ಅಶೋಕವನದಲ್ಲಿ ಲೋಕಾರ್ಪಣೆಗೊಂಡ 'ಕಪ್ಪೆಗೂಡು'

Update: 2021-01-24 18:27 GMT

ಹಾಸನ ಜ,24: ಮಲೆನಾಡ ಭಾಗದ ಪಶ್ಚಿಮ ಘಟ್ಟಗಳಿಗೆ ಬರುವ ಜೀವ ವಿಜ್ಞಾನಗಳ ಅಧ್ಯಯನಕಾರರಿಗೆ ಅನುಕೂಲವಾಗುವಂತೆ 'ಕಪ್ಪೆಗೂಡು' ಕಂಟೈನರ್ ವಸತಿ ಗೃಹವು ಬಿಸಿಲೆ ಘಾಟ್ ವ್ಯಾಪ್ತಿಯ ಅಶೋಕವನದಲ್ಲಿ ರವಿವಾರ ಲೋಕಾರ್ಪಣೆಗೊಂಡಿದೆ.

ಸುಬ್ರಹ್ಮಣ್ಯಂ-ಸಕಲೇಶಪುರ ಸಂಪರ್ಕಿಸುವ ಬಿಸಿಲೆ ಘಾಟ್ ಅರಣ್ಯ ಪರಿಸರ ಸಮೀಪದ, ಮಂಗಳೂರಿನ ಅತ್ರಿ ಬುಕ್ ಸೆಂಟರ್ ನ ಮಾಲಕ ಜಿಎನ್ ಅಶೋಕವರ್ಧನ ಮತ್ತು ಸಶ್ತ್ರ ತಜ್ಞ ಡಾ. ಕೃಷ್ಣಮೋಹನ್ ಪ್ರಭು ಅವರಿಗೆ ಸೇರಿದ ಆಶೋಕವನ ಪ್ಲಾಟ್ ನಲ್ಲಿ 'ಕಪ್ಪೆಗೂಡು' ವಸತಿ ಗೃಹವು ನಿರ್ಮಾಣಗೊಂಡಿದ್ದು ಇಂದು ಲೋಕರ್ಪಣೆಗೊಳಿಸಲಾಯಿತು. 

1975ರಲ್ಲಿ ಪುಸ್ತಕ ವ್ಯಾಪಾರಕ್ಕೆಂದು ಮೈಸೂರಿನಿಂದ ಮಂಗಳೂರಿಗೆ ಬಂದು ನೆಲಸಿದ ಜಿಎನ್ ಅಶೋಕವರ್ಧನ್ ಬಿಸಿಲೆ ಘಾಟ್ ವಲಯದ ಬೆಟ್ಟ ಕಾಡುಗಳಲ್ಲಿ ಪರ್ವತಾರೋಹಣದ ಹವ್ಯಾಸವನ್ನು ನಡೆಸಿದ್ದರು. 1980ರ ದಶಕದಲ್ಲಿ ಗೆಳಯ ಉಲ್ಲಾಸ ಕಾರಂತರೊಂದಿಗೆ ಒಂದು ವಾರ ನಾಗರಹೊಳೆಯಲ್ಲಿ ಕಳೆದಿದ್ದರು. ಆ ಸಮಯದಲ್ಲಿ ಅಶೋಕವರ್ಧನ ಅವರ ಸುತ್ತಾಟಗಳಿಗೆ ಕಾರಂತರು ವನ್ಯ ಸಂರಕ್ಷಣೆಯ ಸ್ಪಷ್ಟ ರೂಪವನ್ನು ನೀಡಿದರು. ಉಲ್ಲಾಸ್ ಕಾರಂತ್ ಮತ್ತು ಕೆಎಂ ಚಿನ್ನಪ್ಪ ಅವರ ನೇತೃತ್ವದಲ್ಲಿ ನಿಯತಕಾಲಗಳಲ್ಲಿ ಹಲವು ವರ್ಷ ನಡೆಸಿದ ವನ್ಯ ಜಾನುವಾರು‌ ಗಣತಿಯ ತಂಡದಲ್ಲಿ ಜಿಎನ್ ಅಶೋಕವರ್ಧನ್ ಕೂಡ ಒಬ್ಬರಾಗಿದ್ದರು ಮತ್ತು ಅಶೋಕವನದ ಪಾಲುದಾರ ಶಸ್ತ್ರವೈದ್ಯ ಡಾ. ಕೃಷ್ಣಮೋಹನ್ ಕೂಡ ಜೊತೆಗಿದ್ದರು. 

