ಕುತೂಹಲ ಸೃಷ್ಟಿಸಿದ ಸಚಿವ ಜಾರಕಿಹೊಳಿ ನೇತೃತ್ವದಲ್ಲಿ ಯೋಗೇಶ್ವರ್ ಸೇರಿ ಶಾಸಕರು, ಸಚಿವರ ಸಭೆ

Update: 2021-01-23 15:00 GMT

ಚಿಕ್ಕಮಗಳೂರು, ಜ.23: ಸಿಎಂ ಯಡಿಯೂರಪ್ಪ ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಮಾಡಿದ ಬಳಿಕ ಖಾತೆ ಹಂಚಿಕೆ ವಿಚಾರದಲ್ಲಿ ಕೆಲವರು ಅಸಮಾಧಾನ ವ್ಯಕ್ತಪಡಿಸಿರುವುದು ಇತ್ತೀಚೆಗೆ ನಡೆದಿತ್ತು. ಅಸಮಾಧಾನಗೊಂಡ ಶಾಸಕರು ಸಿಎಂ ವಿರುದ್ಧ ಹೈಕಮಾಂಡ್ ಬಳಿ ದೂರು ಕೊಂಡೊಯ್ದ ಘಟನೆಯೂ ನಡೆದಿತ್ತು. ಈ ರಾಜಕೀಯ ಬೆಳವಣಿಗೆಗಳ ಮಧ್ಯೆಯೇ ಪ್ರಭಾವಿ ಸಚಿವ, ರಾಜ್ಯದಲ್ಲಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬರಲು ಕಾರಣಕರ್ತರಾಗಿದ್ದ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಕೆಲ ಶಾಸಕರು ಜಿಲ್ಲೆಯ ಖಾಸಗಿ ಹೊಟೇಲೊಂದರಲ್ಲಿ ಸಭೆ ನಡೆಸಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.

ಸಣ್ಣ ನೀರಾವರಿ ಇಲಾಖೆಯ ಸಚಿವ ರಮೇಶ್ ಜಾರಕಿಹೊಳಿ ಅವರು ಶನಿವಾರ ಚಿಕ್ಕಮಗಳೂರು ಜಿಲ್ಲಾ ಪ್ರವಾಸಕ್ಕೆ ಆಗಮಿಸಿದ್ದರು. ಯಾವುದೇ ಸರಕಾರಿ ಕಾರ್ಯಕ್ರಮ ಇಲ್ಲದಿದ್ದರೂ ಅವರು ಜಿಲ್ಲಾ ಪ್ರವಾಸ ಕೈಗೊಂಡಿರುವುದು ಸಾರ್ವಜನಿಕರಲ್ಲಿ ತೀವ್ರ ಕುತೂಹಲ ಮೂಡಿಸಿತ್ತು. ಶುಕ್ರವಾರ ರಾತ್ರಿ ಚಿಕ್ಕಮಗಳೂರು ನಗರ ಸಮೀಪದಲ್ಲಿರುವ ಹೊಟೇಲ್‍ಗೆ ಆಗಮಿಸಿದ್ದ ಅವರು ರಾತ್ರಿ ಅಲ್ಲೇ ತಂಗಿದ್ದರು. ಇವರೊಂದಿಗೆ ನೂತನ ಸಚಿವರಾದ ಸಿ.ಪಿ.ಯೋಗಿಶ್ವರ್, ಗೋಪಾಲಯ್ಯ ಕೂಡ ಆಗಮಿಸಿದ್ದರು. ಶನಿವಾರ ಬೆಳಗ್ಗೆ ಸಚಿವ ರಮೇಶ್ ಜಾರಕಿಹೊಳಿ, ಯೋಗೇಶ್ವರ್, ಗೋಪಾಲಯ್ಯ ಅವರನ್ನು ಶಾಸಕ ನಂದೀಶ್ ರೆಡ್ಡಿ ಹಾಗೂ ಜಿಲ್ಲೆಯ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಭೇಟಿಯಾಗಿದ್ದು, ಹೊಟೇಲ್‍ನಲ್ಲಿ ಸಭೆ ನಡೆಸಿದ್ದಾರೆಂದು ಹೇಳಲಾಗುತ್ತಿದೆ.

