ಜನ ಗಣರಾಜ್ಯೋತ್ಸವ

Update: 2021-01-26 05:30 GMT
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಇಂದು ಭಾರತ ಎಪ್ಪತ್ತೆರಡನೇ ಗಣ ರಾಜ್ಯೋತ್ಸವವನ್ನು ಆಚರಿಸುತ್ತಿದೆ. ಇಷ್ಟು ವರ್ಷ ಬರೀ ಸಾಂಪ್ರದಾಯಿಕ ಸರಕಾರಿ ಕಾರ್ಯಕ್ರಮವಾಗಿದ್ದ ಇದು ಈ ಸಲ ರೈತರ ಶಾಂತಿಯುತ ಚಳವಳಿಯ ಕಾರಣಕ್ಕಾಗಿ ಜನ ಗಣರಾಜ್ಯೋತ್ಸವ ಎಂದು ಕರೆಯಲ್ಪಡುತ್ತಿದೆ. ಕಳೆದ ಎರಡು ತಿಂಗಳುಗಳಿಂದ ರಾಜಧಾನಿಯ ಹೊರಗಡೆ ಬೀಡು ಬಿಟ್ಟು ಅತ್ಯಂತ ಸಹನೆ ಮತ್ತು ಶಾಂತಿಯಿಂದ ಪ್ರತಿಭಟನೆ ನಡೆಸುತ್ತಿರುವ ರೈತರ ಬಗ್ಗೆ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರಕಾರ ಎಂದೂ ಸಹಾನುಭೂತಿಯಿಂದ ವರ್ತಿಸಲಿಲ್ಲ. ಮೊದಲು ಅದನ್ನು ವಿಫಲಗೊಳಿಸಲು ಮಸಲತ್ತು ನಡೆಸಿತು. ಹೋರಾಟಕ್ಕೆ ಇಳಿದ ರೈತರ ಹಣೆಗೆ ಖಾಲಿಸ್ತಾನಿಗಳು, ಮಾವೊವಾದಿಗಳು, ಉಗ್ರಗಾಮಿಗಳೆಂದೂ ಹಣೆಪಟ್ಟಿ ಹಾಕಲು ಯತ್ನಿಸಿತು. ಕೊನೆಗೂ ಇದಾವುದಕ್ಕೂ ರೈತರು ಜಗ್ಗದಿದ್ದಾಗ ಮಾತುಕತೆಗೆ ಮುಂದಾಯಿತು. ಹನ್ನೊಂದು ಸುತ್ತಿನ ಮಾತುಕತೆಗಳು ನಡೆದರೂ ಪ್ರಯೋಜನವಾಗಲಿಲ್ಲ. ಭಾರತೀಯ ಕೃಷಿರಂಗಕ್ಕೆ ಮಾರಕವಾದ ಮೂರು ಕರಾಳ ಕಾಯ್ದೆಗಳನ್ನು ವಾಪಸ್ ಪಡೆಯಲು ಮನಸ್ಸು ಮಾಡಲಿಲ್ಲ. ಕೊನೆಗೆ ಸುಪ್ರೀಂಕೋರ್ಟ್ ಮಧ್ಯ ಪ್ರವೇಶ ಮಾಡಿತು. ಈ ಕಾಯ್ದೆಗಳ ಪರಾಮರ್ಶೆಗೆ ಒಂದು ಸಮಿತಿಯನ್ನು ರಚಿಸಿತು. ಆದರೆ ಆ ಸಮಿತಿಯಲ್ಲಿ ಇರುವವರೆಲ್ಲ ಕಾರ್ಪೊರೇಟ್ ಲಾಬಿಯ ಸಮರ್ಥಕರು ಎಂದು ರೈತರು ತಿರಸ್ಕರಿಸಿದರು. ಇದೆಲ್ಲದರ ಪರಿಣಾಮವಾಗಿ ರೈತರ ಸಹನೆಯ ಕಟ್ಟೆಯೊಡೆದು ಗಣರಾಜ್ಯೋತ್ಸವ ದಿನ ದಿಲ್ಲಿಯಲ್ಲಿ ಬೃಹತ್ ಟ್ರಾಕ್ಟರ್ ಮೆರವಣಿಗೆ ಮಾಡಲು ತೀರ್ಮಾನಿಸಿ ಸಜ್ಜಾಗಿದ್ದಾರೆ.