ಏನಿದು ಅಶೋಕವನ ? 
ನಾಗರಹೊಳೆಯಿಂದ ಮರಳಿದ ನಂತರ ಆಗ ಮಂಗಳೂರು ಕೇಂದ್ರಿತವಾದಂತೆ, ಗೆಳೆಯ ನಿರೇನ್ ಜೈನ್ ನಾಗರಿಕರಿಂದ ವನ್ಯ ಸಂರಕ್ಷಣಾ ಜಾಗೃತಿಯಲ್ಲಿ ಜವಾಬ್ದಾರಿಯುತ ನಾಯಕತ್ವ ಕೊಟ್ಟರು. ಆರ್ಕಿಟೆಕ್ಟ್ ವೃತ್ತಿಯ ಪ್ರಾಥಮಿಕ ಹಂತದಲ್ಲಿದ್ದ ನಿರೇನ್ ಜೈನ್ ವನ್ಯ ಸಂರಕ್ಷಣೆಯ ಕೆಲಸವನ್ನು ಸಮರ್ಥವಾಗಿ ನಡೆಸಿದ್ದರು. ಕುದುರೆ‌ಮುಖ ರಾಷ್ಟ್ರೀಯ ಉದ್ಯಾನದ ಕುದುರೆಮುಖ ಗಣಿಗಾರಿಕೆಯನ್ನು ಕಾನೂನಾತ್ಮಕವಾಗಿಯೇ ಹೋಗುವಂತೆ ಮಾಡಿದ್ದು, ವನಧಾಮ ಪರಿಸರದ ಗ್ರಾಮೀಣ ಮಂದಿಯ ಮರುವಸತಿಯ ಸಂಕಟಗಳಿಗೆ ನಿರೇನ್ ಸ್ಪಂದಿಸಿದ್ದರು. ಆ ಹೋರಾಟಗಳಲ್ಲಿ ನಿರೇನ್ ಗೆ ಸಿಕ್ಕ ಪರಿಸರ ಸಹಕಾರಿಗಳಲ್ಲಿ ಬಿಸಿಲೆ ಘಾಟ್ ವಲಯದ ಹಿರಿಯ ಕೃಷಿಕ, ಪರಿಸರ ಪ್ರೇಮಿ ಗೊದ್ದು ಉಮೇಶ್ ಎಂಬವರು ಮುಖ್ಯಸಂರಕ್ಷಣೆ.

