ಹುಣಸೋಡು ದುರಂತ ಪ್ರಕರಣ: ಚಿಕ್ಕಮಗಳೂರಿನ ಕಲ್ಲು ಗಣಿಗಳ ಬಗ್ಗೆ ಸಾರ್ವಜನಿಕರಲ್ಲಿ ಆತಂಕ

Update: 2021-01-23 18:05 GMT
ಹುಣಸೋಡು ದುರಂತದ ದೃಶ್ಯ

ಚಿಕ್ಕಮಗಳೂರು, ಜ.23: ಶಿವಮೊಗ್ಗ ಜಿಲ್ಲೆಯ ಹುಣಸೋಡು ಗ್ರಾಮದಲ್ಲಿ ಕಲ್ಲುಕ್ವಾರಿಯಲ್ಲಿ ಕಳೆದ ಗುರುವಾರ ರಾತ್ರಿ ಸಂಭವಿಸಿದ ಸ್ಫೋಟ ಪ್ರಕರಣ ಇಡೀ ರಾಜ್ಯ ಬೆಚ್ಚಿ ಬಿಳುವಂತೆ ಮಾಡಿದ್ದು, ಈ ಪ್ರಕರಣ ಕಾಫಿನಾಡಿನ ಜನರ ಆತಂಕಕ್ಕೂ ಕಾರಣವಾಗಿತ್ತು. ಶಿವಮೊಗ್ಗದಂತೆ ಕಾಫಿನಾಡಿನಲ್ಲೂ ಕಲ್ಲುಕ್ವಾರಿಗಳಿದ್ದು, ಇಲ್ಲಿನ ಕಲ್ಲು ಕ್ವಾರಿಗಳು ಎಷ್ಟು ಸುರಕ್ಷಿತ ಎಂಬ ಆತಂಕ ಸಾರ್ವಜನಿಕರದ್ದಾಗಿದೆ.

ಕಾಫಿನಾಡಿನಲ್ಲಿ 90 ಕಲ್ಲುಕ್ರಷರ್ ಗಳಿದ್ದು, ಪ್ರಸಕ್ತ 40 ಕಲ್ಲು ಕ್ರಷರ್ ಗಳು ಕಾರ್ಯನಿರ್ವಹಿಸುತ್ತಿವೆ. ಪರಿಸರ ಹಾಗೂ ಜನವಸತಿಗೆ ತೊಂದರೆಯಾಗುತ್ತಿರುವ ಕಾರಣಕ್ಕೆ ಜಿಲ್ಲೆಯಲ್ಲಿ ಅನೇಕ ವರ್ಷಗಳಿಂದ ಕಲ್ಲುಕ್ರಷರ್ ಗಳಿಗೆ ಅವಕಾಶ ನೀಡಬಾರದೆಂಬ ಕೂಗು ಕೇಳಿಬರುತ್ತಿದೆಯಾದರೂ ಸುಮಾರು 40 ಕಲ್ಲು ಗಣಿಗಳು ನಿರಾತಂಕವಾಗಿ ಕಾರ್ಯನಿರ್ವಹಿಸುತ್ತಿವೆ. ನೆರೆಯ ಜಿಲ್ಲೆಯಲ್ಲಿ ಸಂಭವಿಸಿದ ಘಟನೆ ಜಿಲ್ಲೆಯಲ್ಲೂ ಸಂಭವಿಸದಂತೆ ಜಿಲ್ಲಾಡಳಿತ, ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂಬ ಅಗ್ರಹ ಕೇಳಿಬಂದಿದೆ.

ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 90 ಕಲ್ಲುಕ್ರಷರ್ ಗಳಲ್ಲಿ 50 ಕ್ರಷರ್ ಗಳು ಪರವಾನಿಗೆ ಸಮಸ್ಯೆ, ಜಾಗದ ಸಮಸ್ಯೆ ಹಾಗೂ ಸ್ಥಳೀಯರ ವಿರೋಧ ಹಾಗೂ ಹಣಕಾಸಿನ ಸಮಸ್ಯೆಯಿಂದ ಸ್ಥಗಿತಗೊಂಡಿವೆ. 1 ವರ್ಷದ ಇತ್ತೀಚೆಗೆ ಪರವಾನಿಗೆ ಸಮಸ್ಯೆ, ಪರವಾನಿಗೆ ನವೀಕರಣ ಮಾಡದ ಕಾರಣಗಳೂ ಸೇರಿದಂತೆ ಅಕ್ರಮವಾಗಿ ಗಣಿ ನಡೆಸುತ್ತಿದ್ದ ಆರೋಪದ ಮೇರೆಗೆ ಸುಮಾರು 20 ಕ್ರಷರ್ ಗಳಿಗೆ ದಂಡ ವಿಧಿಸಿರುವುದಲ್ಲದೇ ಅಂತಹ ಗಣಿಗಳನ್ನು ಸೀಝ್ ಮಾಡಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಸದ್ಯ ಜಿಲ್ಲೆಯಲ್ಲಿ 40 ಕ್ರಮಬದ್ಧವಾದ ಕ್ರಷರ್ ಗಳು ನಡೆಯುತ್ತಿದ್ದು, ಸಂಬಂಧಪಟ್ಟ ಇಲಾಖೆ ಕ್ರಷರ್ ಗಳನ್ನು ನಡೆಸಲು ಅನುಸರಿಸಬೇಕಾದ ನೀತಿ ನಿಯಮಗಳನ್ನು ಕಡ್ಡಾಯ ಪಾಲಿಸುವಂತೆ ನೋಡಿಕೊಳ್ಳಬೇಕು. ಭಾರೀ ಪ್ರಮಾಣದ ಸ್ಫೋಟಕ ವಸ್ತುಗಳನ್ನು ದಾಸ್ತಾನು ಮಾಡಿಕೊಂಡಿದಲ್ಲಿ ಅಂತಹ ಕ್ರಷರ್ ಗಳ ಮೇಲೆ ದಾಳಿ ನಡೆಸಿ ಕ್ರಷರ್ ಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಜಿಲ್ಲೆಯಲ್ಲಿ ಸದ್ಯ ಕಾರ್ಯನಿರ್ವಹಿಸುತ್ತಿರುವ ಕಲ್ಲು ಗಣಿಗಳ ಪೈಕಿ ಕೆಲ ಗಣಿಗಳು ಜನವಸತಿ ಪ್ರದೇಶಕ್ಕೆ ಹತ್ತಿರವಾಗಿದ್ದು, ಗಣಿಗಳಿಂದ ಹೊರಬರುವ ಧೂಳು, ಸ್ಪೋಟಗಳ ಸದ್ದು ಸುತ್ತಮುತ್ತಲ ಗ್ರಾಮಗಳ ಜನರ ಆರೋಗ್ಯ ಮತ್ತು ಪರಿಸರದ ಮೇಲೂ ಕೆಟ್ಟ ಪರಿಣಾಮ ಬೀರುತ್ತಿದೆ. ಸ್ಫೊಟಗಳ ಸದ್ದಿಗೆ ಮನೆಗಳ ಗೋಡೆಗಳ ಬಿರುಕು ಬಿಡುತ್ತಿವೆ. ಅಂತಹ ಕ್ರಷರ್ ಗಳಿಗೆ ಕಡಿವಾಣ ಹಾಕಬೇಕೆಂಬುದು ಹಾಗೂ ಕಾಫಿನಾಡಿನ ಮಲೆನಾಡು ಭಾಗ ಪರಿಸರ ಸೂಕ್ಷ್ಮ ವಲಯವಾಗಿದ್ದು, ಇಂತಹ ಪ್ರದೇಶ ವ್ಯಾಪ್ತಿಯಲ್ಲಿನ ಕ್ರಷರ್ ಗಳನ್ನು ಮುಚ್ಚಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಗುರುವಾರ ರಾತ್ರಿ ಶಿವಮೊಗ್ಗದಲ್ಲಿ ಸಂಭವಿಸಿದ ಸ್ಫೋಟದಿಂದಾಗಿ ಜಿಲ್ಲೆಯ ಕೊಪ್ಪ, ನರಸಿಂಹರಾಜಪುರ, ತರೀಕೆರೆ ತಾಲೂಕಿನ ಗಡಿ ಭಾಗದಲ್ಲಿ ಭಾರೀ ಸದ್ದಿನೊಂದಿಗೆ ಭೂಮಿ ಕಂಪಿಸಿದ ಅನುಭವ ಆಗಿತ್ತು. ಭಯಗೊಂಡ ಜನರು ರಾತ್ರಿ ಎದ್ದು ಮನೆಯಿಂದ ಹೊರಬಂದ ಘಟನೆಯೂ ನಡೆದಿತ್ತು. ಭೂ ಕಂಪಿಸಿದ್ದರಿಂದ ಮಲೆನಾಡು ಭಾಗದಲ್ಲಿ ಭೂಕಂಪವಾಗಿದೆ ಎಂಬ ಸುದ್ದಿ ವ್ಯಾಪಕವಾಗಿ ಹರಡಿತ್ತು. 

