ಜೊತೆಗಿದ್ದವರು ಬಿಟ್ಟುಹೋಗಿ ಸಚಿವರಾದರು, ನಾನು ಗಟ್ಟಿಧ್ವನಿಯಲ್ಲಿ ಮಾತನಾಡಿ ಒಂಟಿಯಾದೆ: ಎಚ್.ವಿಶ್ವನಾಥ್

Update: 2021-01-23 16:56 GMT

ಚಿತ್ರದುರ್ಗ, ಜ.23: ಜೊತೆಗಿದ್ದ ಸ್ನೇಹಿತರೆಲ್ಲರೂ ಬಿಟ್ಟು ಹೋಗಿ ಸಚಿವರಾದರು. ಗಟ್ಟಿ ಧ್ವನಿಯಲ್ಲಿ ಮಾತನಾಡಿ ಒಬ್ಬಂಟಿಯಾದೆ. ಆದರೆ, ರಾಜ್ಯದ ಜನರು ನನ್ನ ಜೊತೆಗಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಬೇಸರ ಹೊರ ಹಾಕಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮುಂಬೈಗೆ ತೆರಳಿದ್ದ 17 ಜನರ ತಂಡವನ್ನು ನಾನು ಮುನ್ನಡೆಸಿದ್ದೆ. ಮಂತ್ರಿಯಾಗಬೇಕು ಎಂಬ ಉದ್ದೇಶದಿಂದ ಬಿಜೆಪಿಗೆ ಬಂದಿಲ್ಲ. ಸಚಿವ ಸ್ಥಾನವನ್ನು ಮತ್ತೆ ಕೇಳುವುದಿಲ್ಲ. ರಾಜ್ಯದಲ್ಲಿ ಗಟ್ಟಿ ಧ್ವನಿ ಕೇಳಿಸುತ್ತದೆ ಹೊರತು ಹೇಡಿ ಧ್ವನಿಯಲ್ಲ’ ಎಂದು ಮಾರ್ಮಿಕವಾಗಿ ನುಡಿದರು.

‘ಖಾತೆ ಹಂಚಿಕೆಗೆ ಸಂಬಂಧಿಸಿದಂತೆ ಅಸಮಾಧಾನ ಮೂಡಿದೆ. ಕೋವಿಡ್‌ಗೆ ಲಸಿಕೆ ನೀಡುವ ಸಂದರ್ಭದಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಖಾತೆ ಡಾ.ಸುಧಾಕರ್ ಅವರ ಕೈಯಲ್ಲಿದ್ದರೆ ಅನುಕೂಲವಾಗುತ್ತಿತ್ತು. ಪರಿಸರ ಮತ್ತು ಅರಣ್ಯ ಖಾತೆಯನ್ನು ಬೇರ್ಪಡಿಸಿರುವುದು ಕೂಡ ಅಸಮಂಜಸವಾಗಿದೆ’ ಎಂದು ಹೇಳಿದರು.

‘ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಲ್ಲಿ ರಾಜಕೀಯ ಗೋಷ್ಠಿಗೆ ಅವಕಾಶ ಕಲ್ಪಿಸಬೇಕು. ಶಿಷ್ಟ ಸಾಹಿತ್ಯ, ಬಂಡಾಯ ಸಾಹಿತ್ಯದಂತೆ ರಾಜಕೀಯ ಸಾಹಿತ್ಯದ ಬಗ್ಗೆಯೂ ಚರ್ಚೆಯಾಗುವ ಅಗತ್ಯವಿದೆ. ಈ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ ಪರಿಷತ್ ಅಧ್ಯಕ್ಷ ಮನು ಬಳಿಗಾರ ಹಾಗೂ ಸಮ್ಮೇಳನಾಧ್ಯಕ್ಷ ದೊಡ್ಡರಂಗೇಗೌಡ ಅವರ ಗಮನ ಸೆಳೆಯಲಾಗುವುದು’ ಎಂದರು.

