ಬ್ರೆಝಿಲ್‌ಗೆ ಭಾರತದಿಂದ 20 ಲಕ್ಷ ಡೋಸ್ ಕೊರೋನ ಲಸಿಕೆ

Update: 2021-01-23 16:59 GMT

ಬ್ರೆಸೀಲಿಯ (ಬ್ರೆಝಿಲ್), ಜ. 23: ಭಾರತ ಕಳುಹಿಸಿರುವ 20 ಲಕ್ಷ ಡೋಸ್ ಕೊರೋನ ವೈರಸ್ ಲಸಿಕೆ ಶನಿವಾರ ಬ್ರೆಝಿಲ್ ತಲುಪಿದೆ. ಲಸಿಕೆಯನ್ನು ಕಳುಹಿಸಿರುವುದಕ್ಕಾಗಿ ಭಾರತಕ್ಕೆ ಕೃತಜ್ಞತೆ ವ್ಯಕ್ತಪಡಿಸಿರುವ ಬ್ರೆಝಿಲ್ ಅಧ್ಯಕ್ಷ ಜೈರ್ ಎಂ. ಬೊಲ್ಸೊನಾರೊ, ಈ ವಿದ್ಯಮಾನವನ್ನು, ರಾಮಾಯಣದಲ್ಲಿ ಲಕ್ಷ್ಮಣನನ್ನು ಬದುಕಿಸುವುದಕ್ಕಾಗಿ ಹನುಮಂತ ಸಂಜೀವಿನಿ ಪರ್ವತವನ್ನು ಹೊತ್ತು ಲಂಕೆಗೆ ಹಾರಿದ ಘಟನೆಗೆ ಹೋಲಿಸಿದ್ದಾರೆ.

ಜಾಗತಿಕ ಸಾಂಕ್ರಾಮಿಕದ ವಿರುದ್ಧ ಹೋರಾಡುವುದಕ್ಕಾಗಿ ಭಾರತದಂಥ ಶ್ರೇಷ್ಠ ಭಾಗೀದಾರನ ಜೊತೆ ಕೈಜೋಡಿಸಿರುವುದಕ್ಕಾಗಿ ಬ್ರೆಝಿಲ್ ಹೆಮ್ಮೆಪಡುತ್ತದೆ ಎಂದು ಬೊಲ್ಸೊನಾರೊ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ, ಆರೋಗ್ಯ ರಕ್ಷಣೆ ಕ್ಷೇತ್ರದಲ್ಲಿನ ಸಹಕಾರವನ್ನು ಬಲಗೊಳಿಸುವುದನ್ನು ಭಾರತ ಮುಂದುವರಿಸುತ್ತದೆ ಎಂದು ಹೇಳಿದರು.

ಜಾಗತಿಕ ಮಟ್ಟದಲ್ಲಿ ಕೊರೋನ ವೈರಸ್‌ನಿಂದ ಅತ್ಯಂತ ಹಾನಿಗೊಳಗಾದ ದೇಶಗಳ ಪಟ್ಟಿಯಲ್ಲಿ ಅಮೆರಿಕದ ಬಳಿಕ ಬ್ರೆಝಿಲ್ ಎರಡನೇ ಸ್ಥಾನದಲ್ಲಿದೆ. ಅಲ್ಲಿ ಪ್ರತಿದಿನ 1,000ಕ್ಕೂ ಅಧಿಕ ಸಾವು ಸಂಭವಿಸುತ್ತಿದ್ದು, ಈವರೆಗೆ 2,14,000ಕ್ಕೂ ಅಧಿಕ ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

ಭಾರತವು ಶುಕ್ರವಾರ ಕೋವಿಶೀಲ್ಡ್ ಲಸಿಕೆಯ 20 ಲಕ್ಷ ಡೋಸ್‌ಗಳನ್ನು ಬ್ರೆಝಿಲ್‌ಗೆ ಕಳುಹಿಸಿದೆ. ಕೋವಿಶೀಲ್ಡ್ ಲಸಿಕೆಯನ್ನು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯ ಮತ್ತು ಆ್ಯಸ್ಟ್ರಝೆನೆಕ ಔಷಧ ತಯಾರಿಕಾ ಕಂಪೆನಿಯ ಜಂಟಿಯಾಗಿ ಅಭಿವೃದ್ಧಿಪಡಿಸಿವೆ. ಈ ಲಸಿಕೆಯನ್ನು ಭಾರತದಲ್ಲಿ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News