ಮಂಗಳೂರಿನಲ್ಲಿ ಪ್ಲಾಸ್ಟಿಕ್ ಪಾರ್ಕ್ ಸ್ಥಾಪನೆಗೆ ಕೇಂದ್ರ ಸರಕಾರ ತಾತ್ವಿಕ ಒಪ್ಪಿಗೆ

Update: 2021-01-23 14:39 GMT

ಬೆಂಗಳೂರು, ಜ.23: ಕರ್ನಾಟಕದ ಕರಾವಳಿ ನಗರ ಮಂಗಳೂರಿನಲ್ಲಿ ಪ್ಲಾಸ್ಟಿಕ್ ಪಾರ್ಕ್ ಸ್ಥಾಪನೆಗೆ ಕೇಂದ್ರ ಸರಕಾರ ತಾತ್ವಿಕ ಒಪ್ಪಿಗೆ ನೀಡಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದ ಗೌಡ ತಿಳಿಸಿದ್ದಾರೆ.

ಈ ಕುರಿತು ತಮ್ಮ ಸಚಿವಾಲಯ ರಾಜ್ಯ ಸರಕಾರಕ್ಕೆ ಬರೆದಿರುವ ಪತ್ರವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿರುವ ಸದಾನಂದಗೌಡ, ‘ಕರ್ನಾಟಕದ ಜನತೆಗೆ ಸಿಹಿ ಸುದ್ದಿಯೊಂದಿದೆ. ನಮ್ಮ ರಾಸಾಯನಿಕ ಇಲಾಖೆ ವತಿಯಿಂದ ದೇಶದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿರುವ ಎರಡು ಪ್ಲಾಸ್ಟಿಕ್ ಪಾರ್ಕ್ ಗಳ ಪೈಕಿ ಒಂದನ್ನು ಮಂಗಳೂರಿಗೆ ಮಂಜೂರು ಮಾಡಲಾಗಿದೆ’ ಎಂದು ತಿಳಿಸಿದ್ದಾರೆ.

ಆದಷ್ಟು ಬೇಗ ವಿಸ್ತೃತ ಯೋಜನಾ ವರದಿ ತಯಾರಿಸುವಂತೆ ರಾಜ್ಯ ಸರಕಾರಕ್ಕೆ ತಿಳಿಸಲಾಗಿದೆ. ಆರು ತಿಂಗಳ ಒಳಗೆ ಅಂತಿಮ ಒಪ್ಪಿಗೆ ನೀಡಿ ಯೋಜನೆಯ ಆರಂಭಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಸದಾನಂದಗೌಡ ಹೇಳಿದ್ದಾರೆ.

ರಾಜ್ಯದ ವಾಣಿಜ್ಯ ಇಲಾಖೆ ಕಾರ್ಯದರ್ಶಿಗೆ ಪತ್ರ ಬರೆದಿರುವ ಕೇಂದ್ರ ಸರಕಾರದ ಅಧೀನ ಕಾರ್ಯದರ್ಶಿ, 2021ರ ಜನವರಿ 20 ರಂದು ನಡೆದ ಯೋಜನಾ ಚಾಲನಾ ಸಮಿತಿ ಸಭೆಯಲ್ಲಿ ಮಂಗಳೂರಿನ ಗಂಜಿಮಠದಲ್ಲಿ ಪ್ಲಾಸ್ಟಿಕ್ ಪಾರ್ಕ್ ಸ್ಥಾಪಿಸಲು ಕರ್ನಾಟಕ ಸರಕಾರ ಸಲ್ಲಿಸಿದ್ದ ಪ್ರಸ್ತಾವನೆಗೆ ತಾತ್ವಿಕ ಒಪ್ಪಿಗೆ ನಿಡಲಾಗಿದೆ ಎಂದು ತಿಳಿಸಿದ್ದಾರೆ.

ಮೇಕ್ ಇನ್ ಇಂಡಿಯಾ ಯೋಜನೆಯಲ್ಲಿ ಪ್ಲಾಸ್ಟಿಕ್ ಪಾರ್ಕ್‍ಗಳು ಬಹಳ ಪ್ರಮುಖವಾಗಿವೆ. ಈಗಾಗಲೇ ಯೋಜನೆಯ ಮಾರ್ಗಸೂಚಿಗಳಲ್ಲಿ ತಿಳಿಸಿರುವಂತೆ ತಾತ್ವಿಕ ಒಪ್ಪಿಗೆಯು ಆರು ತಿಂಗಳವರೆಗೆ ಮಾನ್ಯತೆಯಲ್ಲಿರುತ್ತದೆ. ಆದುದರಿಂದ, ಯೋಜನೆಗೆ ಅಂತಿಮ ಒಪ್ಪಿಗೆ ಪಡೆಯಲು ವಿಸ್ತೃತ ಯೋಜನಾ ವರದಿಯನ್ನು ಆದಷ್ಟು ಬೇಗ ಇಲಾಖೆಗೆ ಸಲ್ಲಿಸಬೇಕು ಎಂದು ಪತ್ರದಲ್ಲಿ ಸೂಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News