ಆ ವಲಯದಲ್ಲಿ ಸಣ್ಣೇಗೌಡ ಎಂಬವರ ಕುಟುಂಬಕ್ಕೆ ಸೇರಿದ್ದ ಭೂಮಿಯೊಂದಿತ್ತು. ಆ ಸ್ಥಳದಲ್ಲಿ ರೆಸಾರ್ಟ್ ಮಾಡುವುದಾಗಿ ಯಾರೋ ಚೌಕಾಸಿ ಮಾಡಿದ್ದರು, ಈ ಪಟ್ಟಾ ಭೂಮಿಯ ಸುದ್ದಿಯು ಗೊದ್ದು ಉಮೇಶ್ ಅವರಿಂದ ನಿರೇಣ್ ಅವರ ಕಿವಿಗೆ ಬಿತ್ತು. ಘಟ್ಟದ ತಪ್ಪಲಿನ ಬಿಸಿಲೇ ಗೇಟಿನಿಂದ ತೊಡಗಿ, ಕೆಳಗಿನ ಸುಬ್ರಹ್ಮಣ್ಯ ಸಮೀಪದ ಕುಳ್ಕುಂದದವರೆಗೆ ಅಂದರೆ ಸುಮಾರು 23 ಕಿ.ಮೀ ದಾರಿಯ ಉದ್ದಕ್ಕೆ ಎರಡೂ ಮಗ್ಗುಲಿನಲ್ಲಿ ಒಂದೋ ಪುಷ್ಪಗಿರಿ ವನಧಾಮ ಅಥವಾ ಸ್ಪಷ್ಟವಾಗಿ ಕಾಣುವಂತೆ ಬಿಸಿಲೆ ಕಾಯ್ದಿರಿಸಿದ ಕಾಡು ಮಾತ್ರವಿದ್ದು, ಅಲ್ಲಿ ಜನ ವಸತಿ, ಕೃಷಿ ಕಾರ್ಯ ಮತ್ತು ನಾಗರಿಕ ಚಟುವಟಿಕೆಗಳು ಏನೂ ನಡೆಯುತ್ತಿರಲಿಲ್ಲ. ಇನ್ನು ರೆಸಾರ್ಟ್ ಬಂದರೆ ವನ್ಯದ ಉದರದಲ್ಲಿ ವಿಷದ ಬೀಜ ಬಿತ್ತಿದ್ದಂತಾಗುತ್ತದೆ ಎಂದು ಮನಗೊಂಡ ನಿರೇನ್, ಜಿಎನ್ ಅಶೋಕವರ್ಧನ ಹಾಗೂ ಡಾ. ಕೃಷ್ಣಮೋಹನರಲ್ಲಿ ಅಸಹಾಯಕತೆ ವ್ಯಕ್ತಪಡಿಸಿದ್ದರು. ಈ ಬಗ್ಗೆ ಎಚ್ಚೆತ್ತು ಇವರಿಬ್ಬರೂ ಸೇರಿ ಸಣ್ಣೇಗೌಡರ ಕುಟುಂಬಕ್ಕೆ ಸೇರಲಾದ ಈ ಭೂಮಿಯನ್ನು 14 ವರ್ಷಗಳ ಹಿಂದೆ ಖರೀದಿಸಿದರು. ಅದೇ ಭೂಮಿ 'ಅಶೋಕವನ' ಎಂಬ ಹೆಸರು ಪಡೆಯಿತು.

"ಈ ನೆಲವನ್ನು ಯಾವುದೇ ವಾಣಿಜ್ಯ ಕಲಾಪ ಅಥವಾ ನಾಗರಿಕ ಚಟುವಟಿಗಳು ಬಾರದಂತೆ ಕಳೆದ ಹದಿನಾಲ್ಕು ವರ್ಷಗಳುದ್ದಕ್ಕೂ ಕಾಯ್ದುಕೊಂಡು ಬಂದಿದ್ದೇವೆ. ಇದುವರೆಗೆ ಇಲ್ಲಿ ಬೀಜ, ಗಿಡ ನೆಟ್ಟಿಲ್ಲ, ಇಲ್ಲಿರುವ ಏಲಕ್ಕಿ, ಸೀಗೆ, ಕಣಿಲೆಗಳಂತಹ ವನೋತ್ಪತ್ತಿಗಳನ್ನು ತಮ್ಮ ಮನೆಯ‌ ಅಗತ್ಯಕ್ಕೂ ಸಂಗ್ರಹಿಸಿಲ್ಲ. ಅಶೋಕವನ ಮಾಡಿದ ಹೊಸತರಲ್ಲಿ ಪತ್ರಿಕಾ ಲೇಖನದ ಮೂಲಕ ಸಂಪರ್ಕಕ್ಕೆ ಬಂದ ಎಲ್ಲರಲ್ಲೂ ವನ್ಯ ಸಂರಕ್ಷಣೆಯ ಈ ಕ್ರಮವನ್ನು ಪ್ರಚಾರ ಮಾಡಿದ್ದೆವು. ಕಾಡಿನ ಅಂಚಿನಲ್ಲಿದ್ದುಕೊಂಡು, ಅನಿವಾರ್ಯವಾಗಿ ಕೃಷಿಬಿಟ್ಟು ಬೀಳಾಗಿರುವ ಖಾಸಗಿ ನೆಲಗಳು ಈ ವಲಯದಲ್ಲಿ ಇನ್ನಷ್ಟು ಇವೆ, ಅವನ್ನು ಸಮಾನಾಸಕ್ತರು ಕೊಂಡು, ವನ್ಯವಾಗಿಯೇ ಕಾಯ್ದುಕೊಳ್ಳಬೇಕು. ತುಣುಕುಗಳು ಸಣ್ಣವಾದರೂ 'ಖಾಸಗಿ ವನ್ಯ ಸಂರಕ್ಷಣೆ' ಒಂದು ಚಳವಳಿಯಾದರೆ ವ್ಯಾಪ್ತಿ ಹೆಚ್ಚುತ್ತದೆ ಎಂದು ಆಶಿಸಿದ್ದೆವು. ಆದರೆ ಕಾಡು ಬೋಳಿಸುವಲ್ಲಿ, ನೆಲವನ್ನು ವಾಣಿಜ್ಯ ಉದ್ದೇಶಕ್ಕೆ ದುಡಿಸುವಲ್ಲಿ ಇರುವ ಆಕರ್ಷಣೆಗಳು ಇದ್ದಂತೆ ಉಳಿಸಿಕೊಳ್ಳುವಲ್ಲಿ ಇಲ್ಲ. ನಮ್ಮ ಪ್ರಯತ್ನ ಯಾರಿಗೂ ಅನುಕರಣೀಯವಾಗಿ ಕಾಣಲೇ ಇಲ್ಲ' ಎಂದು ಹೇಳುತ್ತಾರೆ ಅಶೋಕವನದ ಜಿಎನ್ ಅಶೋಕವರ್ಧನ.