ಜಿಲ್ಲೆಯ ತರೀಕೆರೆ ತಾಲೂಕು ಬೇಲೆನಹಳ್ಳಿಯ ಗುಡ್ಡ ಪ್ರದೇಶದಲ್ಲಿ ಸ್ಥಳೀಯರ ವಿರೋಧದ ನಡುವೆಯೂ ಕಲ್ಲುಗಣಿಗಾರಿಕೆಗೆ ಅವಕಾಶ ನೀಡಲಾಗಿದೆ. ಕಲ್ಲುಗಣಿಗಾರಿಕೆಗೆ ಅವಕಾಶ ನೀಡದಂತೆ ಸ್ಥಳೀಯರು ಅನೇಕ ಬಾರಿ ಜಿಲ್ಲಾಡಳಿತದ ಗಮನ ಸೆಳೆದರೂ ಪ್ರಯೋಜನವಾಗಿಲ್ಲ. ಶಿವಮೊಗ್ಗದ ಕಲ್ಲುಕ್ವಾರೆಯಲ್ಲಿ ಸಂಭವಿಸಿದ ಸ್ಫೋಟದಿಂದ ಈ ಭಾಗದ ಜನರು ಭಯಗೊಂಡಿದ್ದು, ಸಂಬಂಧ ಪಟ್ಟ ಇಲಾಖೆಯವರು ಬೇಲೇನಹಳ್ಳಿಯಲ್ಲಿರುವ ಗಣಿಗಾರಿಕೆಯನ್ನು ಕೂಡಲೇ ಸ್ಥಗಿತಗೊಳಿಸಲು ಜಿಲ್ಲಾಡಳಿತ ಕ್ರಮವಹಿಸಬೇಕು.
-ಶೇಖರಪ್ಪ, ಗ್ರಾಮಸ್ಥ

ಕಲ್ಲು ಗಣಿಗಾರಿಕೆ ಪ್ರದೇಶದ 200 ಮೀ. ವ್ಯಾಪ್ತಿಯಲ್ಲಿ ಯಾವುದೇ ಸ್ವತ್ತು ಇರಬಾರದು, ಸ್ಫೋಟಕ ವಸ್ತುಗಳನ್ನು ಸಂಗ್ರಹಿಸಿಟ್ಟಿಕೊಳ್ಳುವಂತಿಲ್ಲ. ಇಲಾಖೆ ಅಧಿಕಾರಿಗಳು ಅಕ್ರಮ ಗಣಿಗಾರಿಕೆ ಕಂಡು ಬಂದಲ್ಲಿ ದಾಳಿ ನಡೆಸಿ ಪ್ರಕರಣ ದಾಖಲಿಸಲಾಗುತ್ತಿದೆ. ಸದ್ಯ ಜಿಲ್ಲೆಯಲ್ಲಿ 40 ಕ್ರಷರ್ ಗಗಳು ಕಾರ್ಯನಿರ್ವಹಿಸುತ್ತಿದ್ದು, ಎಲ್ಲವೂ ಪರವಾನಿಗೆ ಪಡೆದು ಕಾರ್ಯನಿರ್ವಹಿಸುತ್ತಿದೆ. ಶಿವಮೊಗ್ಗ ಘಟನೆ ಬಳಿಕ ಈ ಗಣಿಗಾರಿಕೆ ಸ್ಥಳಕ್ಕೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಲಾಗಿದೆ. ಸ್ಫೋಟಕಗಳನ್ನು ಸಂಗ್ರಹಿಸಿರುವುದು ಎಲ್ಲೂ ಕಂಡು ಬಂದಿಲ್ಲ.
- ವಿಂಧ್ಯಾ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಜಿಲ್ಲಾಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News