ಪ್ರಶ್ನೆ ಪತ್ರಿಕೆ ಸೋರಿಕೆ: ನಾಳೆ ನಿಗದಿಯಾಗಿದ್ದ 'ಎಫ್ ಡಿಎ' ಪರೀಕ್ಷೆ ದಿಢೀರ್ ಮುಂದೂಡಿಕೆ

Update: 2021-01-23 17:10 GMT

ಬೆಂಗಳೂರು, ಜ.23: ರಾಜ್ಯದಲ್ಲಿ ನೇಮಕಾತಿ ಸಂಬಂಧ ಪ್ರಶ್ನೆಪತ್ರಿಕೆ ಸೋರಿಕೆ ಜಾಲ ಮತ್ತೆ ತಲೆ ಎತ್ತಿದ್ದು, ನಾಳೆ (ಜ.24) ನಡೆಯಬೇಕಿದ್ದ ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಪರೀಕ್ಷೆಯನ್ನು ಕರ್ನಾಟಕ ಲೋಕಸೇವಾ ಆಯೋಗ ಮುಂದೂಡಿ ಆದೇಶ ಹೊರಡಿಸಿದೆ. 

ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 2019ನೇ ಸಾಲಿನ ಪ್ರಥಮ ದರ್ಜೆ ಸಹಾಯಕರ ಹುದ್ದೆಗಳ ನೇಮಕಾತಿಗೆ ಸಂಬಂಧ ರವಿವಾರ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯನ್ನು ನಡೆಸಲಾಗಿತ್ತು. ಎರಡು ಅವಧಿಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲು ದಿನಾಂಕವೂ ನಿಗದಿಪಡಿಸಲಾಗಿತ್ತು. ಆದರೆ, ಕೆಲ ದುಷ್ಕರ್ಮಿಗಳು ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆ ಎಫ್‌ಡಿಎ ಪರೀಕ್ಷೆಯನ್ನು ಮುಂದೂಡಲಾಗಿದೆ.

ಸಿಕ್ಕಿಬಿದ್ದ ಸೋರಿಕೆದಾರರು: ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾದ ಸಂಬಂಧ ಸಿಸಿಬಿ ಪೊಲೀಸರು ಕಾರ್ಯಚರಣೆ ನಡೆಸಿ ಚಂದ್ರು, ರಾಚಪ್ಪ ಎಂಬ ಆರೋಪಿಗಳು ಸೇರಿ ನಾಲ್ವರನ್ನು ಬಂಧಿಸಿ, 24 ಲಕ್ಷ ರೂ. ನಗದು ಜಪ್ತಿ ಮಾಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಸಿಸಿಬಿಯ ಜಂಟಿ ಆಯುಕ್ತ ಸಂದೀಪ್ ಪಾಟೀಲ್, ಕರ್ನಾಟಕ ಲೋಕಸೇವಾ ಆಯೋಗದಿಂದ (ಕೆಪಿಎಸ್‌ಸಿ) ನಡೆಯಬೇಕಿದ್ದ ಎಫ್‌ಡಿಎ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾದ ಬಗ್ಗೆ ಮಾಹಿತಿ ಬಂದಿತ್ತು. ವಿಶೇಷ ತಂಡವೊಂದನ್ನು ರಚಿಸಿ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹೇಳಿದರು.

ಪ್ರಶ್ನೆಪತ್ರಿಕೆ ಹಂಚಲು ಬಳಕೆ ಮಾಡುತ್ತಿದ್ದ ಮೂರು ವಾಹನಗಳನ್ನೂ ಜಪ್ತಿ ಮಾಡಲಾಗಿದೆ. ಸೋರಿಕೆ ಸಂಗತಿಯನ್ನು ಕೆಪಿಎಸ್‌ಸಿ ಅಧಿಕಾರಿಗಳಿಗೂ ತಿಳಿಸಲಾಗಿದೆ. ಆರೋಪಿಗಳನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುವುದು. ಸೋರಿಕೆ ಎಲ್ಲಿಂದ ಆಯಿತು ಎಂಬುದು ಇನ್ನಷ್ಟೇ ತಿಳಿಯಬೇಕಿದೆ ಎಂದರು.

2019ನೇ ಸಾಲಿನ ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಹುದ್ದೆಗಳ ನೇಮಕಾತಿಗಾಗಿ ಜ. 24 ಹಾಗೂ ಜ. 25ರಂದು ಪರೀಕ್ಷೆ ನಡೆಯಬೇಕಿತ್ತು. ಆದರೆ, ಪರೀಕ್ಷೆಯ ಪ್ರಶ್ನೆಪತ್ರಿಕೆಗಳು ದುಷ್ಕರ್ಮಿಗಳ ಕೈಗೆ ಸಿಕ್ಕಿರುವುದು ಮೂಲಗಳಿಂದ ಗೊತ್ತಾಗಿದೆ. ಅದೇ ಕಾರಣಕ್ಕೆ ಪರೀಕ್ಷೆಯನ್ನು ಮುಂದೂಡಲಾಗಿದೆ.

- ಜಿ. ಸತ್ಯವತಿ, ಕಾರ್ಯದರ್ಶಿ, ಕರ್ನಾಟಕ ಲೋಕಸೇವಾ ಆಯೋಗ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News