ಮರನಾಯಿ ದರ್ಶನ
ಸಮಾನಾಸಕ್ತ ಗೆಳೆಯರೊಡನೆ ಇಲ್ಲಿಗೆ ವರ್ಷದಲ್ಲಿ ಹಲವು ಬಾರಿ ಬಂದು ಪುಟ್ಟ ಗುಡಾರ ಹೂಡಿ, ಸುತ್ತಣ ಪರಿಸರದ ಅಲ್ಪಸ್ವಲ್ಪ ಪರಿಚಯ ಮಾಡಿಕೊಳ್ಳುತ್ತಿದ್ದರು, ಒಂದು ಬಾರಿ ಶಿಬಿರ ನಡೆಸುವಾಗ ಆ ಪರಿಸರದಲ್ಲಿ ಮರನಾಯಿ(ನೀಲಗಿರಿ ಮಾರ್ಟಿನ್) ಕಾಣಿಸಿತ್ತು. ಆ ವಲಯದಲ್ಲಿ ಅಳಿದೇ ಹೋಗಿದೆ ಎಂದು ನಂಬಲಾಗಿದ್ದ ಮರನಾಯಿ ದರ್ಶನ ವನ್ಯ ವಿಜ್ಞಾನ ವಲಯದಲ್ಲಿ ದೊಡ್ಡ ರೋಮಾಂಚನವನ್ನೆ ಸೃಷ್ಟಿಸಿತ್ತು.

