂಲಕ್ಕಾಗಿ ಸಣ್ಣ ನೀರಾವರಿ ಖಾತೆ ಬೇಕು ಎಂದು ಕೇಳಿದ್ದೆ. ನನ್ನ ಅವಧಿ ಪೂರ್ಣಗೊಗಳ್ಳುವವರೆಗೆ ಒಂದು ಖಾತೆಯಲ್ಲಿದ್ದರೆ ಹೆಚ್ಚು ಅನುಕೂಲ ಮಾಡಬಹುದು. ಏಕಾಏಕಿ ಖಾತೆ ಬದಲಾದರೆ ಬೇಸರ ಆಗೋದು ಸಹಜ. ಆದರೆ ನನಗೆ ಇದರಿಂದ ಹಿನ್ನಡೆಯಾಗಿಲ್ಲ, ವೈದ್ಯಕೀಯ ಶಿಕ್ಷಣ ಖಾತೆಯೂ ದೊಡ್ಡದೆ. ಕಾನೂನು ಖಾತೆಗೆ ಹೋಲಿಸಿದರೆ ವೈದ್ಯಕೀಯ ಶಿಕ್ಷಣ ಇಲಾಖೆ ನಾಲ್ಕು ಪಟ್ಟು ದೊಡ್ಡ ಖಾತೆ. ಅದರ ಬಗ್ಗೆ ನನಗೆ ಯಾವುದೇ ಬೇಸರ ಇಲ್ಲ ಎಂದು ಹೇಳಿದರು.

ಮುಖ್ಯಮಂತ್ರಿಗಳ ಬಳಿ ಇಂಧನ, ಬೆಂಗಳೂರು ನಗರಾಭಿವೃದ್ಧಿ ಖಾತೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಮಾಧುಸ್ವಾಮಿ, ಮುಖ್ಯಮಂತ್ರಿಗಳು ಯಾವ ಖಾತೆಗಳನ್ನಾದರೂ ಇಟ್ಟುಕೊಳ್ಳಬಹುದು. ಇನ್ನು ಒಂದಿಬ್ಬರು ಸಚಿವರಾಗಲಿದ್ದಾರೆ. ಹಾಗಾಗಿ ಕೆಲ ಖಾತೆಗಳನ್ನು ಮುಖ್ಯಮಂತ್ರಿಗಳೇ ಉಳಿಸಿಕೊಂಡಿದ್ದಾರೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News