ಜನರು ನನ್ನ ಪರವಾಗಿದ್ದಾರೆ, ಉಘೇ ಉಘೇ ಅನ್ನುತ್ತಿದ್ದಾರೆ. ನನ್ನ ಸ್ನೇಹಿತರು ನನ್ನನ್ನು ಒಂಟಿ ಮಾಡಿ ಹೋದರು. ನಾನು ಒಂಟಿಯಲ್ಲ, ರಾಜ್ಯದ ಜನರು ನನ್ನ ಜೊತೆ ಇದ್ದಾರೆ. ನಾನು ತೆಗೆದುಕೊಂಡ ತೀರ್ಮಾನಕ್ಕೆ ಜನರು ಜೈ ಎಂದರು ಎಂದು ವಿಶ್ವನಾಥ್ ತಿಳಿಸಿದರು.

ನಮ್ಮ ಸ್ನೇಹಿತರನ್ನು ಬಿಡಿ, ಯಾರೂ ಮಂತ್ರಿಯಾಗ್ತಾರೋ ಅವರು ಅಷ್ಟಕ್ಕೆ ಸಿಮೀತ. ನಾನು ಉದ್ದಕ್ಕೂ ವಾಸ್ತವ ಸ್ಥಿತಿಯನ್ನು ಹೇಳುತ್ತಾ ಬಂದಿದ್ದೇನೆ. ನನಗೆ ಮಂತ್ರಿಸ್ಥಾನ ಸಿಗುತ್ತೋ ಬಿಡುತ್ತೋ ಗೊತ್ತಿಲ್ಲ. ರಾಜ್ಯ ರಾಜಕಾರಣದಲ್ಲಿ ಸಾರ್ವಜನಿಕ ಜೀವನದಲ್ಲಿ ಒಬ್ಬ ಸಾಕ್ಷಿ ಪ್ರಜ್ಞೆಯಾಗಿ ಉಳಿಯುತ್ತೇನೆ ಎಂದರು.

ಖಾತೆ ಹಂಚಿಕೆಯಲ್ಲೂ ಅಸಮಾಧಾನ ಮಾಡಿಕೊಂಡಿದ್ದಾರೆ. ಎಲ್ಲ ಖಾತೆಯಲ್ಲೂ ಕೆಲಸವಿದೆ ಮಾಡಬೇಕು ಅಷ್ಟೆ. 17 ಜನರ ಟೀಂ ಮುನ್ನಡೆಸಿದ್ದೂ ನಾನೇ. ನಾನು ಅದೇ ಟೀಂ. ಚಿಕ್ಕಮಗಳೂರಿನಲ್ಲಿ ನನ್ನ ಬಿಟ್ಟು ಉಳಿದ ಸ್ನೇಹಿತರು ಸೇರಿದ್ದಾರೆ. ಪಾಪ ಪವರ್ ಪಾಲಿಟಿಕ್ಸ್ ನನ್ನ ಜೊತೆ ಮಾತನಾಡಿದರೆ ಯಡಿಯೂರಪ್ಪ ಏನಾದರೂ ತಿಳಿದುಕೊಂಡರೆ ? ಜನತಂತ್ರ ವ್ಯವಸ್ಥೆಯಲ್ಲಿ ರಾಜಕೀಯ ಜೀವನದಲ್ಲಿ ಗಟ್ಟಿ ಧ್ವನಿ ಏಕಾಂಗಿಯಾಗುತ್ತದೆ. ಆದರೆ, ಆ ಗಟ್ಟಿಧ್ವನಿ ಇಡೀ ರಾಜ್ಯದಲ್ಲಿ ಪ್ರತಿಧ್ಚನಿಸುತ್ತದೆ. ಹೇಡಿಗಳ ಧ್ವನಿಯ ರೀತಿಯಲ್ಲ ಗಟ್ಟಿಧ್ಚನಿ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News