ಈ ಸಚಿವರು ಹಾಗೂ ಶಾಸಕರು ಯಾವ ವಿಷಯದ ಕುರಿತು ಸಭೆ ನಡೆಸಿದ್ದಾರೆಂದು ತಿಳಿದುಬಂದಿಲ್ಲ. ಬಿಜೆಪಿ ಸರಕಾರ ರಚನೆಯಲ್ಲಿ ಬಹುಮುಖ್ಯ ಪಾತ್ರ ನಿರ್ವಹಿಸಿದ್ದ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಸಚಿವ ಸಿ.ಪಿ.ಯೋಗೇಶ್ವರ್ ಸಭೆಯಲ್ಲಿ ಭಾಗವಹಿಸಿದ್ದು, ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಸಚಿವರು ಖಾಸಗಿ ಹೋಟೆಲ್‍ನಲ್ಲಿ ಗೌಪ್ಯ ಸಭೆ ನಡೆಸುತ್ತಿದ್ದಾರೆಂಬ ಸುದ್ದಿ ಮಾದ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ ಸಿ.ಪಿ.ಯೋಗಿಶ್ವರ್ ಮತ್ತು ರಮೇಶ್ ಜಾರಕಿಹೊಳಿ ಅಲ್ಲಿಂದ ತೆರಳಿದ್ದಾರೆ.

ಖಾಸಗಿ ಹೋಟೆಲ್‍ನಿಂದ ಹೊರಬಂದ ನಂತರ ಸಚಿವ ರಮೇಶ್ ಜಾರಕಿಹೊಳಿ ಸುದ್ದಿಗಾರರೊಂದಿಗೆ ಮಾತನಾಡಿ, ಯಾವುದೇ ರಾಜಕೀಯ ಸಭೆ ಮಾಡಿಲ್ಲ, ಎತ್ತಿನಹೊಳೆ ನೀರಾವರಿ ಯೋಜನೆ ಸಂಬಂಧ ಚರ್ಚಿಸಲು ಸಭೆ ನಡೆಸಿದ್ದೇವೆ. ಸ್ಥಳೀಯ ಮಟ್ಟದ ಅಧಿಕಾರಿಗಳಿಗೆ ಮಾಹಿತಿ ಕೊಟ್ಟಿರಲಿಲ್ಲ. ನನ್ನ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇನೆ. ಮಾಧ್ಯಮದವರು ಈ ಬಗ್ಗೆ ವಿನಾಕಾರಣ ಗೊಂದಲ ಸೃಷ್ಟಿಸಬೇಡಿ ಎಂದು ಹೇಳಿದ್ದಾರೆ.

ಮೂಡಿಗೆರೆ ಕ್ಷೇತ್ರ ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ಜಾರಕಿಹೊಳಿ ಅವರ ಜೊತೆ ಯಾವುದೇ ರಾಜಕೀಯ ಸಭೆ ನಡೆಸಿಲ್ಲ. ನನಗೆ ಸಚಿವ ಸ್ಥಾನ ಸಿಗದಿರುವುದಕ್ಕೆ ಬೇಸರವಿಲ್ಲ. ಅದಕ್ಕೂ ಈ ಭೇಟಿಗೂ ಸಂಬಂಧವಿಲ್ಲ. ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಭೇಟಿ ಮಾಡಿ ಮಾತನಾಡಿದ್ದೇನೆ ಎಂದು ಪ್ರತಿಕ್ರಿಯಿಸಿದರು.

ಸಚಿವ ಜಾರಕಿಹೊಳಿ ಅವರನ್ನು ಶನಿವಾರ ಜಿಲ್ಲೆಯ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಅವರು ಭೇಟಿಯಾಗಿದ್ದರು. ಈ ವೇಳೆ ಸಚಿವರಿಗೆ ಮನವಿಯೊಂದನ್ನು ಸಲ್ಲಿಸಿದ ಅವರು ಕೆಲ ಹೊತ್ತು ಸಚಿವರೊಂದಿಗೆ ಮಾತುಕತೆ ನಡೆಸಿದರು. ಈ ಭೇಟಿಯಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ, ಕ್ಷೇತ್ರದ ನೀರಾವರಿಗೆ ಸಂಬಂಧಿಸಿದಂತೆ ಅನುದಾನ ಕೋರಿ ಮನವಿ ಸಲ್ಲಿಸಲು ಆಗಮಿಸಿದ್ದೆ ಎಂದು ಈ ವೇಳೆ ಶಾಸಕ ರಾಜೇಗೌಡ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News