‘ಪ್ರತೀಕಾರದ ಭಯವಿಲ್ಲದೆ ವಿಜ್ಞಾನದ ಬಗ್ಗೆ ಗಮನ ನೀಡಬಹುದಾಗಿದೆ’

Update: 2021-01-22 18:43 GMT

ವಾಶಿಂಗ್ಟನ್, ಜ. 22: ಡೊನಾಲ್ಡ್ ಟ್ರಂಪ್ ಅಧ್ಯಕ್ಷ ಹುದ್ದೆಯಿಂದ ನಿರ್ಗಮಿಸಿದ ಬಳಿಕ, ನಾನೀಗ ಪ್ರತೀಕಾರದ ಭಯವಿಲ್ಲದೆ ವಿಜ್ಞಾನದ ಬಗ್ಗೆ ಹೆಚ್ಚಿನ ಗಮನ ನೀಡಬಹುದಾಗಿದೆ ಎಂದು ಅಮೆರಿಕದ ವೈದ್ಯಕೀಯ ವಿಜ್ಞಾನಿ ಆ್ಯಂಟನಿ ಫೌಚಿ ಗುರುವಾರ ಹೇಳಿದ್ದಾರೆ.

ಅಮೆರಿಕದ ಅಧ್ಯಕ್ಷ ಜೋ ಬೈಡನ್‌ರ ಉನ್ನತ ಕೋವಿಡ್-19 ಸಲಹೆಗಾರರಾಗಿ ಅವರು ಮೊದಲ ಬಾರಿಗೆ ಶ್ವೇತಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.

ಹಿಂದಿನ ಮತ್ತು ಇಂದಿನ ಸರಕಾರದೊಂದಿಗಿನ ನಿಮ್ಮ ಅನುಭವವೇನು ಎಂಬ ಸುದ್ದಿಗಾರರ ಪ್ರಶ್ನೆಗೆ 80 ವರ್ಷದ ಸಾಂಕ್ರಾಮಿಕ ರೋಗಗಳ ತಜ್ಞ ಉತ್ತರಿಸುತ್ತಿದ್ದರು.

ಆರಂಭದಲ್ಲಿ ಈ ಪ್ರಶ್ನೆಗೆ ಉತ್ತರಿಸಲು ಅವರು ಹಿಂಜರಿದರು. ಆರಂಭಿಕ ಅನುಭವದ ಆಧಾರದಲ್ಲಿ ಈ ವಿಷಯದ ಬಗ್ಗೆ ಮಾತನಾಡಲು ಸಾಧ್ಯವಾಗದು ಎಂದರು.

‘‘ಆದರೆ, 15 ನಿಮಿಷಗಳ ಹಿಂದೆ ನಾನು ಅಧ್ಯಕ್ಷ ಜೋ ಬೈಡನ್ ಜೊತೆ ಮಾತನಾಡಿದ ಬಳಿಕ, ಒಂದು ವಿಷಯವಂತೂ ಸ್ಪಷ್ಟವಾಗಿ ನನ್ನ ಗಮನಕ್ಕೆ ಬಂತು. ಅದೆಂದರೆ, ನಾವು ಸಾಂಕ್ರಾಮಿಕದ ವಿಷಯದಲ್ಲಿ ಸಂಪೂರ್ಣವಾಗಿ ಪಾರದರ್ಶಕ, ಮುಕ್ತ ಮತ್ತು ಪ್ರಾಮಾಣಿಕವಾಗಿರುತ್ತೇವೆ’’ ಎಂದು ಫೌಚಿ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News