ಈ ಟ್ರಾಕ್ಟರ್ ಮೆರವಣಿಗೆಯಲ್ಲಿ ಸುಮಾರು ಎರಡು ಲಕ್ಷ ಟ್ರಾಕ್ಟರ್‌ಗಳು ಮತ್ತು ಹತ್ತು ಲಕ್ಷ ರೈತರು ಪಾಲ್ಗೊಳ್ಳಲಿದ್ದಾರೆಂದು ಬಲ್ಲ ಮೂಲಗಳು ತಿಳಿಸಿವೆ. ಈ ಮೆರವಣಿಗೆ ಬಗ್ಗೆ ದಿಲ್ಲಿಯ ಪೊಲೀಸರೇ ತೀರ್ಮಾನಿಸುತ್ತಾರೆಂದು ಸುಪ್ರೀಂ ಕೋರ್ಟ್ ಹೇಳಿದ ನಂತರ ಈ ಮೆರವಣಿಗೆಯನ್ನು ಕೈ ಬಿಡುವಂತೆ ಪೊಲೀಸರು ರೈತರ ಮೇಲೆ ತೀವ್ರ ಒತ್ತಡ ತಂದರೂ ಅವರು ಅದಕ್ಕೆ ಮಣಿಯಲಿಲ್ಲ. ಹತಾಶ ಮೋದಿ ಮತ್ತು ಉತ್ತರ ಪ್ರದೇಶದ ಯೋಗಿ ಸರಕಾರಗಳು ಈ ಟ್ರಾಕ್ಟರ್‌ಗಳಿಗೆ ಡೀಸೆಲ್ ಹಾಕಬಾರದೆಂದು ನಿರ್ಬಂಧ ಹೇರಿವೆ. ಆದರೂ ರೈತರು ಎಲ್ಲಾ ಸಿದ್ಧತೆ ಮಾಡಿಕೊಂಡು ಮಂಗಳವಾರ ದಿಲ್ಲಿಗೆ ಬರಲಿದ್ದಾರೆ. ಗಣರಾಜ್ಯೋತ್ಸವ ಕಾರ್ಯಕ್ರಮ ಮಾದರಿಯಲ್ಲೇ ಟ್ರಾಕ್ಟರ್ ಪರೇಡ್ ವೇಳೆ ರೈತಾಪಿ ವರ್ಗದ ಸಂಕಷ್ಟಗಳನ್ನು ಬಿಂಬಿಸುವ ವಿವಿಧ ಸ್ತಬ್ಧ್ದ ಚಿತ್ರಗಳ ಮೆರವಣಿಗೆಗೆ ತಯಾರಿಯಾಗಿದೆ. ದಿಲ್ಲಿಯಲ್ಲಿ ನಡೆಯುವ ಈ ಟ್ರ್ಯಾಕ್ಟರ್ ಪರೇಡ್ ಬೆಂಬಲಿಸಿ ದೇಶವ್ಯಾಪಿ ಮಹಾನಗರಗಳಲ್ಲಿ, ಪಟ್ಟಣಗಳಲ್ಲಿ ಕೂಡ ರೈತರ ಟ್ರಾಕ್ಟರ್ ಪರೇಡ್ ನಡೆಯಲಿದೆ. ದಿಲ್ಲಿಯಲ್ಲಿ ನಡೆಯಲಿರುವ ಟ್ರಾಕ್ಟರ್ ಪರೇಡ್ ಬಗ್ಗೆ ದೇಶದ ಪ್ರಮುಖ ಮಾಧ್ಯಮಗಳು ನಿರ್ಲಕ್ಷಿಸಿದ್ದರೂ ವಿದೇಶದ 250ಕ್ಕೂ ಹೆಚ್ಚು ಮಾಧ್ಯಮ ಸಂಸ್ಥೆಗಳ ವರದಿಗಾರರು ಇದರ ವರದಿ ಮಾಡಲು ದಿಲ್ಲಿಗೆ ಬರಲಿದ್ದಾರೆ.

