ಅನುಭವ ಮಂಟಪ ನೆನಪು ಮಾಡಿಕೊಂಡು ಮೋದಿ ಕೆಲಸ ಮಾಡುತ್ತಿದ್ದಾರೆ: ಸಿಎಂ ಯಡಿಯೂರಪ್ಪ

Update: 2021-01-23 18:08 GMT

ಮೈಸೂರು,ಜ.23: ಅಂದಿನ ಕಾಲದಲ್ಲಿ ಬಸವಣ್ಣ, ಅಕ್ಕಮಹಾದೇವಿ, ಅಲ್ಲಮ ಪ್ರಭು ಅವರು ಅನುಭವ ಮಂಟಪದಲ್ಲಿ ಏನು ಚರ್ಚೆ ಮಾಡಿದ್ದರೋ ಅದನ್ನು ನೆನಪು ಮಾಡಿಕೊಂಡು ಪ್ರಧಾನಿ ನರೇಂದ್ರ ಮೋದಿ ಸಮಾಜ ಸುಧಾರಣೆಗಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ನಗರದ ವಿಜಯನಗರ ಒಂದನೇ ಹಂತ ಹೆಬ್ಬಾಳದಲ್ಲಿ ನೂತನ ಬಸವ ಭವನ ಉದ್ಘಾಟನೆ ಮಾಡಿ ನಂತರ ಮಾತನಾಡಿದರು. ಅಲ್ಲಮಪ್ರಭು, ಅಕ್ಕಮಹಾದೇವಿ, ಬಸವಣ್ಣ, ಅವರ ಆಕಾಲದ ಚಿಂತನೆ ಚರ್ಚೆ ಮತ್ತು ಸಮಾಜ ಸುಧಾರಣೆಯ ಮಾತುಗಳನ್ನು ನಮ್ಮ ಪ್ರಧಾನಿ ನರೇಂದ್ರ ಮೋದಿ ಯಾವಗಲೂ ನೆನಪು ಮಾಡಿಕೊಂಡು ದೇಶದ ಜನರಿಗೆ ತಿಳಿಸುವ ಮೂಲಕ ಸಮ ಸಮಾಜದ ಸುಧಾರಣೆಗಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು. ಬಸವಣ್ಣ ಅವರ 12ನೇ ಶತಮಾನದ ಅನುಭವ ಮಂಟಪವನ್ನು ನೆನಪು ಮಾಡಿಕೊಂಡು ಲೋಕಸಭೆಯಲ್ಲೂ ಈ ವಿಚಾರವನ್ನು ಮೋದಿ ಪ್ರಸ್ತಾಪ ಮಾಡಿದ್ದಾರೆ ಎಂದರು.

ಆರ್ಥಿಕ, ಶೈಕ್ಷಣಿಕವಗಿ ಹಿಂದುಳಿದಿರುವ ಲಿಂಗಾಯತ ವೀರಶೈವರ ಅಭಿವೃದ್ಧಿಗಾಗಿ ಲಿಂಗಾಯತ ವೀರಶೈವ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿದ್ದು, ಇದಕ್ಕಾಗಿ 500 ಕೋಟಿ ರೂ. ಮೀಸಲಿಡಲಾಗಿದೆ. ಅಣ್ಣ ಬಸವಣ್ಣ ಅವರ ಹಾದಿಯಲ್ಲಿ ನಾವು ಸಹ ನಡೆಯುತ್ತಿರುವುದಾಗಿ ಹೇಳಿದರು.

ವರ್ಗ, ವರ್ಣ, ಜಾತಿ ಲಿಂಗಬೇದದ ತಾರತಮ್ಯವಿಲ್ಲದೆ ಸಮ ಸಮಾಜದ ಕನಸನ್ನು 12ನೆ ಶತಮಾನದಲ್ಲಿ ಬಿತ್ತಿದವರು ಬಸವಣ್ಣನವರು. ಸಮಾನತೆ, ಕಾಯಕ ದಾಸೋಹ ತತ್ವವನ್ನು ಭೋದಿಸಿದ ಮಹಾನ್ ಮಾನತವಾದಿ, ಅವರ ವಚನ, ಸಂದೇಶಗಳು ಸರ್ವಕಾಲಿಕ ಎಂದು ಹೇಳಿದರು.