ಯುವಕರ ಹುಚ್ಚಿಗೆ ಕುಮ್ಮಕ್ಕು ನೀಡಿದ ಅಧ್ಯಯನ
ಇಲ್ಲಿ ಏನಾದರೂ ಗಂಭೀರ ಅಧ್ಯಯನ ನಡೆಸಬೇಕೆಂಬ ಉದ್ದೇಶವನ್ನಿಟ್ಟು, ಎಂಟು-ಒಂಬತ್ತು ವರ್ಷಗಳ ಹಿಂದೆ ಇಲ್ಲಿಗೆ ಮಂಗಳೂರಿನ ಇನ್ಪೋಸಿಸಿನಲ್ಲಿದ್ದ ಕೆಲವು ಕಿರಿಯ ವನ್ಯ ಉತ್ಸಾಹಿ ಗೆಳೆಯರ ಇಲ್ಲಿಗೆ ಭೇಟಿ ನೀಡಿತ್ತು. ಈ ಯುವಕರ ಹುಚ್ಚಿಗೆ ಹೆಚ್ಚಿನ ಕುಮ್ಮಕ್ಕು ನೀಡಲು ಉಡುಪಿಯ ಪ್ರಾಣಿಶಾಸ್ತ್ರ ಅಧ್ಯಾಪಕ ಹಾಗೂ ವನ್ಯ ಸಂರಕ್ಷಣಾ ಹವ್ಯಾಸಿ ಎನ್.ಎ ಮಧ್ಯಸ್ಥ ಮತ್ತು ಸಸ್ಯ ವಿಜ್ಞಾನಿ ಕಾಕುಂಜೆ ಗೋಪಾಲಕೃಷ್ಣ ಭಟ್ ತಮ್ಮ ಬಳಗದೊಂದಿಗೆ ಬಂದರು. ಆದರೆ ಈ ಬಳಗಕ್ಕೆ ನಿಜ ದಿಕ್ಕು ಸಿಕ್ಕಿದ್ದು ಅಂಜರ್ಜಾಲಾಟದಲ್ಲಿ ಈ ವಿಜ್ಞಾನಿ, ಕಪ್ಪೆಗಳ ವಿಶೇಷ ಅಧ್ಯಯನ ನಿರತ ಕೆ.ವಿ. ಗುರುರಾಜ್ ಸಿಕ್ಕಿದ ಮೇಲೆ. ಅವರ ಅಧ್ಯಯನಕ್ಕೆ ಯಾವುದೇ ಕೊರತೆಯಾಗದಂತೆ ಗುಬ್ಬಿ ಲ್ಯಾಬಿನ ಎಚ್.ಎಸ್ ಸುಧೀರ, ಕೆ.ಎಸ್. ಶೇಷಾದ್ರಿ, ಮಧುಶ್ರೀ ಮುಡ್ಕೆ, ಶ್ರೀಕಾಂತ ಗುನಗ ಮುಂತಾದವರು ಜೊತೆಯಾದರು. 

ಕಪ್ಪೆ ಗುರುತಿಸಿ ಶಿಬಿರ
ಪ್ರಾಕೃತಿಕ ಸತ್ಯಾನ್ವೇಷಣೆಯಲ್ಲಿ ಹುಲಿ, ಆನೆಗಳಂಥ ಪ್ರಾಣಿಗಳಿಗೆ ನೂರಾರು ಚದರ ಕಿಮೀ ವ್ಯಾಪ್ತಿಯ ಕಾಡು, ಬಯಲು ಬೇಕಾಗುತ್ತದೆ. ಆದರೆ ಅಷ್ಟೇ ಪರಿಣಾಮಕಾರಿ ಸೂಚ್ಯಂಕವನ್ನು ಕೊಡುವ ಕಪ್ಪೆ, ಹಾವು, ವಾಟೆ, ಹುಲ್ಲು, ಮಣ್ಣು, ಕಲ್ಲುಗಳ ಅಧ್ಯಯನಕ್ಕೆ ಇಂಥ ಬೌಗೋಳಿಕ ತುಣುಕುಗಳೂ ಧಾರಾಳವಾಗುತ್ತವೆ. ಇದನ್ನು ಗುರುರಾಜರ ಬಳಗ ಯಾವ ಗದ್ದಲವೂ ಇಲ್ಲದೆ ಮಾಡಿ ತೋರಿಸುತ್ತಲೆ ಇದ್ದಾರೆ. ಇವರು ಸತತ ಆರು ವರ್ಷಗಳಿಂದ ಪ್ರತೀ ಮಳೆಗಾಲದ ಆರಂಭದಲ್ಲಿ ನಡೆಸಿಕೊಟ್ಟ ಕಪ್ಪೆ ಗುರುತಿಸಿ ಶಿಬಿರ ಅಶೋಕವನದ ಹೆಮ್ಮೆಯ ಸಾಧನೆಯಾಗಿದೆ. 