ಮೇಲ್ನೋಟಕ್ಕೆ ಇದು ರೈತರ ಹೋರಾಟವಾಗಿದ್ದರೂ ವಾಸ್ತವವಾಗಿ ಇದು ದೇಶದ ಪ್ರಜಾಪ್ರಭುತ್ವ ಉಳಿವಿನ ಹೋರಾಟವಾಗಿ ಮಾರ್ಪಟ್ಟಿದೆ. ಕಳೆದ ಏಳು ವರ್ಷಗಳಿಂದ ದೇಶದ ಅಧಿಕಾರ ಸೂತ್ರ ಹಿಡಿದವರು ಜನಸಾಮಾನ್ಯರ ಹಿತವನ್ನು ಕಡೆಗಣಿಸಿ, ಜನರ ಹಕ್ಕುಗಳನ್ನು ದಮನ ಮಾಡಿ ನಗ್ನ ಸರ್ವಾಧಿಕಾರದ ಆಡಳಿತ ನಡೆಸುತ್ತಾ ಬಂದಿದ್ದಾರೆ. ದಲಿತ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಕತ್ತು ಹಿಸುಕಲು ಮಸಲತ್ತು ಮಾಡುತ್ತಾ ಬಂದರು. ಕರಾಳ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ), ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ)ಯನ್ನು ಹೇರಿ ಒಂದು ದೊಡ್ಡ ಜನ ಸಮುದಾಯವನ್ನೇ ದೇಶದಿಂದ ಹೊರದಬ್ಬಲು ಯತ್ನಿಸಿದರು. ಕೊರೋನ ಬಂದ ನಂತರವೂ ಇವರ ಧೋರಣೆಗಳಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ. ಸರಕಾರದ ನೀತಿಗಳ ಬಗ್ಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ ಕವಿ ವರವರರಾವ್, ಚಿಂತಕ ಆನಂದ್ ತೇಲ್ತುಂಬ್ಡೆ, ಗೌತಮ್ ನವ್ಲಾಖಾ ಮುಂತಾದ ಇಪ್ಪತ್ತಕ್ಕೂ ಹೆಚ್ಚು ಬುದ್ಧಿ ಜೀವಿಗಳ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸಿ ಜೈಲಿಗೆ ತಳ್ಳಿದರು. ಇವರೆಲ್ಲ ಎಪ್ಪತ್ತು ದಾಟಿದ ವಯೋಮಾನದವರು ಎಂಬ ಕನಿಷ್ಠ ಮಾನವೀಯತೆಯನ್ನೂ ತೋರಿಸಲಿಲ್ಲ. ಇದೀಗ ಇವರನ್ನು ಬಿಡುಗಡೆ ಮಾಡಲು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ ಭಾರತ ಸರಕಾರಕ್ಕೆ ಆಗ್ರಹಿಸಿದೆ. ಹೀಗೆ ಭಾರತದ ಮಾನವ ಹಕ್ಕುಗಳ ಉಲ್ಲಂಘನೆಯ ಕುಖ್ಯಾತಿ ಈಗ ಜಗತ್ತಿನ ಗಮನ ಸೆಳೆದಿದೆ. ಇನ್ನೊಂದು ಕಡೆ ದೇಶದ ಆರ್ಥಿಕತೆ ಹಳ್ಳ ಹಿಡಿದಿದೆ.

ಭಿನ್ನಾಭಿಪ್ರಾಯ, ಟೀಕೆ, ಸಂವಾದಗಳಿಲ್ಲದ ಪ್ರಜಾಪ್ರಭುತ್ವವು ಪ್ರಜಾಪ್ರಭುತ್ವ ಎಂದು ಕರೆಯಿಸಿಕೊಳ್ಳುವುದಿಲ್ಲ. ಪ್ರಧಾನಿ ನರೇಂದ್ರ ಮೋದಿಯವರಿಗೆ ನಿಜವಾಗಿ ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿದ್ದಿದ್ದರೆ ಶಾಂತಿಯುತ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಭೇಟಿ ಮಾಡಿ ಮಾತಾಡಬಹುದಿತ್ತು. ಹೀಗೆ ಭೇಟಿ ಮಾಡಿ ರೈತರ ಸಮಸ್ಯೆಗಳನ್ನು ಆಲಿಸಿದ್ದರೆ ಪರಿಸ್ಥಿತಿ ಇಷ್ಟು ಉಲ್ಬಣಗೊಳ್ಳುತ್ತಿರಲಿಲ್ಲ. ಇದನ್ನೇ ಟೀಕಿಸಿದ ಸಾಹಿತಿ ಹಂಪನಾ ಅವರನ್ನು ಪೊಲೀಸ್ ಠಾಣೆಗೆ ಕರೆಸಿ ವಿಚಾರಿಸುವಷ್ಟು ಪರಿಸ್ಥಿತಿ ಹದಗೆಟ್ಟಿದೆ, ಜನತಂತ್ರದ ದಮನ ಸತ್ರ ನಡೆದಿದೆ. ಇಂತಹ ವಿಚಿತ್ರ ಸನ್ನಿವೇಶದಲ್ಲಿ ದೇಶ ಪ್ರಜಾರಾಜ್ಯೋತ್ಸವವನ್ನು ಆಚರಿಸುತ್ತಿದೆ. ಪ್ರಜೆಗಳ ಹಿತ ರಕ್ಷಿಸದ, ಅವರ ಬಾಯಿಗೆ ಬೀಗ ಹಾಕುವ ದಮನ ನೀತಿ ಪ್ರಜಾಪ್ರಭುತ್ವಕ್ಕೆ ಶೋಭೆ ತರುವುದಿಲ್ಲ.

ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆಯಿಲ್ಲದ ಪಕ್ಷಗಳು, ಶಕ್ತಿಗಳು ಅಧಿಕಾರಕ್ಕೆ ಬಂದಾಗ ಈ ರೀತಿ ಅಪಚಾರವಾಗುವುದು ಸಹಜ. ಆದರೆ ನಮ್ಮ ಜನ ಮೂರ್ಖರಲ್ಲ. ತಾವು ವಂಚನೆಗೊಳಗಾಗಿದ್ದೇವೆ ಎಂದು ಗೊತ್ತಾದರೆ ತಕ್ಕ ಪಾಠ ಕಲಿಸುತ್ತಾರೆ. ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದವರಿಗೂ ಜನ ಪಾಠ ಕಲಿಸಿದ್ದರು.ಅಧಿಕಾರ ಎಂಬುದು ವಿನಯವನ್ನು ತರಬೇಕೇ ಹೊರತು ದುರಹಂಕಾರವನ್ನಲ್ಲ.

ಕೇಂದ್ರ ಸರಕಾರವೇನೋ ರೈತರ ಚಳವಳಿಯನ್ನು ಸ್ಥಗಿತಗೊಳಿಸಲು ಮೂರು ಕೃಷಿ ಕಾಯ್ದೆಗಳನ್ನು ಹದಿನೆಂಟು ತಿಂಗಳುಗಳ ಕಾಲ ಅಮಾನತಿನಲ್ಲಿಡಲಾಗುವುದು ಎಂದು ಮಾತಿನ ಭರವಸೆ ನೀಡಿದೆ. ಆದರೆ ಅದನ್ನು ರೈತರು ಒಪ್ಪಿಲ್ಲ. ರಾಷ್ಟ್ರಪತಿ ಸಹಿ ಹಾಕಿದ ಕಾಯ್ದೆಗಳನ್ನು ಅಮಾನತಿನಲ್ಲಿಡಲು ಬರುವುದಿಲ್ಲ. ಅವುಗಳನ್ನು ಜಾರಿಗೊಳಿಸಬೇಕು ಇಲ್ಲವೇ ರದ್ದುಗೊಳಿಸಬೇಕು. ಸರಕಾರ ಈ ಪ್ರಶ್ನೆಯಲ್ಲಿ ಒಣ ಪ್ರತಿಷ್ಠೆಯನ್ನು ಬಿಟ್ಟು ಈ ಕಾಯ್ದೆಗಳನ್ನು ರದ್ದುಗೊಳಿಸುವುದು ಸೂಕ್ತವಾಗಿದೆ.
ಪ್ರಜಾಪ್ರಭುತ್ವದಲ್ಲಿ ಯಾವುದೇ ಕಾಯ್ದೆಗಳನ್ನು ಮಾಡುವುದು ಜನರಿಗಾಗಿ. ರೈತರ ಹಿತಕ್ಕಾಗಿ ಮಾಡಿರುವುದಾಗಿ ಹೇಳುತ್ತಿರುವ ಕಾಯ್ದೆಗಳ ಬಗ್ಗೆ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಮಾಡಿರುವುದರಿಂದ ಇಷ್ಟು ಪ್ರಬಲ ವಿರೋಧ ಬರುತ್ತಿದೆ. ತಮಗೆ ಯಾವ ಕಾನೂನು ಪೂರಕವಾಗಿದೆ ಎಂಬುದನ್ನು ರೈತರೇ ತೀರ್ಮಾನಿಸಲಿ. ಸರಕಾರ ತಕ್ಷಣ ಈ ಕಾಯ್ದೆಗಳನ್ನು ರದ್ದುಪಡಿಸಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News