ನಿರ್ಲಕ್ಷ್ಯ ವಹಿಸಿದರೆ ಶಿವಮೊಗ್ಗದ ಅನಾಹುತ ಮಂಡ್ಯದಲ್ಲೂ ಸಂಭವಿಸಬಹುದು: ಸಂಸದೆ ಸುಮಲತಾ ಎಚ್ಚರಿಕೆ

Update: 2021-01-23 17:52 GMT

ಮಂಡ್ಯ, ಜ.23: ಸರಕಾರ ಮತ್ತು ಜಿಲ್ಲಾಡಳಿತ ನಿರ್ಲಕ್ಷ್ಯ ತೋರಿದರೆ ಶಿವಮೊಗ್ಗದ ಜಿಲೆಟಿನ್ ಸ್ಫೋಟ ಮಾದರಿಯಲ್ಲಿ, ಮಂಡ್ಯ ಜಿಲ್ಲೆಯಲ್ಲೂ ಭವಿಷ್ಯದಲ್ಲಿ ಅನಾಹುತ ಸಂಭವಿಸಬಹುದು ಎಂದು ಸಂಸದೆ ಸುಮಲತಾ ಆತಂಕ ವ್ಯಕ್ತಪಡಿಸಿದ್ದು, ಕೂಡಲೇ ಜಿಲ್ಲೆಯಲ್ಲಿ ಅಕ್ರಮ ಕಲ್ಲುಗಣಿಗಾರಿಕೆ ವಿರುದ್ಧ ಕ್ರಮ ಜರುಗಿಸಲು ಒತ್ತಾಯಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಮಂಡ್ಯ ಜಿಲ್ಲೆಯಲ್ಲಿ ತಲೆಯೆತ್ತಿ ನಿಂತಿರುವ ಕಾನೂನುಬಾಹಿರ ಗಣಿಗಾರಿಕೆಯ ವಿರುದ್ಧ ನಾನು ಸತತ ಧ್ವನಿ ಎತ್ತುತ್ತಿರುವುದು ಇದೇ ಕಾಳಜಿಯಿಂದ. ಈ ಘಟನೆ ಮಂಡ್ಯದಲ್ಲಿ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವ ಎಲ್ಲರಿಗೂ ಎಚ್ಚರಿಕೆಯ ಘಂಟೆಯಾಗಬೇಕು ಎಂದಿದ್ದಾರೆ.

ಅಕ್ರಮ ಗಣಿಗಾರಿಕೆಯ ಹಿಂದೆ ಬಹಳ ಸಲ ಸ್ಥಳೀಯ ರಾಜಕಾರಣಿಗಳು ಹಾಗೂ ಕೆಲ ಭ್ರಷ್ಟ ಅಧಿಕಾರಿಗಳ ಸಹಕಾರವಿರುತ್ತದೆ. ಸರಕಾರ ಈ ಕೂಡಲೇ ಎಲ್ಲಾ ಜಿಲ್ಲಾಡಳಿತದ ಅಧಿಕಾರಿಗಳಿಗೆ ಅಕ್ರಮ ಗಣಿಗಾರಿಕೆಯ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಸೂಚಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

ಶಿವಮೊಗ್ಗದಲ್ಲಿ ನಡೆದ ಘಟನೆ ತಿಳಿದು ತೀವ್ರ ನೋವಾಯಿತು. ನಮ್ಮೆಲ್ಲರಿಗೂ ಇದೊಂದು ಎಚ್ಚರಿಕೆಯ ಘಂಟೆ. ಅಕ್ರಮ ಗಣಿಗಾರಿಕೆಯನ್ನು ಶಾಶ್ವತವಾಗಿ ನಿಲ್ಲಿಸುವ ಸಮಯ ಬಂದಿದೆ. ಈ ದುರದೃಷ್ಟಕರ ಘಟನೆಯ ಹಿಂದೆ ಇರುವುದು ಗಣಿಗಾರಿಕೆಯಲ್ಲಿ ತೊಡಗಿರುವವರ ಬೇಜವಾಬ್ದಾರಿ ವರ್ತನೆ. ಕಾನೂನಿನಲ್ಲಿ ಏನೇ ಕ್ರಮ ಕೈಗೊಂಡರು ಆ ಅಮಾಯಕ ಜೀವಗಳು ಹಿಂತಿರುಗುವುದಿಲ್ಲ ಎಂದು ಅವರು ನೋವು ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News