'ಕಪ್ಪೆಗೂಡು' ಕಟ್ಟಿದ್ದು ಯಾಕೆ ?
ಜಡಿ ಮಳೆಗಾಲ, ಕಪ್ಪೆಗಳ ಸಂಗಮ ಸಂಭ್ರಮದ ವೇಳೆ, ಅಪರಾತ್ರಿಯಲ್ಲಿ ಇಲ್ಲಿ ನಡೆಸಿದ ಫೀಲ್ಡ್ ವರ್ಕ್ ಬಹಳ ಮಹತ್ವದಾಗಿದೆ. ಇಲ್ಲಿ ಕೆಲವೊಮ್ಮೆ ರಾತ್ರಿಯ ವೇಳೆ ನಡೆಯುವ ಅಧ್ಯಯನ ನಿರತ ಕಲಾಪಕ್ಕೆ 20-25 ಮಂದಿ ಬಿಸಿಲೆ ಗೇಟ್ ಬಳಿಯ ಸಮುದಾಯ ಭವನದ ಕನಿಷ್ಟ ಸವಲತ್ತುಗಳನ್ನು ಹೇಗೋ ಹೊಂದಿಸಿಕೊಳ್ಳುತ್ತಿದ್ದರು. ಆದರೆ ಆ ರೀತಿಯ ಕ್ಷೇತ್ರ ಕಾರ್ಯ(Field Work)ದಲ್ಲಿ ಸಿಕ್ಕ ಪ್ರಾಥಮಿಕ ಮಾಹಿತಿಗಳನ್ನು ಸಂಶೋಧನೆಗಳ ಮಟ್ಟಕ್ಕೆ ಏರಿಸಬೇಕಾದರೆ ಇಲ್ಲಿನ ಸವಲತ್ತುಗಳು ಪೂರಕವಾಗುತ್ತಿರಲಿಲ್ಲ. ಇಲ್ಲಿ ಕನಿಷ್ಠ ಎರಡು ಮೂರು ಮಂದಿ ವರ್ಷದ ವಿವಿಧ ಅವಧಿಗಳಲ್ಲಿ ದಿನ, ವಾರಗಟ್ಟಲೆ ಉಳಿದುಕೊಂಡು, ಅಧ್ಯಯನ ನಡೆಸುವುದು ಕಷ್ಟವಾಗುತ್ತಿತ್ತು. ಅದಕ್ಕಾಗಿ ಅಶೋಕವನದವರು ಈ ತಾತ್ಕಾಲಿಕ ಕಂಟೈನರ್ ಮನೆ ನಿರ್ಮಾಣಕ್ಕೆ ಮುಂದಾದರು. ಈ ಮನೆಯೊಳಗೆ ನಾಲ್ಕು ಮಂದಿಗೆ ಸ್ವಯಂ ಆಡುಗೆ ಮಾಡಿಕೊಂಡು, ಸುಭದ್ರವಾಗಿ ವಾಸಿಸಬಹುದು. ಮನೆಯ ಮುಂಭಾಗ ಹರಿಯುತ್ತಿರುವ ತೊರೆಯಿದ್ದರೂ ಕಾನನದ ನೀರನ್ನು ಸ್ವಂತಕ್ಕೆ ಬಳಸಬಾರದೆಂಬ ನಿಟ್ಟಿನಲ್ಲಿ ಕಂಟೈನರ್ ಮನೆಯ ಸಮೀಪದಲ್ಲೆ ಕಿರಿದಾದ ಬಾವಿ ನಿರ್ಮಿಸಲಾಗಿದೆ. ಇದರಿಂದ ರಾತ್ರಿಯ ಅದ್ಯಯನದ ಸಂದರ್ಭ ಎದರಾಗುತ್ತಿದ್ದ ಕಷ್ಟವನ್ನು ತಪ್ಪಿಸಿದಂತಾಗಿದೆ. ಹೀಗೊಂದು ಪ್ರಯೋಗಕ್ಕೆ ಪ್ರೇರಣೆ ನೀಡಿದ್ದು ಗುರುರಾಜರ ಕಪ್ಪೆಗಳ ಅಧ್ಯಯನ ಎಂಬ ಕಾರಣಕ್ಕೆ ಈ ಕಂಟೈನರ್ ಮನೆಗೆ 'ಕಪ್ಪೆಗೂಡು' ಎಂದು ಹೆಸರಿಡಲಾಗಿದೆ.
 