ಬಸವ ಕಲ್ಯಾಣದಲ್ಲಿ ಭವ್ಯವಾದ ಭವನಕ್ಕೆ ಶಂಕು ಸ್ಥಾಪನೆ ಮಾಡಿದ್ದು, ಸುಮಾರು 500 ಕೊಟಿ ರೂ. ಮಂಜೂರು ಮಾಡಿ ಶಂಕುಸ್ಥಾಪನೆ ನೆರವೇರಿಸಲಾಗಿದೆ. ದೇಶದ ಗಮನ ಸೆಳೆಯುವ ರೀತಿ ಕಟ್ಟಡವನ್ನು ಕಟ್ಟುತ್ತಿದ್ದೇವೆ. ಅನುಭವ ಮಂಟಪದ ಹಿನ್ನೆಲೆಯಲ್ಲಿ ಈ ಭವನ ಕಟ್ಟುತ್ತಿದ್ದು, ಇನ್ನೆರಡು ವರ್ಷಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.

ಅಲ್ಲಮಪ್ರಭು, ಅಕ್ಕಮಹಾದೇವಿ ಅವರಿಗೆ ಜನ್ಮ ಕೊಟ್ಟ ನಾಡು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ. ಅಕ್ಕಮಹಾದೇವಿ ಹುಟ್ಟಿದ ಸ್ಥಳವನ್ನು ಅಭಿವೃದ್ಧಿಪಡಿಸಲು ಮುಂದಾಗಿದ್ದು, ಈಗಾಗಲೇ ಹತ್ತಾರು ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸುತ್ತಿದ್ದೇವೆ. ಕರ್ನಾಟಕ ರಾಜ್ಯ ಅನೇಕ ಶರಣ ಶರಣೆಯರಿಗೆ ಜನ್ಮ ಕೊಟ್ಟ ಪುಣ್ಯಭೂಮಿ, ಕರ್ಮಭೂಮಿ, ಧರ್ಮಭೂಮಿ. ಎಲ್ಲಿ ನೋಡಿದರೂ ಅವರ ವಿಚಾರಗಳು ಒಂದಲ್ಲ ಒಂದು ರೀತಿ ಸರ್ವೆಸಾಮಾನ್ಯವಾಗಿದೆ. ಹಾಗಾಗಿ 12ನೇ ಶತಮಾನದ ಅನುಭವ ಮಂಟಪದಲ್ಲಿ ಯಾರು ಇದ್ದರೊ ಅವರ ನೆನಪಿಗಾಗಿ ಮತ್ತು ಮುಂದಿನ ಪೀಳಿಗೆಯ ನೆನಪಿಗಾಗಿ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ಹೇಳಿದರು.

ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ವಚನಗಳ ಮೂಲಕ ಬಸವಾದಿ ಶರಣರು ಅಪೂರ್ವ ಕೊಡುಗೆಗಳನ್ನು ನೀಡಿದ್ದಾರೆ. ಅಂದಿನ ಕಾಲಕ್ಕೆ ಪ್ರಜಾಪ್ರಭುತ್ವದ ಸಮಾಜದಲ್ಲಿ ಸ್ತ್ರೀ ಸಮಾನತೆ, ಮಹಿಳಾ ಶಿಕ್ಷಣ ಮತ್ತು ಮಹಿಳಾ ಸಬಲೀಕರಣಕ್ಕೆ ಆದ್ಯತೆ ಕೊಟ್ಟವರು ಬಸವಣ್ಣ ಎಂದರು. ಜಗತ್ತಿನ ಮೊದಲ ಸಂಸತ್ ಎಂದೆ ಪರಿಗಣಿಸಲಾದ ಅನುಭವ ಮಂಟಪ ಎಲ್ಲ ವರ್ಗಗಳಿಗೆ ಪ್ರಾತಿನಿಧ್ಯ ಹೊಂದಿದ್ದು, ಆ ಮೂಲಕ ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ನೀಡಿದರು ಎಂದರು.

ಕಾರ್ಯಕ್ರಮದಲ್ಲಿ ಸಂಸದ ಪ್ರತಾಪ್ ಸಿಂಹ, ಶಾಸಕರಾದ ತನ್ವೀರ್ ಸೇಠ್, ಎಲ್.ನಾಗೇಂದ್ರ, ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್, ಬಸವರಾಜು ಹಿನಕಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News