ಹಿಂದೆ ಈ ಪ್ರದೇಶದಲ್ಲಿ ಏಲಕ್ಕಿ ತೋಪುಗಳಿದ್ದವು ಎನ್ನಲಾಗಿದ್ದು, ಇಲ್ಲಿನ ಕೃಷಿ ಕಾರ್ಯಕ್ಕೊ ಅಥವಾ ಮರ ಸಾಗಾಣೆಗೊ ಮಾಡಿದ ದಾರಿಯೊಂದಿದ್ದು, ಸದ್ಯ ಅದನ್ನೆ ಬಳಸಲಾಗುತ್ತಿದೆ. ಈ ಪರಿಸರದ ವನ್ಯ ಜೀವಿಗಳ ಸಂಚಾರಕ್ಕೆ ಅಡ್ಡಿಯಾಗಬಾರದೆಂದು ಬೇಲಿ, ಪಾಗಾರ ಅಥವಾ ಕಂದಕಗಳನ್ನು ನಿರ್ಮಿಸಿಲ್ಲ. ಅರಣ್ಯ ಇಲಾಖೆ ಸಾಮಾಜಿಕ ರಕ್ಷಣೆಯ ಭಾಗವಾಗಿ ಇಲ್ಲಿಗೂ ವಿದ್ಯುತ್ ಬೇಲಿ ಕಟ್ಟುವ ಮಾತು ಬಂದಾಗ ಅಶೋಕವನದವರು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಕಪ್ಪೆ ಗೂಡಿನ ಶುದ್ಧ ಹಾಗೂ ಕೊಳಚೆ ನೀರಿನ ವಿಲೇವಾರಿಗಳು ಹಾಗು ಕಸಗಳು ವಿಸ್ತ್ರತವಾಗಿ ಇಲ್ಲಿನ ವನ್ಯಪರಿಸರವನ್ನು ಪ್ರಭಾವಿಸದಂತೆ ಎಚ್ಚರವಹಿಸಲಾಗಿದೆ. 

ಅಶೋಕವನದವರು ಹೇಳುವಂತೆ, 'ಕಪ್ಪೆಗೂಡು' ಪ್ರವಾಸಿತಾಣವಲ್ಲ, ಪರಿಸರ ಶಿಕ್ಷಣ ಕಲ್ಪಿಸುವ ನೆಲವೂ ಅಲ್ಲ. ಇಲ್ಲಿಗೆ ಅಧ್ಯಯನ ಮೀರಿ, ಯಾವುದೇ ವಾಣಿಜ್ಯ ಚಟುವಟಿಕೆಗಳನ್ನು, ವಿನೋಧ ಹಾವಳಿಗಳನ್ನು ನಡೆಸುವಂತಿಲ್ಲ. ಇಲ್ಲಿಗೆ ಸಾರ್ವಜನಿಕರ ಹಾಗೂ ಪ್ರವಾಸಿಗರ ಪ್ರವೇಶವನ್ನು ನಿರ್ಭಂದಿಸಲಾಗಿದೆ, ಹಾಗಾಗಿ ಅಶೋಕವನದ ವಿಳಾಸವನ್ನು ಬಹಿರಂಗ ಪಡಿಸುವಂತಿಲ್ಲ. ಈ ಕಂಟೈನರ್ ಮನೆಯು ಮುಂದೆ ಕ್ಷೇತ್ರಕಾರ್ಯಕ್ಕಾಗಿ ಯಾವುದೇ ಜೀವ ಸಂಶೋಧಕರಿಗೆ ಉಚಿತವಾಗಿ ನೀಡುತ್ತೇವೆ, ಆದರೆ ತಮ್ಮ ಬಿಗಿಯಾಗಿ ತಮ್ಮ ಕಣ್ಗಾವಲಿನಲ್ಲಿ ಒದಗಬೇಕು ಎನ್ನುವುದಷ್ಟೆ ಅಶೋಕವನದ ಉದ್ದೇಶ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News